Saturday, 27th July 2024

ಕೊಲ್ಹಾರ ತಾಲೂಕಿನಾದ್ಯಂತ ಶಾಂತಿಯುತ ಮತದಾನ

ಕೊಲ್ಹಾರ: ಲೋಕಸಭಾ ಚುನಾವಣೆಯ ಎರಡನೆಯ ಹಂತದ ಮತದಾನ ಪ್ರಕ್ರಿಯೆ ಪಟ್ಟಣ ಸಹಿತ ತಾಲೂಕಿನಾದ್ಯಂತ ಚುರುಕಿನಿಂದ ನಡೆಯಿತು.

ಮುಂಜಾನೆಯಿಂದಲೇ ಮತದಾರರು ಉತ್ಸಾಹದಿಂದ ಮತದಾನ ಕೇಂದ್ರಗಳತ್ತ ಧಾವಿಸಿ ಮತದಾನ ಮಾಡುತ್ತಿರುವುದು ಕಂಡುಬಂದಿತು, ಮಧ್ಯಾಹ್ನದ ಹೊತ್ತಿಗೆ ಅಲ್ಪಪ್ರಮಾಣದಲ್ಲಿ ಮತದಾನ ತಗ್ಗಿ ದಂತೆ ಕಂಡುಬಂದರು ಸಾಯಂಕಾಲ ಮತ್ತೆ ಮತದಾನ ಪ್ರಕ್ರಿಯೆಯಲ್ಲಿ ಏರಿಕೆ ಕಂಡುಬಂದಿತು.

ನೆರಳನ ವ್ಯವಸ್ಥೆ: ಬಿರುಬಿಸಿಲಿನ ಕಾರಣ ಪಟ್ಟಣದ ಕೆಲ ಮತದಾನ ಕೇಂದ್ರಗಳ ಮುಂಭಾಗ ಪೆಂಡಾಲ್ ಹಾಕಿಸುವ ಮೂಲಕ ತಾಲೂಕ ಆಡಳಿತ ಮತದಾರರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಿತ್ತು ಮತದಾರರು ನೆರಳಿನಲ್ಲಿ ನಿಂತು ಮತದಾನ ಮಾಡಿದರು.

ವೀಲ್ ಚೇರ್ ವ್ಯವಸ್ಥೆ: ಪಟ್ಟಣದ ಬಹುತೇಕ ಮತಗಟ್ಟೆಗಳಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಮತದಾನ ಮಾಡಲು ಆಗಮಿಸಿದ ವೃದ್ಧರನ್ನು, ವಿಕಲಚೇತರನ್ನು ವೀಲ್ ಚೇರನಲ್ಲಿ ಮತದಾನ ಕೇಂದ್ರದಲ್ಲಿ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿತು.

ಸಖಿ ಮತಗಟ್ಟೆ: ಚುನಾವಣೆಯಲ್ಲಿ ಮಹಿಳಾ ಮತದಾನ ಹೆಚ್ಚಿಸುವ ಉದ್ದೇಶದಿಂದ ಕೆಲ ಮತದಾನ ಕೇಂದ್ರದ ಮುಂಭಾಗ ಗುಲಾಬಿ ಬಣ್ಣದ ಅಲಂಕಾ ರಿಕ ವಸ್ತುಗಳಿಂದ ಸಿಂಗರಿಸಿರುವ ‘ಸಖಿ’ ಮತಗಟ್ಟೆಗಳು ಗಮನಸೆಳೆದವು.

ಬಿಕೊ ಎನ್ನುತ್ತಿದ್ದ ಮತದಾರರ ಸಹಾಯ ಕೇಂದ್ರ: ಮತದಾರರಿಗೆ ಸಹಾಯಕ್ಕಾಗಿ ಸ್ಥಾಪಿಸಿದ್ದ ಮತದಾರರ ಸಹಾಯ ಕೇಂದ್ರಗಳ ಕೆಲವೆಡೆ ಮುಂಜಾನೆ 9 ಗಂಟೆಯಾಗುತ್ತಾ ಬಂದಿದ್ದರು ಕೂಡ ಸಿಬ್ಬಂದಿಗಳಿಲ್ಲದೆ ಬಿಕೊ ಎನ್ನುತ್ತಿದ್ದವು.

ಗೊಂದಲ: ಪಟ್ಟಣದ ಮತಗಟ್ಟೆ ಸಂಖ್ಯೆ 165 ರಲ್ಲಿ ಯುವಕನೂರ್ವ ಮತದಾನ ಮಾಡಲು ಆಗಮಿಸಿದ ಸಂದರ್ಭ ನೀವು ಮತದಾನ ಮಾಡಿದ್ದಿರಿ, ನಿಮ್ಮ ಹೆಸರಿನಲ್ಲಿ ಇಗಾಗಲೇ ಮತದಾನ ಆಗಿದೆ ಎಂದ ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿಗಳ ವಿರುದ್ಧ ನಾನು ಮತದಾನ ಮಾಡದೆ ಅದು ಹೇಗೆ ಮತದಾನ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿತು.

ಪಟ್ಟಣ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಯಗಳಲ್ಲಿ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ವಿಡಿಯೋ ರೆಕಾರ್ಡಿಂಗ್ ಪ್ರಕ್ರಿಯೆ ನಡೆಯಿತು. ಬರುವ ಹೋಗವ ಪ್ರತಿಯೊಬ್ಬರ ಚಲನವಲನ ಗಳ ದಾಖಲು ಮಾಡುತ್ತಿರುವುದು ಕಂಡುಬಂದಿತು.

ತಾಲ್ಲೂಕಿನ ಮುಳವಾಡ ಗ್ರಾಮದಲ್ಲಿ ಯುವನೂರ್ವ ಮತದಾನ ಕೇಂದ್ರದ ಒಳಗಡೆ ಮೊಬೈಲ್ ತೆಗೆದುಕೊಂಡು ಹೋಗುತ್ತಿರುವುದನ್ನ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ ಸಿಬ್ಬಂದಿ ಗಮನಿಸಿ ಮೊಬೈಲ್ ಮತದಾನ ಕೇಂದ್ರದ ಒಳಗಡೆ ತರದಂತೆ ಎಚ್ಚರಿಕೆ ನೀಡಿ ಮರಳಿ ಕಳುಹಿಸಿದ ಘಟನೆ ಜರುಗಿತು.

ಕೈಕೊಟ್ಟ ಮತಯಂತ್ರ: ತಾಲೂಕಿನ ಕೂಡಗಿ ಗ್ರಾಮದ ಮತಗಟ್ಟೆ ಸಂಖ್ಯೆ 104 ರ ಮತಯಂತ್ರ ಮತದಾನದ ಮದ್ಯ ಏಕಾಏಕಿ ಕೈಕೊಟ್ಟಿತು. ಕೂಡಲೇ ಕರ್ತವ್ಯ ನಿರತ ಅಧಿಕಾರಿಗಳು ಮತಯಂತ್ರ ಸರಿಪಡಿಸಲು ಪ್ರಯತ್ನಿಸಿದರು ಇಪ್ಪತ್ತು ನಿಮಿಷಗಳಕಾಲ ಮತದಾನ ಸ್ಥಗಿತಗೊಂಡು ಮರಳಿ ಮತದಾನ ಪ್ರಾರಂಭಗೊಂಡಿತು.

ಒಟ್ಟಾರೆ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿ ತಾಲ್ಲೂಕಿನಾದ್ಯಂತ ವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆ ಜರುಗಿತು.

Leave a Reply

Your email address will not be published. Required fields are marked *

error: Content is protected !!