Monday, 6th January 2025

KSRTC news: ರಾಜ್ಯದ ಹೆಮ್ಮೆಯ ಕೆಎಸ್‌ಆರ್‌ಟಿಸಿಗೆ 9 ರಾಷ್ಟ್ರೀಯ ಪ್ರಶಸ್ತಿ!

ksrtc awards

ಬೆಂಗಳೂರು: ರಾಜ್ಯದೊಳಗೆ ಹಾಗೂ ಅಂತಾರಾಜ್ಯ ಪ್ರಯಾಣಿಕರಿಗೆ ದಕ್ಷ ಸಾರಿಗೆ ಸೇವೆ ನೀಡುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (KSRTC news) ರಾಷ್ಟ್ರ ಮಟ್ಟದಲ್ಲಿ 9 ಪ್ರಶಸ್ತಿಗಳು (National Awards) ಲಭ್ಯವಾಗಿವೆ. ಕೆಎಸ್‌ಆರ್‌ಟಿಸಿಯ ದಕ್ಷತೆ, ಸಮರ್ಪಕ ಸೇವೆ, ಹೊಸ ಉಪಕ್ರಮಗಳು ಇತರ ರಾಜ್ಯಗಳಿಗೂ ಮಾದರಿಯಾಗಿವೆ ಎಂದು ಪ್ರಶಂಸೆ ಪಡೆದಿವೆ.

ಈ ಪ್ರಶಸ್ತಿಗಳನ್ನು ವಿವಿಧ ಮಹಾನಗರಗಳಲ್ಲಿ ಪ್ರದಾನ ಮಾಡಲಾಗಿದೆ ಎಂದು ನಿಗಮ ಬುಧವಾರ ಮಾಹಿತಿ ನೀಡಿದೆ. ಸಂಸ್ಥೆಗೆ 6 AdWorld Showdown ಚಿನ್ನದ ಪ್ರಶಸ್ತಿ, 2 Grow Care India ಹಾಗೂ 1 PRSI ರಾಷ್ಟ್ರೀಯ ಪ್ರಶಸ್ತಿ-2024 ಅನ್ನು ನವದೆಹಲಿ, ಗೋವಾ ಮತ್ತು ರಾಯಪುರದಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿಗಳ ವಿವರ ಇಲ್ಲಿದೆ.

AdWorld Showdown ಪ್ರಶಸ್ತಿಗಳ ವಿವರ:

  • ಅಶ್ವಮೇಧ ಕ್ಲಾಸಿಕ್ ಬಸ್ಸುಗಳ ಪರಿಚಯದಿಂದ ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಉಪಕ್ರಮ ವಿಭಾಗದಲ್ಲಿ ಪ್ರಶಸ್ತಿ.
  • ಅಂಬಾರಿ ಉತ್ಸವ ಬಸ್‌ಗಳಿಂದ ಅತ್ಯುತ್ತಮ ಬ್ರಾಂಡ್ ಅನುಭವ ವಿಭಾಗದಲ್ಲಿ ಪ್ರಶಸ್ತಿ ಬಂದಿದೆ.
  • ಅಶ್ವಮೇಧ ಕ್ಲಾಸಿಕ್ ಬಸ್ಸುಗಳು: ಅತ್ಯುತ್ತಮ ಕಾರ್ಪೊರೇಟ್ ಸಂವಹನ ಹಾಗೂ ನಿರ್ವಹಣೆ
  • ಪಲ್ಲಕ್ಕಿ ಬಸ್ಸುಗಳ ಅತ್ಯುತ್ತಮ ಗ್ರಾಹಕ ಸ್ವೀಕೃತಿ
  • ಪ್ರತಿಷ್ಠಿತ ಬಸ್ಸು ಸೇವೆಗಳ ಬ್ರಾಂಡಿಂಗ್: ಅತ್ಯುತ್ತಮ ಸಾರ್ವಜನಿಕ ಸಂಪರ್ಕ
  • ಅಶ್ವಮೇಧ ಕ್ಲಾಸಿಕ್ ಬಸ್ಸುಗಳು: ವರ್ಷದ ಅತ್ಯುತ್ತಮ ಬ್ರ್ಯಾಂಡ್

ಅತ್ಯುತ್ತಮ ಪರಿಸರ ನಿರ್ವಹಣೆ

ನಿಗಮವು ಅತ್ಯುತ್ತಮ ಪರಿಸರ ನಿರ್ವಹಣೆ ಹಾಗೂ ವಿನೂತನ ಮಾನವ ಸಂಪನ್ಮೂಲ ಯೋಜನೆಗಳ ಅನುಷ್ಟಾನಕ್ಕಾಗಿ ಗ್ರೋ ಕೇರ್ ಇಂಡಿಯಾ ಪ್ರಶಸ್ತಿಯ ಎರಡು ವಿಭಾಗಗಳಲ್ಲಿ ಪುರಸ್ಕಾರ ಪಡೆದಿದೆ. ಅದೇ ರೀತಿ PRSI ರಾಷ್ಟ್ರೀಯ ಪ್ರಶಸ್ತಿಯನ್ನು ನಿಗಮಕ್ಕೆ ಕಾರ್ಪೋರೇಟ್ ಚಿತ್ರ ವಿಭಾಗದಲ್ಲಿ ನೀಡಿ ಗೌರವಿಸಲಾಗಿದೆ. AdWorld ಪ್ರಶಸ್ತಿಗಳನ್ನು ನವದೆಹಲಿಯಲ್ಲಿ, ಗ್ರೋ ಕೇರ್ ಇಂಡಿಯಾ ಪ್ರಶಸ್ತಿಗಳನ್ನು ಗೋವಾದಲ್ಲಿ ಹಾಗೂ ಪಿ.ಆರ್.ಎಸ್.ಐ ಪ್ರಶಸ್ತಿಯನ್ನು ರಾಯಪುರದಲ್ಲಿ ಪ್ರದಾನ ಮಾಡಲಾಯಿತು.

ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲೂ ಪ್ರಶಸ್ತಿಗಳ ಮಳೆ

2024ರ ಡಿಸೆಂಬರ್‌ನಲ್ಲಿ ನಿಗಮಕ್ಕೆ ASRTU Sports Meetನಲ್ಲಿ ಚಾಂಪಿಯನ್ ಶಿಪ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಷ್ಟ್ರೀಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟವು (ಎಎಸ್ ಆರ್ ಟಿ ಯು) ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ ಸಹಯೋಗದಲ್ಲಿ ಡಿಸೆಂಬರ್ 6,7 ಮತ್ತು 8 ರಂದು ವಿಶಾಖಪಟ್ಟಣಂನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಕ್ರೀಡಾಕೂಟದಲ್ಲಿ 04 ಚಿನ್ನ, 06 ಬೆಳ್ಳಿ, 07 ಕಂಚು ಒಟ್ಟು 17 ಪದಕಗಳನ್ನು ಗೆಲ್ಲುವ ಮೂಲಕ 2024 ರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಅನ್ನು ನಿಗಮ ತನ್ನದಾಗಿಸಿಕೊಂಡಿತು. ಈ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ದೇಶದ 19 ರಾಜ್ಯಗಳ ರಸ್ತೆ ಸಾರಿಗೆ ನಿಗಮಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ 41 ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Ration Card: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಜ.31ರವರೆಗೆ ಡೆಡ್‌ಲೈನ್‌ ವಿಸ್ತರಣೆ