Tuesday, 7th January 2025

Koratagere News: ಶಾಲಾ ಪ್ರವಾಸದ ವೇಳೆ ಅಪಘಾತ; ಇಬ್ಬರು ಶಿಕ್ಷಕರು ಸಸ್ಪೆಂಡ್

ಕೊರಟಗೆರೆ: ಟಾಟಾ ಏಸ್ ಪಲ್ಟಿಯಾಗಿ 15 ಮಕ್ಕಳಿಗೆ ಗಾಯವಾಗಿದ್ದ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ ತಾಲೂಕಿನ (Koratagere News) ಚಿಂಪುಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕನನ್ನು ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಿಂಪುಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.3 ರಂದು 99 ಮಕ್ಕಳನ್ನು ಹೊರ ಸಂಚಾರ ಎಂದು ಮಕ್ಕಳನ್ನು ದೊಡ್ಡ ಸಾಗ್ಗೆರೆ ಹತ್ತಿರ ಇರುವ ಮಿನಿ ಲಾಲ್ ಬಾಗ್‌ಗೆ ಕರೆದುಕೊಂಡು ಹೋಗಿ ವಾಪಸ್ ವೇಳೆ ಸಂದರ್ಭದಲ್ಲಿ ಟಾಟಾ ಏಸ್ ವಾಹನ ಪಲ್ಟಿ ಹೊಡೆದ ಪರಿಣಾಮ ಮಕ್ಕಳಿಗೆ ಗಾಯಗಳಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು.

ಸುಮಾರು 15 ಮಕ್ಕಳಿಗೆ ಗಾಯಗಳಾಗಿ ಆಸ್ಪತ್ರೆ ಸೇರಿಸಿದ್ದಾರೆ. ಹೊರ ಸಂಚಾರಕ್ಕೆ ಶಿಕ್ಷಣ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಇರುವ ಕಾರಣ ಕ್ಷೇತ್ರ ಶಿಕ್ಷಣಾಧಿಕಾರಿಯಾದ ನಟರಾಜು ಅವರು ಕರ್ನಾಟಕ ಸಿವಿಲ್ ಸೇವಾ (ವರ್ಗಿಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಾಮವಳಿಗಳು 1957ರ ನಿಯಮ 10 (1) ಎ ರನ್ವಯ ಮುಖ್ಯಶಿಕ್ಷಕ ಹನುಮಂತರಾಯಪ್ಪ ಹಾಗೂ ಅನಂತರಾಮು ಅವರನ್ನು ಶಿಕ್ಷಣ ಇಲಾಖೆಯ ನಿಯಮಾನುಸಾರ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Mandya News: ವಿಚಾರಣೆಗೆ ಕರೆದ ಎಎಸ್‌ಐ ಮೇಲೆ ನಡುರಸ್ತೆಯಲ್ಲೇ ಹಲ್ಲೆ ನಡೆಸಿದ ಆರೋಪಿ!

ಏನಿದು ಘಟನೆ?
ಹೊರ ಸಂಚಾರ ಮುಗಿಸಿಕೊಂಡು ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದ ಘಟನೆ (Koratagere News) ಮಾವತ್ತೂರಿನ ಸಮೀಪ ಗೌಡನ ಕುಂಟೆ ಗೇಟ್ ಬಳಿ ಶುಕ್ರವಾರ ನಡೆದಿತ್ತು. ಗಾಯಾಳು ಮಕ್ಕಳಿಗೆ ದೊಡ್ಡ ಸಾಗ್ಗೆರೆ ಆಸ್ಪತ್ರೆ ಹಾಗೂ ಕೊರಟಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿತ್ತು.

ಮಕ್ಕಳನ್ನು ಶೈಕ್ಷಣಿಕ ಪ್ರವಾಸದಿಂದ ವಾಪಸ್ ಕರೆದೊಯ್ಯುತ್ತಿದ್ದ ಟಾಟಾ ಏಸ್‌‌ ವಾಹನ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ 15ಕ್ಕೂ ಹೆಚ್ಚು ಮಕ್ಕಳಿಗೆ ತಲೆ, ಕೈಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಕೋಳಾಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಯೋಗೇಶ್ ಮತ್ತು ತಂಡ ಭೇಟಿ ನೀಡಿ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದ್ದರು. ಸ್ಥಳಕ್ಕೆ ತಹಸೀಲ್ದಾರ್ ಮಂಜುನಾಥ್, ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಕೊಳಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

Leave a Reply

Your email address will not be published. Required fields are marked *