Friday, 29th November 2024

ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟ ಸತೀಶ್

ಕಾರ್ಯಕರ್ತರನ್ನೇ ನಂಬಿಕೊಂಡಿರುವ ಬಿಜೆಪಿ

ಗೆಲುವಿಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಕಸರತ್ತು

ವಿಶೇಷ ವರದಿ: ವಿನಾಯಕ ಮಠಪತಿ

ಬೆಳಗಾವಿ: ಲೋಕಸಭಾ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಘಟಾನುಘಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಉಪ ಚುನಾವಣೆ ಗೆಲ್ಲುವ ಆತ್ಮವಿಶ್ವಾಸದಲ್ಲಿರುವ ಬಿಜೆಪಿಗೆ ಸದ್ಯ ಜಿಲ್ಲಾ ನಾಯಕರ ಅಸಮಾಧಾನ ತಲೆನೋವು ತರಿಸಿದ್ದು, ಇತ್ತ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪ್ರಬಲ ನಾಯಕರನ್ನು ಕಾಂಗ್ರೆಸ್‌ಗೆ ಸೆಳೆಯುತ್ತಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ಮತ ಗಳು ನಿರ್ಣಾಯಕವಾಗಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ಜಾತಿ ಲೆಕ್ಕಾಚಾರದಲ್ಲಿ ತೊಡಗಿಕೊಂಡಿವೆ.

ಚುನಾವಣೆ ಗೆಲ್ಲಲು ತಂತ್ರ: ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಚುನಾವಣೆ ಗೆಲ್ಲಲು ತಂತ್ರ ಹೆಣೆಯುತ್ತಿದ್ದು, ಪ್ರಬಲ ಲಿಂಗಾಯತ ಮುಖಂಡರನ್ನು ಕಾಂಗ್ರೆಸ್‌ಗೆ ಸೆಳೆಯುತ್ತಿದ್ದಾರೆ.
ಜಾರಕಿಹೊಳಿ ಕುಟುಂಬದ ವಿರುದ್ಧ ಗೋಕಾಕ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದ, ಸದ್ಯ ಜೆಡಿಎಸ್ ನಲ್ಲಿರುವ ಅಶೋಕ ಪುಜಾರಿ ಅವರನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಬರುವ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆ ಮಾಡಲಿದ್ದಾರೆ. ಅಷ್ಟೇ ಅಲ್ಲದೆ ಇನ್ನೂ ಅನೇಕ ನಾಯಕರಿಗೆ ಗಾಳ ಹಾಕಿದ್ದು, ಬಿಜೆಪಿಗೆ ಹೊಡೆತ ನೀಡಲು ಭರ್ಜರಿ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರೇ ನಿರ್ಣಾಯಕ: ಈ ಹಿಂದೆ 17 ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ 14 ಬಾರಿ ವೀರಶೈವ ಲಿಂಗಾಯತ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 18 ಲಕ್ಷ ಮತದಾರ ರಿದ್ದು, ಅದರಲ್ಲಿ ಸರಿ ಸುಮಾರು 8 ಲಕ್ಷ ವೀರಶೈವ ಲಿಂಗಾಯತ ಮತಗಳಿವೆ. ಇನ್ನೂ ಸುಮಾರು 1.8 ಲಕ್ಷ ಮರಾಠ ಸಮುದಾಯದ
ಮತಗಳಿರುವ ಕಾರಣಕ್ಕಾಗಿ ಬಿಜೆಪಿ ಕುಟುಂಬ ರಾಜಕಾರಣ ಸಿದ್ಧಾಂತ ಬದಿಗಿಟ್ಟು ದಿ.ಸುರೇಶ್ ಅಂಗಡಿ ಪತ್ನಿ ಮಂಗಲಾ ಅಂಗಡಿ ಯವರಿಗೆ ಟಿಕೆಟ್ ನೀಡಿದೆ. ಆದರೆ, ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿರುವ ಸತೀಶ್ ಜಾರಕಿಹೊಳಿ ಅದೇ ಲಿಂಗಾಯತ ಅಭ್ಯರ್ಥಿ ಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಚುನಾವಣೆ ಗೆಲ್ಲುವ ತಂತ್ರ ನಡೆಸಿದ್ದಾರೆ.

ತೆನೆ ಹೊರೆ ಇಳಿಸಿ ಕೈ ಹಿಡಿಯುತ್ತಿರುವ ಅಶೋಕ್ ಪೂಜಾರಿ: ಈ ಹಿಂದೆ ಬಿಜೆಪಿ ಕಟ್ಟಾಳುವಾಗಿದ್ದ ಅಶೋಕ್ ಪೂಜಾರಿ ಕಳೆದ ಗೋಕಾಕ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿಯೊಂದಿಗೆ ಮುನಿಸಿಕೊಂಡು ಜೆಡಿಎಸ್ ಸೇರ್ಪಡೆಯಾಗಿದ್ದರು. ಆದರೆ,
ಆ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಸೋಲುಂಡಿದ್ದರು. ಸದ್ಯ ಬೆಳಗಾವಿ ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಸತೀಶ್ ಜಾರಕಿಹೊಳಿ ಅವರಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಆದರೆ,
ಅಶೋಕ್ ಪೂಜಾರಿ ಅವರನ್ನು ರಾಷ್ಟ್ರೀಯ ಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದು, ಯಾವುದೇ ಪಕ್ಷದಲ್ಲಿಯೂ ನೆಲೆ ಕಂಡು ಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ವೀರಶೈವ ಲಿಂಗಾಯತ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್ ಕಸರತ್ತು ಮುಂದು ವರಿಸಿದ್ದು, ಬಿಜೆಪಿಗೆ ಹೊಡೆತ ನೀಡಲು ಸಜ್ಜಾಗಿದೆ.

ಕಾರ್ಯಕರ್ತರೇ ಬಿಜೆಪಿಗೆ ಆಕ್ಸಿಜನ್: ಸಂಘಟನಾತ್ಮಕವಾಗಿ ಬಿಜೆಪಿ ಪ್ರಬಲವಾಗಿದ್ದು, ಮನೆ ಮನೆಗೆ ತೆರಳಿ ಪ್ರಚಾರ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಶಕ್ತಿ ಹೊಂದಿದ್ದಾರೆ. ಕಳೆದ ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ ದಿ.ಸುರೇಶ್
ಅಂಗಡಿ 3 ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ನಿದರ್ಶನವಿದೆ. ಸಂಘ ಪರಿವಾರ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರ ಪ್ರಬಲ ಪಡೆ ಬೆಳಗಾವಿ ಕ್ಷೇತ್ರದಲ್ಲಿದ್ದು, ಸುಲಭ ಗೆಲುವಿನ ಲೆಕ್ಕಾಚಾರದಲ್ಲಿದ್ದಂತೆ ಕಾಣುತ್ತಿದೆ ಬಿಜೆಪಿ.

ಚುನಾವಣೆ ಗೆಲ್ಲಲು ರಾಜ್ಯ ಸರಕಾರ ಪಣ: ಹೇಗಾದರು ಮಾಡಿ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪ ಚುನಾವಣೆ ಗೆಲ್ಲಲ್ಲು ಇನ್ನಿಲ್ಲದ ಕಸರತ್ತು ನಡೆಸಿರುವ ಬಿಜೆಪಿ. ರಾಜ್ಯ ಸಚಿವ ಸಂಪುಟ ಆದಿಯಾಗಿ ಶಾಸಕರು ಹಾಗೂ ಸಂಸದರು
ಕೆಲಸ ಮಾಡಲು ಸಜ್ಜಾಗಿದ್ದಾರೆ. ದಿ.ಸುರೇಶ್ ಅಂಗಡಿ ಮಗಳಾದ ಶ್ರದ್ಧಾ ಅಂಗಡಿ ಅವರು ಜಗದೀಶ್ ಶೆಟ್ಟರ್ ಸೊಸೆ. ಈಗಾಗಲೇ
ಉಪ ಚುನಾವಣೆ ಉಸ್ತುವಾರಿಯಾಗಿ ಜಗದೀಶ್ ಶೆಟ್ಟರ್ ತಮ್ಮ ಕೆಲಸ ಮಾಡುತ್ತಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕರ್ತರ ಸಭೆ ಮಾಡಿದ್ದು, ವಿವಿಧ ಸಮುದಾಯದ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಏ.7ರಂದು ಮತ್ತೊಮ್ಮೆ ಪ್ರಚಾರ ಮಾಡುವು ದಾಗಿ ತಿಳಿಸಿದ್ದು, ಬಿಜೆಪಿ ಗೆಲುವಿನ ಹಟ ತೊಟ್ಟಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.

***

ನಾವು ನೇರವಾಗಿ ಎಲ್ಲಾ ನಾಯಕರು ಹಾಗೂ ಸಮಾಜದ ಸಂಪರ್ಕದಲ್ಲಿ ಇದ್ದೇವೆ. ಎಲ್ಲಾ ಸಮುದಾಯ ಮುಖಂಡರು ಬೆಂಬಲ
ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ, ನಾವು ಎಲ್ಲಾ ಸಮುದಾಯ ಮುಖಂಡರನ್ನು ಭೇಟಿ ಮಾಡುತ್ತಿದ್ದು, ಗೆಲುವಿಗೆ ಬೇಕಾದ ಕಾರ್ಯತಂತ್ರ ರೂಪಿಸಲಾಗುತ್ತಿದೆ.
– ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ

ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಈಗಾಗಲೇ ನಮ್ಮ ಬೆಂಬಲಿಗರ ಜತೆ ಮಾತುಕತೆ ನಡೆಸಿರುವೆ.ಕೇಂದ್ರ ಸರಕಾರದ ರೈತ ವಿರೋಧಿ ನೀತಿ ಹಾಗೂ ಬೆಲೆ ಏರಿಕೆ ವಿರುದ್ಧ ಈಗಾಗಲೇ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ಒಂದು ವಾರದ
ಒಳಗಾಗಿ ಕಾಂಗ್ರೆಸ್ ಸೇರ್ಪಡೆಯಾಗುವೆ.
– ಅಶೋಕ್ ಪೂಜಾರಿ
ರಾಜಕೀಯ ಮುಖಂಡರು ಗೋಕಾಕ್