Wednesday, 11th December 2024

ನಾಯಕತ್ವ ಪೈಪೋಟಿ ಕಾಂಗ್ರೆಸ್‌ಗೆ ಮಾರಕ

ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸುವ ಯತ್ನ

ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು

ಬೆಲೆ ಏರಿಕೆ, ಕೋವಿಡ್ ನಿರ್ವಹಣೆ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಆಡಳಿತ ವಿರೋಧಿ ಅಲೆಯಿದ್ದು, ಇದು ನಮಗೆ ಮುಂದಿನ ಅವಧಿಯಲ್ಲಿ ಅಧಿಕಾರ ತಂದುಕೊಡಲಿದೆ ಎಂಬ ದೂರಾಲೋಚನೆಯಲ್ಲಿ ಸಿಎಂ ಯಾರಾಗಬಹುದು ಎಂಬ ವಿವಾದವನ್ನು ಸ್ವತಃ ಕಾಂಗ್ರೆಸ್ ನಾಯಕರೇ ಹುಟ್ಟುಹಾಕಿದ್ದು, ಇದು ಕಾಂಗ್ರೆಸ್‌ಗೆ ಮಾರಕವಾಗಲಿದೆ.

ಕಾಂಗ್ರೆಸ್‌ನ ಕೆಲ ಶಾಸಕರ ಈ ನಡೆ ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದಂತಾಗಿದೆ ಎಂದು ಸ್ವತಃ ಕಾಂಗ್ರೆಸ್‌ನ ಹಿರಿಯರ ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿದೆ. ಪ್ರಸ್ತುತ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದು, ಬಿಎಸ್ ವೈ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಽಕಾರಕ್ಕೆ ಬಂದ ನಂತರ ಸಿಎಂ ಯಾರು ಎಂಬ ಬಗ್ಗೆ
ತೀರ್ಮಾನ ಆಗಬೇಕಿದೆ. ಆದರೆ, ಅದಾಗಲೇ, ಕಾಂಗ್ರೆಸ್‌ನ ಕೆಲ ಶಾಸಕರು ಮುಂದಿನ ಸಿಎಂ ಆಯ್ಕೆ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಆ ಮೂಲಕ ಪಕ್ಷ ದೊಳಗಿನ ಗೊಂದಲವನ್ನು ಬೀದಿಗೆ ತಂದು ನಿಲ್ಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಮುಂದಿನ ಮುಖ್ಯಮಂತ್ರಿ ಹೇಳಿಕೆ ಬೇಡ

ಮುಂದಿನ ಮುಖ್ಯಮಂತ್ರಿ ಕುರಿತು ಬಹಿರಂಗ ಹೇಳಿಕೆ ನೀಡಬಾರದು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಶಾಸಕರಲ್ಲಿ
ಮನವಿ ಮಾಡಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಹೀಗಾಗಿ ಮುಂದಿನ ಸಿಎಂ ಎಂದು ಈಗಲೇ ಹೇಳಿಕೆ ನೀಡಬಾರದು. ಸಿಎಂ ಯಾರಾಗಬೇಕು ಎಂಬುದನ್ನು ಚುನಾವಣೆ ಬಳಿಕ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಧರಿಸುತ್ತದೆ. ಹೈಕಮಾಂಡ್ ತೀರ್ಮಾನವೇ ಅಂತಿಮ
ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

***

ಅಭಿಮಾನಿಯೊಬ್ಬ, ಭಾವಿ ಮುಖ್ಯಮಂತ್ರಿ ಪರಮೇಶ್ವರ್‌ಗೆ ಜೈ ಎಂದು ಘೋಷಣೆ ಕೂಗಿದ. ನಾನು ಆತನಿಗೆ ಬುದ್ದಿ ಹೇಳಿದ್ದೇನೆ. ನಮ್ಮ ಪಕ್ಷದಲ್ಲಿ ಇಂತಹದ್ದಕ್ಕೆಲ್ಲ ಅವಕಾಶವಿಲ್ಲ. ಮುಂದಿನ ಅಭ್ಯರ್ಥಿಯ ಕುರಿತು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾವು ಪಕ್ಷವನ್ನು ಮುಂದಿನ ಬಾರಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುವ ಕಡೆಗೆ ಗಮನ ನೀಡಬೇಕಿದೆ ಎಂದು ಹೇಳಿದ್ದೇನೆ.

– ಡಾ.ಜಿ.ಪರಮೇಶ್ವರ್ ಮಾಜಿ ಉಪಮುಖ್ಯಮಂತ್ರಿ

ಚುನಾವಣೆಗೆ ಸ್ಪರ್ಧಿಸುವ ೨೨೪ ಜನರಲ್ಲಿ ಗೆಲ್ಲುವವರ ಜತೆಗೆ, ಸೋತವರೂ ಸಿಎಂ ಆಗಿದ್ದನ್ನು ರಾಜ್ಯ ರಾಜಕೀಯದ ಇತಿಹಾಸದಲ್ಲಿ ನೋಡಿದ್ದೇವೆ. ದೇವರಾಜ ಅರಸು ಅವರು ಚುನಾವಣೆಯಲ್ಲಿ ಗೆದ್ದಿರಲಿಲ್ಲ, ಆದರೂ ಸಿಎಂ ಆಗಲಿಲ್ಲವೇ? ರಾಮಕೃಷ್ಣ ಹೆಗಡೆ ಅವರು ಚುನಾವಣೆಗೆ ಸ್ಪರ್ಧಿಸಿರಲಿಲ್ಲ, ಆದರೂ ಮುಖ್ಯಮಂತ್ರಿ
ಆಗಲಿಲ್ಲವೇ?
– ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ