Monday, 13th January 2025

KPSC Group B Exam: ಕೆಪಿಎಸ್‌ಸಿ ಗ್ರೂಪ್‌ ಬಿ ಹುದ್ದೆಗಳ ಪರೀಕ್ಷೆ ಹಾಲ್‌ ಟಿಕೆಟ್‌ ಬಿಡುಗಡೆ; ಕನ್ನಡ ಭಾಷಾ ಪರೀಕ್ಷೆ ಮುಂದೂಡಿಕೆ

KPSC Group B Exam

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಗ್ರೂಪ್‌ ಬಿ-277 (ಆರ್‌ಪಿಸಿ) ವೃಂದದ ಹುದ್ದೆಗಳಿಗೆ ಜ.19 ಮತ್ತು ಜ.25ರಂದು ನಿಗದಿಯಾಗಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇನ್ನು ಗ್ರೂಪ್‌ ಬಿ ಹುದ್ದೆಗಳ (KPSC Group B Exam) ನೇಮಕಾತಿಗೆ ಜ.18ಕ್ಕೆ ನಿಗದಿಯಾಗಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಕೆಪಿಎಸ್‌ಸಿ ಮುಂದೂಡಿದೆ.

ಈ ಬಗ್ಗೆ ಕೆಪಿಎಸ್‌ಸಿ ಪ್ರಕಟಣೆ ಹೊರಡಿಸಿದೆ. ವಿವಿಧ ಇಲಾಖೆಗಳಲ್ಲಿನ ಗ್ರೂಪ್ ʼಬಿʼ-277 (ಆರ್.ಪಿ.ಸಿ) ವೃಂದದ ಹುದ್ದೆಗಳಿಗೆ ಪತ್ರಿಕೆ-1: ಸಾಮಾನ್ಯ ಪತ್ರಿಕೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಜ.19-01-2025 ರಂದು ಮತ್ತು ಪತ್ರಿಕೆ-2: ನಿರ್ದಿಷ್ಟ ಪತ್ರಿಕೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಜ.25ರಂದು ನಡೆಸಲಾಗುತ್ತಿದ್ದು, ಈ ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ಇಂದಿನಿಂದ ಕೆಪಿಎಸ್‌ ವೆಬ್‌ಸೈಟ್‌ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕನ್ನಡ ಭಾಷಾ ಪರೀಕ್ಷೆ ಮುಂದೂಡಿಕೆ ಯಾಕೆ?
ವಿವಿಧ ಇಲಾಖೆಗಳಲ್ಲಿನ ಗ್ರೂಪ್ “ಬಿ” – 277 (ಆರ್.ಪಿ.ಸಿ) ವೃಂದದ ಹುದ್ದೆಗಳಿಗೆ ಜ.18ರಂದು ಕನ್ನಡ ಭಾಷಾ ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಇತ್ತೀಚೆಗೆ ನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಗೆ ಲಕ್ಷಾಂತರ ಅಭ್ಯರ್ಥಿಗಳು ಹಾಜರಾಗಿದ್ದು, ಹಲವಾರು ಅಭ್ಯರ್ಥಿಗಳು ಪ್ರಸ್ತುತ ಗ್ರೂಪ್‌ ಬಿ ಪರೀಕ್ಷೆಗಳಿಗೂ ಅಭ್ಯರ್ಥಿಗಳಾಗಿರುತ್ತಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಯ ಫಲಿತಾಂಶವು ಶೀಘ್ರದಲ್ಲಿಯೇ ಪ್ರಕಟವಾಗುವ ಸಾಧ್ಯತೆ ಇದ್ದು, ಅದರಲ್ಲಿ ಹಾಜರಾದ ಅಭ್ಯರ್ಥಿಗಳು ಮತ್ತೊಮ್ಮೆ ಕನ್ನಡ ಭಾಷಾ ಪರೀಕ್ಷೆಯನ್ನು ಬರೆಯುವುದರಿಂದ ಆಯೋಗಕ್ಕೆ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹೆಚ್ಚಿನ ಹೊರೆಯಾಗುವುದಲ್ಲದೆ ಅಭ್ಯರ್ಥಿಗಳಿಗೂ ಸಹ ಹೊರೆಯಾಗಲಿದೆ. ಆದ್ದರಿಂದ ಜ.18ರಂದು ನಿಗದಿಯಾಗಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಮಾತ್ರ ಮುಂದೂಡಲಾಗಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಯ ಫಲಿತಾಂಶ ಪ್ರಕಟವಾದ ನಂತರ ಪರಿಷ್ಕೃತ ದಿನಾಂಕವನ್ನು ನಿಗದಿಪಡಿಸಲಾಗುವುದು.

ಉಳಿದಂತೆ, ಗ್ರೂಪ್‌ ಬಿ ಪರೀಕ್ಷೆಯ ಸಾಮಾನ್ಯ ಪತ್ರಿಕೆ ಮತ್ತು ನಿರ್ದಿಷ್ಟ ಪತ್ರಿಕೆಗಳ ಪರೀಕ್ಷೆಗಳನ್ನು ಈಗಾಗಲೇ ನಿಗದಿಪಡಿಸಿರುವ ವೇಳಾಪಟ್ಟಿಯಂತೆಯೇ ನಡೆಸಲಾಗುವುದು. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕರ್ನಾಟಕ ಲೋಕ ಸೇವಾ ಆಯೋಗ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Job Guide: ಇಂಡಿಯನ್ ಮರ್ಚೆಂಟ್ ನೇವಿಯಲ್ಲಿದೆ 1,800 ಹುದ್ದೆ; 10, 12ನೇ ತರಗತಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಿ

Leave a Reply

Your email address will not be published. Required fields are marked *