ಬೆಂಗಳೂರು: ರಾಜ್ಯ ಸರಕಾರಿ ಸಾರಿಗೆ ಸಂಸ್ಥೆ (KSRTC News) ನೌಕರರು ಕರೆ ನೀಡಿದ್ದ ಡಿ.31ರ ಮುಷ್ಕರವನ್ನು ಕೈಬಿಡುವಂತೆ ರಾಜ್ಯ ಸರ್ಕಾರ (Karnataka government) ಮನವಿ ಮಾಡಿದ್ದು, ಸಂಕ್ರಾಂತಿಯ ಬಳಿಕ ಸಭೆ ನಡೆಸಿ ಬೇಡಿಕೆಗಳ ಪರಿಶೀಲನೆ ಮಾಡುವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಸಂಘಟನೆಗಳು ಮುಷ್ಕರವನ್ನು (KSRTC strike) ಮುಂದೂಡಿವೆ.
ಸಾರಿಗೆ ಮುಷ್ಕರವನ್ನು ಜಂಟಿ ಕ್ರಿಯಾ ಸಮಿತಿ ಹಿಂಪಡೆದಿದೆ. ಡಿಸೆಂಬರ್ 31ರಂದು ನಡೆಸಲು ನಿರ್ಧರಿಸಲಾಗಿದ್ದ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿದೆ. ಹೀಗಾಗಿ ಮಂಗಳವಾರ ಎಂದಿನಂತೆ ಸಾರಿಗೆ ಬಸ್ಸುಗಳು ರಾಜ್ಯಾದ್ಯಂತ ಸಂಚಾರ ನಡೆಸಲಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಾರಿಗೆ ಜಂಟಿ ಕ್ರಿಯಾ ಸಮಿತಿಯೊಂದಿಗೆ ಮಹತ್ವದ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಸಾರಿಗೆ ಸಿಬ್ಬಂದಿಗಳ ಬೇಡಿಕೆ ಈಡೇರಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಸಭೆಯಲ್ಲಿ ಸಾರಿಗೆ ಇಲಾಖೆ 4 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಭಾಗಿಯಾಗಿದ್ದರು. ಈ ವೇಳೆ ಸಾರಿಗೆ ಸಿಬ್ಬಂದಿ ಬೇಡಿಕೆ ಬಗ್ಗೆ ಸಿಎಂಗೆ ಮನವರಿಕೆ ಮಾಡಲಾಗಿದೆ ಎನ್ನಲಾಗಿದೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಸಿಬ್ಬಂದಿ ಮುಷ್ಕರದ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇವೆ. ಬಿಜೆಪಿ ಸರ್ಕಾರ ರೂ.5,900 ಕೋಟಿ ಸಾಲ ಬಿಟ್ಟು ಹೋಗಿದ್ದೇ ಸಮಸ್ಯೆಗೆ ಕಾರಣವಾಗಿದೆ. ಫೆಬ್ರವರಿ ಬಜೆಟ್‌ನಲ್ಲಿ ಇಲಾಖೆಗೆ ಅನುದಾನ ನೀಡಿ ಅಂತ ಬೇಡಿಕೆ ಇಟ್ಟಿದ್ದೇನೆ. ಸಂಕ್ರಾಂತಿ ಹಬ್ಬದ ಬಳಿಕ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಜೊತೆಗೆ ಸಾರಿಗೆ ಸಚಿವರ ಮಾತುಕತೆ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಡಿಸೆಂಬರ್ 31 ರಂದು ಕರೆ ನೀಡಿದ್ದ ಮುಷ್ಕರವನ್ನು ಹಿಂಪಡೆಯಲು ನಿರ್ಧರಿಸಿವೆ. ಸಂಕ್ರಾಂತಿ ಬಳಿಕ ಜಂಟಿ ಕ್ರಿಯಾ ಸಮಿತಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: Namma Metro: ಹೊಸ ವರ್ಷದ ಸಂಭ್ರಮಕ್ಕೆ ನಮ್ಮ ಮೆಟ್ರೋ ಸಾಥ್; ಡಿ.31ರಂದು ರಾತ್ರಿ 2.40ರವರೆಗೂ ರೈಲು