Friday, 10th January 2025

KSDL Officer : ಮೇಲಧಿಕಾರಿಗಳ ಕಿರುಕುಳ: ಕೈಯಲ್ಲಿ ಡೆತ್‌ ನೋಟ್‌ ಹಿಡಿದುಕೊಂಡೇ ಕೆಎಸ್‌ಡಿಎಲ್‌ ಅಧಿಕಾರಿ ಆತ್ಮಹತ್ಯೆ!

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಿಗಳ ಆತ್ಮಹತ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧಿಕಾರಿ(KSDL Officer) ಅಮೃತ್‌ ಶಿರಿಯೂರ್‌(Amruth Shiriyuru) ಎಂಬುವವರು ಕೈಯಲ್ಲಿ ಡೆತ್‌ನೋಟ್(Death Note) ಹಿಡಿದುಕೊಂಡು‌ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಪ್ರಕರಣ ಇಂದು ಬೆಳಕಿಗೆ ಬಂದಿದೆ.

ಅಮೃತ್‌ ಶಿರಿಯೂರ್‌(40) ಎಂಬ ವ್ಯಕ್ತಿ ಕೆಎಸ್‌ಡಿಎಲ್‌ ಮೆಟಿರಿಯಲ್‌ ವಿಭಾಗದಲ್ಲಿ ಹಿರಿಯ ಅಧಿಕಾರಿಗಳು ವಿಪರೀತ ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದರ ಜತೆಗೆ ತಂದೆಗೆ ಒಳ್ಳೆಯ ಮಗ ಆಗಲಿಲ್ಲ. ಹೆಂಡತಿಗೆ ಒಳ್ಳೆಯ ಗಂಡನೂ ಆಗಲಿಲ್ಲ ಎಂದು ಉಲ್ಲೇಖಿಸಿರುವ ಅಮೃತ್‌ ಶಿರಿಯೂರ್‌ ಅವರು, ಆತ್ಮಹತ್ಯೆಗೆ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಪತ್ರದಲ್ಲಿ ಬರೆದಿದ್ದಾರೆ. ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ. ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮೃತ್ ಶಿರಿಯೂರ್ 2019ರಲ್ಲಿ ಎರಡನೇ ವಿವಾಹವಾಗಿದ್ದರು. ಎರಡನೇ ವಿವಾಹವಾಗಿದ್ದರೂ ಪತಿ-ಪತ್ನಿ ನಡುವೆ ಪ್ರತಿದಿನ ಜಗಳವಾಗುತ್ತಿತ್ತು. ಕೌಟುಂಬಿಕ ಕಲಹಗಳಿದ್ದವು. ಮೊದಲ ಮದುವೆಯ ಡಿವೋರ್ಸ್ ವಿಚಾರವಾಗಿಯೂ ಆಗಾಗ್ಗೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಅಮೃತ್ ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ನಾನು ತಂದೆ-ತಾಯಿಗೆ ಒಳ್ಳೆಯ ಮಗನಾಗಲಿಲ್ಲ, ಪತ್ನಿಗೆ ಒಳ್ಳೆಯ ಪತಿಯೂ ಆಗಲಿಲ್ಲ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟಿದ್ದಾರೆ. ಅಮೃತ್ ಶಿರಿಯೂರ್ ತಮ್ಮ ಬಾಡಿಗೆ ಮನೆಯಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾರೆ. ಎರಡು ದಿನಗಳಿಂದ ಮನೆಯಿಂದ ಆಚೆ ಬಾರದ ಕಾರಣಕ್ಕೆ ಮನೆಯ ಮಾಲೀಕರು ಮನೆಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಮಹಾಲಕ್ಷ್ಮೀ ಠಾಣೆ ಪೊಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು.

ಆತ್ಮಹತ್ಯೆಗೆ ಯತ್ನ; ನೇಣು ಕುಣಿಕೆ ತುಂಡಾಗಿ ಸಾವು

ಉಡುಪಿ ಜಿಲ್ಲೆಯ ಮಣಿಪಾಲದ 80 ಬಡಗುಬೆಟ್ಟು ಗ್ರಾಮದ ನವಗ್ರಹ ಕಾಲೋನಿಯಲ್ಲಿ ಮಿಲ್ರಾಯ್( 55) ಎಂಬ ವ್ಯಕ್ತಿ ಮನೆಯ ಮೊದಲ ಅಂತಸ್ತಿನ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಆದರೆ ನೇಣು ಕುಣಿಕೆಯಲ್ಲಿ ನರಳಾಡುವ ವೇಳೆ ನಿಯಂತ್ರಣ ಸಿಗದೆ ಹಗ್ಗ ತುಂಡಾಗಿ 20 ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿರುವುದು ತಿಳಿದು ಬಂದಿದೆ.

ಇದರಿಂದ ಆತ್ಮಹತ್ಯೆ ಪ್ರಯತ್ನ ವಿಫಲವಾದರೂ ಸಾವು ಮಾತ್ರ ಆತನನ್ನು ಬಿಡಲೇ ಇಲ್ಲ.ನೇಣು ಕುಣಿಕೆ ಕಟ್ಟಾಗಿ ಈತ 20 ಅಡಿಗೂ ಹೆಚ್ಚು ಎತ್ತರದಿಂದ ಕೆಳಗೆ ಬಿದ್ದಿದ್ದಾನೆ. ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೆ ಮೆಲ್ರಾಯ್‌ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಇನ್ನು ಈತ 2018ರಲ್ಲೇ ತನ್ನ ಮರಣದ ನಂತರ ಅಂಗಾಂಗ ದಾನ ಮಾಡುವುದಾಗಿಯೂ ನಿರ್ಧರಿಸಿದ್ದ ಎಂಬ ಮಾಹಿತಿಯಿದೆ.

ಈ ಸುದ್ದಿಯನ್ನೂ ಓದಿ:Viral News: ಕೊರಿಯಾ ಪಾಪ್‌ ತಾರೆಯರ ಭೇಟಿಗೆ ಹಣ ಹೊಂದಿಸಲು ಖತರ್ನಾಕ್ ಬಾಲಕಿಯರು ಮಾಡಿದ್ದೇನು ಗೊತ್ತಾ? ಪೊಲೀಸರೇ ಶಾಕ್‌