Saturday, 4th January 2025

KVN Productions: ʼಮಂಜುಮ್ಮೆಲ್ ಬಾಯ್ಸ್ʼ ಸಿನಿಮಾದ ನಿರ್ದೇಶಕರ ಜತೆ ಕೈಜೋಡಿಸಿದ ಕೆವಿಎನ್ ಪ್ರೊಡಕ್ಷನ್ಸ್

KVN Productions

ಬೆಂಗಳೂರು: ಕೆ.ವಿ.ಎನ್ ಪ್ರೊಡಕ್ಷನ್ಸ್ (KVN Productions) ಮತ್ತು ತೆಸ್ಪಿಯನ್ ಫಿಲ್ಮ್ಸ್ ಒಂದು ಹೊಸ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ಹೊಸ ಶೈಲಿಯ ಚಿತ್ರಗಳಿಂದ ಇಂದಿನ ಯುವ ಸಮುದಾಯದ ಮನ ಗೆದ್ದಿರೋ, ನಿರ್ದೇಶಕ ಚಿದಂಬರಂ ಮತ್ತು ಜೀತು ಮಾಧವನ್ ಜೋಡಿಯ ಕೈಗಿತ್ತಿದ್ದಾರೆ.

ತೆಸ್ಪಿಯನ್ ಫಿಲ್ಮ್ಸ್‌ನ ಶ್ರೀಮತಿ ಶೈಲಜಾ ದೇಸಾಯಿ ಜತೆಗೆ ಕೆವಿಎನ್ ಪ್ರೊಡಕ್ಷನ್ಸ್‌ನ ಈ ಕಾಂಬಿನೇಶನ್ ಬಗ್ಗೆ ವೆಂಕಟ್ ಕೆ. ನಾರಾಯಣ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಮಂಜುಮ್ಮೆಲ್ ಬಾಯ್ಸ್ ನಿರ್ದೇಶಿಸಿದ್ದ ಚಿದಂಬರಂ ಜತೆಗೆ, ಇತ್ತೀಚೆಗೆ ಎಲ್ಲರ‌ ಮನಗೆದ್ದಿದ್ದ ‘ಆವೇಶಮ್’ ಖ್ಯಾತಿಯ ನಿರ್ದೇಶಕ ಜಿತು‌ ಮಾಧವನ್ ಈ ಹೊಸ ಯೋಜನೆಗೆ ಜತೆಯಾಗಲಿದ್ದಾರೆ.

ಅಷ್ಟೇ ಅಲ್ಲ ಈ‌ ಚಿತ್ರದಲ್ಲಿ ನುರಿತ ತಂತ್ರಜ್ಞರ ದೊಡ್ಡ‌ ಪಡೆಯೇ ಇರಲಿದೆ. ಛಾಯಾಗ್ರಹಣಕ್ಕೆ ಶೈಜು ಖಾಲೆದ್, ಸಂಗೀತ ನೀಡಲು ಸುಶಿನ್ ಶ್ಯಾಮ್ ಆಯ್ಕೆಯಾದರೆ ಎಡಿಟಿಂಗ್ ಜವಾಬ್ದಾರಿ ವಿವೇಕ್ ಹರ್ಷನ್ ಹೆಗಲಿಗೇರಿದೆ.

ಕೆವಿಎನ್ ಪ್ರೊಡಕ್ಷನ್ಸ್‌ನ ಸಂಸ್ಥಾಪಕ ವೆಂಕಟ ಕೆ. ನಾರಾಯಣ ಅವರು ಮಾತನಾಡಿ, ನಾವು ನಮ್ಮ ಸಂಸ್ಥೆಯಿಂದ ಭಿನ್ನ ಬಗೆಯ, ಸದಭಿರುಚಿಯ ಮನರಂಜನಾತ್ಮಕ ಸಿನಿಮಾಗಳನ್ನು ಕೊಡೋ ದೃಷ್ಟಿಯಿಂದ ಕೆಲಸ ಮಾಡ್ತೇವೆ. ಅದರಂತೆ ಇಂಥ ಹೊಸ ಬಗೆಯ ಚಿಂತನೆಯುಳ್ಳ, ನಿರ್ದೇಶಕರಿಂದ ಜನರನ್ನ ಮನರಂಜಿಸುವ ಕೆಲಸಕ್ಕೆ ಕೈ ಹಾಕಿರೋದೆ ಒಂದು ಮೈನವಿರೇಳಿಸೊ ಪ್ರಯತ್ನ. ಇಂತಹ ತಂಡದ ಜತೆಗೆ ಸಿನಿಮಾ ಮಾಡೋ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಡ್ತಿರೋದು ನಮಗೆ ಹೆಮ್ಮೆ ತಂದಿದೆ.

‘ಒಂದು ಕಥೆಯನ್ನು ತೆರೆ ಮೇಲೆ ತರುವ ಪ್ರಕ್ರಿಯೇನೇ ರೋಮಾಂಚಕ. ನನ್ನಂತೆಯೇ ಒಳ್ಳೆ ಕಥೆಗೆ, ಸ್ಕ್ರಿಪ್ಟ್‌ಗೆ ಒತ್ತು ಕೊಡುವ ತಂಡದ ಜತೆ ಕೆಲಸ ಮಾಡ್ತಿರೋದು‌ ನಿಜಕ್ಕೂ‌ ಹೆಮ್ಮೆಯ ವಿಷಯ.. ಹೀಗಂತ ನಿರ್ದೇಶಕ ಚಿದಂಬರಂ ಹೇಳಿದರೆ, ಈ ಚಿತ್ರಕ್ಕೆ‌ ಕಥೆ ಬರೀತಿರುವ ಆವೇಶಮ್ ನಿರ್ದೇಶಕ ಜೀತು‌ ಮಾಧವನ್’ ಇದು ನನ್ನ ಹೃದಯಕ್ಕೆ ಹತ್ತಿರವಾದ ಕಥೆ.. ಸಿನಿಮಾ ಕೃಷಿಯ ಬಗ್ಗೆ ಇಷ್ಟೊಂದು ಗಾಢ ಪ್ರೀತಿಯುಳ್ಳ ತಂಡದ ಜತೆ‌ ಕೆಲಸ ಮಾಡೋದೆ ಒಂದು ದೊಡ್ಡ ಖುಷಿ ‘ ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿಯನ್ನೂ ಓದಿ | 31 DAYS Movie: ವಿ. ಮನೋಹರ್ ಸಂಗೀತ ಸಂಯೋಜನೆಯ 150ನೇ ಸಿನಿಮಾ ʼ31 DAYSʼನ ಒಪೇರ ಸಾಂಗ್ ರಿಲೀಸ್‌!

ಕೆವಿಎನ್ ಪ್ರೊಡಕ್ಷನ್ಸ್ ಪಾಲಿಗೆ 2025 ಸುವರ್ಣ ಸಮಯವಾಗಲಿದೆ. ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ಜತೆ ಟಾಕ್ಸಿಕ್, ತಮಿಳಿನ ದಳಪತಿ ಜತೆ ‘ತಳಪತಿ 69’, ಹಿಂದಿಯಲ್ಲಿ ಪ್ರಿಯದರ್ಶನ್ ಜತೆ ಒಂದು ಸಸ್ಪೆನ್ಸ್ ಥ್ರಿಲ್ಲರ್ ಹಾಗೆ ಧೃವ ಸರ್ಜಾ‌ ಪ್ರೇಮ್ಸ್ ಕಾಂಬೋದ ‘ಕೆಡಿ’ ರಿಲೀಸ್‌ಗೆ ರೆಡಿಯಾಗಿ ನಿಂತಿದೆ. ಇದೀಗ ಮಲಯಾಳಂ‌ ಚಿತ್ರರಂಗಕ್ಕೆ ಹೀಗೆ ನುರಿತರೊಂದಿಗೆ ಕಾಲಿಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ದೊಡ್ಡ ಯೋಜನೆಗಳನ್ನು ಹಾಕಿಕೊಂಡಿರೋ ಸೂಚನೆ ಕೆವಿಎನ್ ಸಂಸ್ಥೆ ಕೊಡುತ್ತಿದೆ.