ಬೆಂಗಳೂರು: ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಮತ್ತೆ ಶಾಕ್ ನೀಡಲು (Liquor Price Karnataka) ಮುಂದಾಗಿದೆ. ಬಿಯರ್ ಪ್ರೇಮಿಗಳಿಗೆ ಇದು ಏರಿದ ಕಿಕ್ ಕೂಡ ಇಳಿಸುವಂಥ ಸುದ್ದಿ. ಶೀಘ್ರದಲ್ಲೇ ಬಿಯರ್ ದರ (beer price hike) ದುಬಾರಿಯಾಗಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದುಕೊಂಡಿದ್ದೇವೆ ಎಂದು ಹೇಳುತ್ತಿದೆ. ಆದರೆ, ಅಧಿಕಾರಕ್ಕೆ ಬಂದು ಕೇವಲ ಒಂದೂವರೆ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮೂರನೇ ಬಾರಿ ಮದ್ಯದ ದರ ಹೆಚ್ಚಳಕ್ಕೆ ಮುಂದಾಗಿದೆ. ಮದ್ಯ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಗ್ಯಾರಂಟಿ ಆಗಿದೆ.
ಸರ್ಕಾರ ಕಳೆದ ಜನವರಿ ತಿಂಗಳಲ್ಲಿ ಎಲ್ಲ ಬಿಯರ್ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಶೇ.20ರವರೆಗೆ ದರ ಹೆಚ್ಚಳ ಮಾಡಿತ್ತು. ಈಗ ಪುನಃ ಏಳು ತಿಂಗಳು ಕಳೆದ ನಂತರ ದರ ಏರಿಕೆಗೆ ಮುಂದಾಗಿದೆ. ಇದೇ ಸರಕಾರ ಕಳೆದ ತಿಂಗಳು ಆ.29ರಂದು ಪ್ರೀಮಿಯಂ ಬ್ರ್ಯಾಂಡ್ ದರ ಇಳಿಕೆ ಮಾಡಿತ್ತು. ಇವೆಲ್ಲ ಪ್ರೀಮಿಯಂ ದರದ ಮದ್ಯಗಳಾಗಿದ್ದು, ಶ್ರೀಮಂತರು ಕುಡಿಯುವಂಥ ಬ್ರ್ಯಾಂಡ್‌ಗಳಾಗಿವೆ. ಇವುಗಳ ಫುಲ್ ಬಾಟಲ್ ಮಾರಾಟದ ಮೇಲೆ ಸ್ವಲ್ಪ ದರ ಇಳಿಕೆ ಮಾಡಲಾಗಿತ್ತು. ಆದರೆ ಇದರಿಂದ ಸಾಮಾನ್ಯ ವರ್ಗದ ಜನತೆಗೆ, ಮದ್ಯ ಪ್ರಿಯರಿಗೆ ಯಾವುದೇ ಅನುಕೂಲ ಆಗಿರಲಿಲ್ಲ.
ಇದೀಗ ರಾಜ್ಯ ಸರ್ಕಾರ ಬಿಯರ್ ದರ ಏರಿಕೆ ಮಾಡಲು ತಯಾರಿ ಮಾಡಿಕೊಂಡಿದೆ. ಈಗಾಗಲೇ ದರ ಹೆಚ್ಚಳಕ್ಕೆ ಸರ್ಕಾರ ಕರಡು ಹೊರಡಿಸಿದೆ. ಪ್ರತಿ ಬಾಟಲ್ ಬಿಯರ್ ಮೇಲೆ ಸುಮಾರು 10 ರೂ.ಗಳಿಂದ 12 ರೂ.ಗಳವರೆಗೆ ದರ ಹೆಚ್ಚಳ ಮಾಡಲು ತೀರ್ಮನಿಸಲಾಗಿದೆ. ಪ್ರತಿ ಬಿಯರ್ ಸ್ಲ್ಯಾಬ್ ಮೇಲೆ ದರ ಏರಿಕೆ ಮಾಡಲು ತಯಾರಿ ನಡೆಸಿದೆ.
ರಾಜ್ಯದಲ್ಲಿ ಪ್ರಸ್ತುತ ಬಿಯರ್ ಮಾರಾಟ ಒಂದು ಸ್ಲ್ಯಾಬ್ ಮಾದರಿಯಲ್ಲಿ ಮಾತ್ರ ನಡೆಯುತ್ತದೆ. ಆದರೆ ದರ ಹೆಚ್ಚಳ ಮಾಡಿದ ನಂತರ ಎಲ್ಲ ಬಿಯರ್‌ಗಳನ್ನು ಮೂರು ಸ್ಲ್ಯಾಬ್‌ಗಳನ್ನಾಗಿ ಮಾಡಿ ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ಶೀಘ್ರವೇ ಎಲ್ಲ ಬಿಯರ್ ಬ್ರ್ಯಾಂಡ್‌ಗಳನ್ನು ಸ್ಲ್ಯಾಬ್ ಆಧಾರದಲ್ಲಿ ವರ್ಗೀಕರಣ ಮಾಡಿ ದರ ಹೆಚ್ಚಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಕುರಿತು ಸೂಚನೆ ದೊರೆತಿದೆ.
ಸ್ಲ್ಯಾಬ್‌ಗಳು ಹೀಗಿವೆ: 0ರಿಂದ ಶೇ.5 ಪರ್ಸೆಂಟ್‌ವರಿಗೆ 1ನೇ ಸ್ಲ್ಯಾಬ್, ಶೇ.5ರಿಂದ ಶೇ.6 ಪರ್ಸೆಂಟ್‌ವರೆಗೆ ಇರುವ ಬಿಯರ್‌ಗಳು 2ನೇ ಸ್ಲ್ಯಾಬ್, ಶೇ.6ರಿಂದ ಶೇ.8 ಪರ್ಸೆಂಟ್‌ವರೆಗೆ ಇರುವ ಬಿಯರ್ ಅನ್ನು 3ನೇ ಸ್ಲ್ಯಾಬ್ ಆಗಿ ವಿಂಗಡಿಸಲಾಗುತ್ತದೆ. ರಾಜ್ಯ ಸರ್ಕಾರದಿಂದ ಮೇಲೆ ತಿಳಿಸಲಾದ ಎಲ್ಲ ಸ್ಲ್ಯಾಬ್‌ಗಳ ಬಿಯರ್ ದರಗಳನ್ನೂ ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಬಿಯರ್ ದರ ಹೆಚ್ಚಳದ ಅಂತಿಮ ಬೆಲೆ ನಿಗದಿಪಡಿಸಿ ಸರ್ಕಾರದಿಂದ ಆದೇಶ ಪ್ರಕಟಿಸಲಾಗುತ್ತದೆ.
ಈ ಸುದ್ದಿ ಓದಿ: ಸ್ಮಾರ್ಟ್ ಫೋನ್ ಖರೀದಿಸಿದರೆ, ಬಿಯರ್ ಕ್ಯಾನ್ ಉಚಿತ..!