Wednesday, 1st January 2025

KPSC Exam: ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಎಡವಟ್ಟು; ವಿಜಯಪುರದ ಪರೀಕ್ಷಾ ಕೇಂದ್ರಗಳಲ್ಲಿ ಒಎಂಅರ್ ಶೀಟ್‌ನಲ್ಲಿ ನೋಂದಣಿ ಸಂಖ್ಯೆ ಅದಲು ಬದಲು

KPSC Exam

ವಿಜಯಪುರ: ಕರ್ನಾಟಕ ಲೋಕಸೇವಾ ಆಯೋಗವು (KPSC) ಭಾನುವಾರ (ಡಿ. 29) ಕೆಎಎಸ್‌-ಗೆಜೆಟೆಡ್‌ ಪ್ರೊಬೇಷನರ್ (Gazetted Probationers) ಹುದ್ದೆಗಳ ಪೂರ್ವಭಾವಿ (Prelims) ಮರುಪರೀಕ್ಷೆ ನಡೆಸುತ್ತಿದೆ (KPSC Exam). ಈ ಮಧ್ಯೆ ವಿಜಯಪುರ ನಗರದ ಪರೀಕ್ಷಾ ಕೇಂದ್ರಗಳಲ್ಲಿ ಯಡವಟ್ಟು ನಡೆದಿದೆ. ಒಎಂಅರ್ ಶೀಟ್‌ನಲ್ಲಿ ನೋಂದಣಿ ಸಂಖ್ಯೆ ಅದಲು ಬದಲಾಗಿ ಸಮಸ್ಯೆ ಎದುರಾಗಿದೆ.

ನಗರದ ಸಿಕ್ಯಾಬ್ ಸಂಸ್ಥೆಯ 2 ಕೇಂದ್ರಗಳು, ಮರಾಠಿ ಮಹಾ ವಿದ್ಯಾಲಯ, ವಿಕಾಸ ವಿದ್ಯಾಲಯದಲ್ಲಿನ 4 ಕೇಂದ್ರಗಳಲ್ಲಿ ಒಎಂಆರ್ ನಂಬರ್ ಹಾಗೂ ನೋಂದಣಿ ನಂಬರ್ ಅದಲು-ಬದಲಾಗಿ ಸಮಸ್ಯೆ ಎದುರಾಗಿದೆ. ಸಮಸ್ಯೆಯಾದ ಪರೀಕ್ಷಾ ಕೇಂದ್ರಗಳಿಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿಲ್ಲಾ ಪಂಚಾಯತಿ ಸಿಇಒ ರಿಶಿ ಆನಂದ ಭೇಟಿ ನೀಡಿ ಪರೀಕ್ಷಾರ್ಥಿಗಳ ಸಮಸ್ಯೆ ಆಲಿಸಿದರು.

ಕೆಪಿಎಸ್‌ಸಿ ಅಧಿಕಾರಿಗಳ ಜತೆಗೆ ಮಾತನಾಡಿದ ಸೋಮಲಿಂಗ ಗೆಣ್ಣೂರ ಹಾಗೂ ರಿಶಿ ಆನಂದ ಅವರು, ಪರೀಕ್ಷಾರ್ಥಿಗಳ ನೋಂದಣಿ ನಂಬರ್ ಅನ್ನು ಒಎಂಆರ್ ಶೀಟ್‌ನಲ್ಲಿ ಪ್ರತ್ಯೇಕವಾಗಿ ನೋಂದಾಯಿಸಿಲು ಸಲಹೆ ನೀಡಿದರು. ಬಳಿಕ ಕೆಪಿಎಸ್‌ಸಿ ಅಧಿಕಾರಿಗಳು ಒಎಂಆರ್ ಶೀಟ್‌ನಲ್ಲಿ ಪರೀಕ್ಷಾರ್ಥಿಗಳ ನಂಬರ್ ನಮೂದಿಸಲು ಸೂಚಿಸಿದರು.

ಗೊಂದಲದಿಂದ ಪರೀಕ್ಷೆ ಎಷ್ಟು ವಿಳಂಬವಾಗಿದೆಯೋ ಅಷ್ಟು ಹೆಚ್ಚುವರಿ ಸಮಯ ನೀಡುವುದಾಗಿ ಅಧಿಕಾರಿಗಳು ತಿಳಿಸಿದರು. ಕೊನೆಗೆ ಅಭ್ಯರ್ಥಿಗಳ ಸಮಸ್ಯೆ ಬಗೆಹರಿಸಿ ಪರೀಕ್ಷೆ ಬರೆಯುವಂತೆ ಮನವೊಲಿಸಲಾಯಿತು. ಅಧಿಕಾರಿಗಳ ಭರವಸೆಗೆ ಒಪ್ಪಿ ಕೊನೆಗೆ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ತೆರಳಿದರು. ವಿಜಯಪುರ ಜಿಲ್ಲೆಯಾದ್ಯಂತ 32 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, 12,741 ಅಭ್ಯರ್ಥಿಗಳು ಹಾಜರಾಗಿದ್ದಾರೆ. 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ದಿನಾಂಕ ಫೆ. 26ರಂದು ಅಧಿಸೂಚನೆ ಹೊರಡಿಸಲಾಗಿತ್ತು.

3 ಹಂತದ ಪರೀಕ್ಷೆಗಳು

ಹಂತ 1 – ಪೂರ್ವಭಾವಿ ಪರೀಕ್ಷೆ : 2 ಪತ್ರಿಕೆಗಳಿದ್ದು, 400 ಅಂಕಗಳಿಗೆ ಪರೀಕ್ಷೆ
ಹಂತ 2 – ಮುಖ್ಯ ಪರೀಕ್ಷೆ: ಕಡ್ಡಾಯ ಪತ್ರಿಕೆಗಳು 2, ಐಚ್ಛಿಕ ಪತ್ರಿಕೆಗಳು 5.
ಹಂತ 3 – ವ್ಯಕ್ತಿತ್ವ ಪರೀಕ್ಷೆ : 50 ಅಂಕಗಳಿಗೆ

ಈ ಸುದ್ದಿಯನ್ನೂ ಓದಿ: KPSC Prelims Re-Exam: 384 ಕೆಎಎಸ್‌ ಹುದ್ದೆಗಳಿಗೆ ಡಿ.29 ಕ್ಕೆ ಪೂರ್ವಭಾವಿ ಮರುಪರೀಕ್ಷೆ- ಕೆಪಿಎಸ್‌ಸಿ ಅಧಿಕೃತ ಪ್ರಕಟಣೆ