ಬೆಂಗಳೂರು: ರಾಜ್ಯದ ಹಲವೆಡೆ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ರೇಡ್(Lokayukta Raid) ನಡೆದಿದ್ದು, ಭ್ರಷ್ಟ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲಾಗಿದೆ. ಬೆಂಗಳೂರು ಸೇರಿ ರಾಜ್ಯದ 8 ಕಡೆಗಳಲ್ಲಿ ಲೋಕಾಯುಕ್ತ ದಾಳಿ ಆಗಿದ್ದು, ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ತಟ್ಟಿದೆ. ಗದಗ, ಬಳ್ಳಾರಿ, ಬೀದರ್ ಸೇರಿದಂತೆ 8 ಕಡೆಗಳಲ್ಲಿ ಏಕಕಾಲಕ್ಕೆ ರೇಡ್ ಆಗಿದೆ. ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ. ಸಾರಿಗೆ ಇಲಾಖೆಯ ಜಂಟಿ ನಿರ್ದೇಶಕಿ ಶೋಭಾ ಮನೆ ಮೇಲೆ ದಾಳಿಯಾಗಿದೆ.
ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ರಾಮಾಂಜನೇಯ ನಗರದ ನಿವಾಸ, ಕಚೇರಿ ಹಾಗೂ ಸ್ನೇಹಿತರ ನಿವಾಸದ ಮೇಲೂ ರೇಡ್ ಮಾಡಲಾಗಿದೆ. ಇನ್ನು ಅಕ್ರಮ ಆಸ್ತಿ ಗಳಿಕೆ ಕುರಿತು ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಯಾವ ಜಿಲ್ಲೆಗಳಲ್ಲಿ ರೇಡ್?
ರಾಯಚೂರು, ಚಿಕ್ಕಮಗಳೂರು, ಬೀದರ್, ಬೆಳಗಾವಿ, ಗದಗ, ಬಳ್ಳಾರಿ, ಮತ್ತು ಬೆಂಗಳೂರಿನಲ್ಲಿ ದಾಳಿ ನಡೆದಿದೆ. ಖಾನಾಪುರ ತಹಶೀಲ್ದಾರ್, ಬೆಂಗಳೂರು ಟ್ರಾನ್ಸ್ ಪೋರ್ಟ್ ಡಿಪಾರ್ಟ್ಮೆಂಟ್ ಜಂಟಿ ನಿರ್ದೇಶಕರಾದ ಶೋಭಾ ಸೇರಿದಂತೆ ಎಂಟು ಜಿಲ್ಲೆಯ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನಲೆಯಲ್ಲಿ, ಬಳ್ಳಾರಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆರ್ ಹೆಚ್ ಲೋಕೇಶ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರಿನ ಕುಟುಂಬ ಕಲ್ಯಾಣ ಇಲಾಖೆಯ ಡಾ. ಎಸ್ ಎನ್ ಉಮೇಶ್, ಬೀದರ್ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಇನ್ಸ್‌ಪೆಕ್ಟರ್ ರವೀಂದ್ರ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಹಶಿಲ್ದಾರ ಪ್ರಕಾಶ್ ಶ್ರೀಧರ್ ಗಾಯಕವಾಡ, ರಾಯಚೂರು ಜಿಲ್ಲೆಯ ಬೆಸ್ಕಾಂ ಜೂ. ಇಂಜಿನಿಯರ್ ಹುಲಿರಾಜ್, ತುಮಕೂರು ಜಿಲ್ಲೆಯ ನಿವೃತ್ತ ಆರ್ ಟಿಓ ಅಧಿಕಾರಿ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.
ಈ ಸುದ್ದಿಯನ್ನೂ ಓದಿ: CM Siddaramaiah: ಲೋಕಾಯುಕ್ತ ಕಚೇರಿಗೆ ಖಾಸಗಿ ಕಾರಿನಲ್ಲಿ ತೆರಳಿದ ಸಿಎಂ, ವಿಚಾರಣೆಯಲ್ಲಿ ಏನಾಯ್ತು?