ಬೆಳಗಾವಿ: ʼʼಸರ್ಕಾರಿ ಸೌಲಭ್ಯಗಳು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಬೇಕು. ಗ್ರಾಮೀಣ ಕ್ಷೇತ್ರದ ಜನರು ಮುಗ್ದರಿದ್ದು ಬಹಳಷ್ಟು ಜನರಿಗೆ ಸೌಲಭ್ಯ ಪಡೆಯುವುದು ಹೇಗೆಂದು ಗೊತ್ತಿಲ್ಲ. ಮಧ್ಯವರ್ತಿಗಳಿಗೆ ಹಣ ಕೊಟ್ಟು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕ್ಷೇತ್ರದ ಜನರ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸುವುದು ನನ್ನ ಮುಖ್ಯ ಉದ್ದೇಶʼʼ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಹೇಳಿದರು.
ಬೆಳಗಾವಿಯಲ್ಲಿ ನಡೆದ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ವಿಳಂಬವಿಲ್ಲದೆ, ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸುವ ವಿನೂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ 1 ಸಾವಿರಕ್ಕಿಂತ ಹೆಚ್ಚು ಜನರಿಗೆ ವಿವಿಧ ಸೌಲಭ್ಯಗಳನ್ನು ಅವರು ವಿತರಿಸಿದರು.
ʼʼಗ್ರಾಮೀಣ ಪ್ರದೇಶದ ಜನರು, ರೈತರು ಬಹಳ ಮುಗ್ದರಿರುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡು ಮಧ್ಯವರ್ತಿಗಳು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಮಧ್ಯವರ್ತಿಗಳ ಕಾಟ ತಪ್ಪಿಸುವ ಸಲುವಾಗಿಯೇ ಇಂಥ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆʼʼ ಎಂದು ಅವರು ಹೇಳಿದರು.
ʼʼವಿವಿಧ ಕಾಯಿಲೆಯಿಂದ ಬಳಲುತ್ತಿದ್ದ 19 ಮಂದಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ವಿತರಿಸಲಾಗುತ್ತಿದೆ. ಪ್ರತಿ ವಾರ 10-15 ಜನರಿಗೆ ಸಿಎಂ ಪರಿಹಾರ ನಿಧಿ ವಿತರಿಸಲಾಗುತ್ತಿದೆ. ಸುಳೇಭಾವಿಯಲ್ಲಿ ವಿದ್ಯುತ್ ಅವಘಡದಿಂದ ಇಬ್ಬರು ಮಹಿಳೆಯರು ಮೃತಪಟ್ಟಿದ್ದರು. ಇದೀಗ ತಲಾ 5 ಲಕ್ಷ ರೂ. ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಜತೆಗೆ ಮಕ್ಕಳ ವಿದ್ಯಾಭ್ಯಾಸ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಅವರಿಗೆ ನಾನೇ ತಾಯಿಯಾಗಿ ನಿಲ್ಲುತ್ತೇನೆʼʼ ಎಂದು ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.
ʼʼ166 ಬಡ ಕುಟುಂಬಗಳಿಗೆ ರೇಷನ್ ಕಾರ್ಡ್ ಮಾಡಿಸಿಕೊಡಲಾಗಿದೆ. ಪಶುಸಂಗೋಪನಾ ಇಲಾಖೆ, ಕಾರ್ಮಿಕ ಇಲಾಖೆ, ಇಂಧನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ವಿರೋಧ ಪಕ್ಷದವರೂ ಏನು ಬೇಕಾದರೂ ಮಾತಾಡಲಿ, ನಾನು ಯಾವುದೇ ಜಾತಿ, ಧರ್ಮ, ಪಕ್ಷ ನೋಡದೆ, ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಇಡೀ ಕರ್ನಾಟಕಕ್ಕೆ ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿʼʼ ಎಂದು ತಿಳಿಸಿದರು.
ʼʼಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಪ್ರತಿ ವರ್ಷ ನನ್ನ ಕ್ಷೇತ್ರದಿಂದ 50 ಸಾವಿರ ಜನರು ಭೇಟಿ ಕೊಡುತ್ತಿದ್ದಾರೆ. ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಕ್ಷೇತ್ರದ ಪ್ರವಾಸಿಗರ ಅನುಕೂಲಕ್ಕಾಗಿ ತಂಗುದಾಣವನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಏಕಕಾಲಕ್ಕೆ 2 ಸಾವಿರ ಜನರು ಉಲಿದುಕೊಳ್ಳಲು ವ್ಯವಸ್ಥಾ ಮಾಡಲಾಗುತ್ತಿದೆʼʼ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿವರಿಸಿದರು.
ಸಿದ್ದರಾಮಯ್ಯ ಕನಸು ಸಾಕಾರ: ಚನ್ನರಾಜ್ ಹಟ್ಟಿಹೊಳಿ
ʼʼಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು ಎಂಬುದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯ. ಇದಕ್ಕೆ ತಕ್ಕಂತೆ ಮುಖ್ಯಮಂತ್ರಿ ಆಶಯವನ್ನು ಚಾಚು ತಪ್ಪದೇ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಜಾರಿಗೆ ತರುತ್ತಿದ್ದಾರೆ. ಇದೊಂದು ಐತಿಹಾಸಿಕ ದಿನʼʼ ಎಂದು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಬಣ್ಣಿಸಿದರು.
ʼʼಸಚಿವರ ಕಾಳಜಿಯಿಂದಾಗಿ ಇಲಾಖೆಗಳ ಫಲಾನುಭವಗಳಿಗೆ ಯೋಜನೆ ಕೈಸೇರುತ್ತಿದೆ. ಪ್ರವಾಹದಿಂದ ಹದಗೆಟ್ಟಿದ್ದ ರಸ್ತೆಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ವಿವಿಧ ಇಲಾಖೆಗಳಿಂದ 100 ಕೋಟಿ ರೂ.ಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ರಸ್ತೆಗಳ ಅಭಿವೃದ್ಧಿಗೆ ಕ್ಷೇತ್ರದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ರೈತ ಸಂಪರ್ಕ ಕೇಂದ್ರ, ಸಮುದಾಯ ಭವನಗಳ ನಿರ್ಮಾಣ ಕಾರ್ಯ ನಡೆಯುತ್ತಿದೆʼʼ ಎಂದರು.
ʼʼಈಗಾಗಲೇ ಎರಡು ಹೆಚ್ಚುವರಿ ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಕ್ಷೇತ್ರಕ್ಕೆ ಮಂಜೂರಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗಿದೆ. ಜತೆಗೆ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ 5 ಕೋಟಿ ರೂ.ಯನ್ನು ಮಂಜೂರು ಮಾಡಲಾಗಿದೆʼʼ ಎಂದು ಅವರು ಮಾಹಿತಿ ನೀಡಿದರು.
ಮಂದಿರ ನಿರ್ಮಾಣ
ʼʼಪ್ರತಿ ಗ್ರಾಮಗಳಲ್ಲೂ 2ರಿಂದ 3 ಮಂದಿರಗಳು ಈಗಾಗಲೇ ನಿರ್ಮಾಣಗೊಂಡಿದ್ದು, 5 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಭವಿಷ್ಯದ ಸೈನಿಕರಿಗೆ ತರಬೇತಿ ಸೇರಿದಂತೆ ಒಟ್ಟೂ 25 ಕೋಟಿ ರೂ. ಯೋಜನೆ ಇದಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ 22 ಕೋಟಿ ರೂಪಾಯಿ ಯೋಜನೆ ಸಿದ್ಧವಾಗಿದೆ. ನಗರಾಬಿವೃದ್ದಿ ಪ್ರಾಧಿಕಾರದಿಂದ 25 ಕೋಟಿ ರೂ. ಕೆಲಸ ಕೈಗೆತ್ತಿಕೊಳ್ಳಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. 20 ಕೋಟಿ ರೂ. ವೆಚ್ಚದಲ್ಲಿ ಬಾಲಭವನ ನಿರ್ಮಾಣ ಮಾಡಲಾಗುತ್ತಿದೆʼʼ ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದರು.
ಈ ವೇಳೆ ಯುವರಾಜ್ ಕದಂ, ಶಂಕರಗೌಡ ಪಾಟೀಲ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ: Lakshmi Hebbalkar: ಚಂದ್ರಶೇಖರನಾಥ ಸ್ವಾಮೀಜಿ ಹೇಳಿದಂತೆ ಬಿಜೆಪಿಗರು ಹೇಳಲಿ; ಲಕ್ಷ್ಮೀ ಹೆಬ್ಬಾಳಕರ್ ಸವಾಲು