Thursday, 12th December 2024

ಜೈಲಿನಲ್ಲಿ ಕೈದಿಗಳಿಗೆ ಐಷಾರಾಮಿ ಸೌಲಭ್ಯ

ಜೈಲು ಸಿಬ್ಬಂದಿಯೇ ಶಾಮೀಲು ಕುರಿತ ವೀಡಿಯೋ ವೈರಲ್

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿ ಹಣ ಕೊಟ್ಟ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಾರೆ ಎಂಬುದು ಮತ್ತೊಮ್ಮೆ ಮುನ್ನೆಲೆಗೆ
ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೈದಿಗಳು ಜೈಲು ಸಿಬ್ಬಂದಿಗೆ ಹಣ ಕೊಡುತ್ತಿರುವ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕೈದಿಗಳು ನೀಡುವ ಹಣದಾಸೆಗೆ ಜೈಲು ಸಿಬ್ಬಂದಿ ಅಲ್ಲಿನ ಕೈದಿಗಳಿಗೆ ಟಿವಿ, ಫೋನ್, ಟೇಬಲ್ ಸೇರಿದಂತೆ ಹಲವು ಸವಲತ್ತುಗಳನ್ನು ನೀಡುತ್ತಿದ್ದಾರೆ. ಕೈದಿಗಳು ಮದ್ಯ, ಗಾಂಜಾ, ಗುಟ್ಕಾ, ಬೀಡಿ, ಸಿಗರೇಟು ಸೇರಿದಂತೆ ತಮ್ಮಿಷ್ಟದ ಆಹಾರ ಸೇವಿಸಿಕೊಂಡು ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ ಎಂಬುದಕ್ಕೆ ಈ ವೀಡಿಯೋ ಸಾಕ್ಷ್ಯ ಒದಗಿಸಿದೆ.

ಹಣ ಕೊಟ್ಟರೆ ಎಲ್ಲ ಸೌಲಭ್ಯ ಲಭ್ಯ?: ಜೈಲುಗಳಲ್ಲಿ ಕೈದಿಗಳಿಗೆ ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ನೀಡಬೇಕು. ಏನು ಸೌಲಭ್ಯಗಳನ್ನು ನೀಡಬೇಕು ಎಂಬುದರ ಬಗ್ಗೆ ನಿಯಮಗಳಿವೆ. ಈ ನಿಯಮದ ಅನುಸಾರವೇ ಜೈಲು ಸಿಬ್ಬಂದಿ ಕೈದಿಗಳನ್ನು ನೋಡಿಕೊಳ್ಳಬೇಕು. ಆದರೆ, ಜೈಲು ಸಿಬ್ಬಂದಿ, ಕೈದಿಗಳು ನೀಡುವ ಹಣಕ್ಕೆ ಕೈಚಾಚಿ ಮೊಬೈಲ್, ಹಾಸಿಗೆ, ದಿಂಬು, ಮಂಚ ಸಹಿತ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ.

ವಿಡಿಯೋದಲ್ಲಿ ಏನಿದೆ?: ಕೈದಿಗಳು ಜೈಲು ಸಿಬ್ಬಂದಿಗೆ ಹಣ ನೀಡುತ್ತಿರುವ ವಿಡಿಯೋ ಇದಾಗಿದ್ದು, ಇದು ಹಳೇಯ ವಿಡಿಯೋ ಎನ್ನಲಾಗುತ್ತಿದೆ. ಈ ವಿಡಿಯೋ ನೋಡಿದಾಗ ಬ್ಯಾರಕ್ ಒಳಗಿನಿಂದ ಸೆರೆ ಹಿಡಿದಿರುವಂತೆ ಕಾಣುತ್ತದೆ. ಕೈದಿಗಳೇ ಯೋಜನೆ ರೂಪಿಸಿ ಈ ವಿಡಿಯೋ ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೌಡಿ ನಾರಾಯಣ ಎಂಬಾತ ಬ್ಯಾರಕ್ ಒಳಗೆ ಕೈ ತುಂಬ ಹಣ ಎಣಿಸಿ ಜೈಲು ಸಿಬ್ಬಂದಿಗೆ ನೀಡುತ್ತಿದ್ದಾನೆ.

ಎಷ್ಟು ಹಣ ಕೊಡಬೇಕು ಎಂದು ಜೈಲು ಸಿಬ್ಬಂದಿಯನ್ನೇ ಪ್ರಶ್ನಿಸುತ್ತಾನೆ. ಹಣ ಪಡೆದ ಬಳಿಕ ಜೈಲು ಸಿಬ್ಬಂದಿ ಕಾಫಿ ಬೇಕಾ, ತಿಂಡಿ ಬೇಕಾ ಎಂದು ರೌಡಿ ನಾರಾಯಣನ ಯೋಗಕ್ಷೇಮ ವಿಚಾರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಪರಪ್ಪನ ಅಗ್ರಹಾರ ಅವ್ಯಹಾರದ ತನಿಖೆ ಆದೇಶ
ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕುರಿತಂತೆ ವರದಿ ಸಲ್ಲಿಕೆ ಯಾದ ನಂತರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ಕಾರಾಗೃಹಗಳು ಅಪರಾಧ ಕೃತ್ಯ ನಡೆಸುವ ಕೇಂದ್ರ ಸ್ಥಾನಗಳು ಆಗಬಾರದು ಎನ್ನುವ ಕಾರಣಕ್ಕೆ ಆ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಲೋಪಗಳಾಗುತ್ತಿದ್ದರೆ, ಅದರವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿದ್ದೇನೆ ಎಂದರು. ಕಾರಾಗೃಹಗಳ ಡಿಜಿಪಿ ಅಲೋಕ್ ಮೋಹನ್ ಪರಪ್ಪನ ಅಗ್ರಜಹಾರ ಜೈಲಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಉನ್ನತ ಮಟ್ದದ ತನಿಖೆ ಮಾಡಲಾಗುತ್ತದೆ. ಈ ಹಿಂದೆಯೂ
ತಪ್ಪಿತಸ್ಥರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲಾಗಿದೆ. ಈಗಲೂ ತಪ್ಪಿತಸ್ಥರು ಯಾರಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಅವ್ಯವಹಾರದಲ್ಲಿ ಭಾಗಿಯಾದ ಕೈದಿಗಳಷ್ಟೆ ಅಲ್ಲ , ಅಧಿಕಾರಿಗಳ ವಿರುದ್ಧವು ಕ್ರಿಮಿನಲ್ ಪ್ರಕರಣ ಹೂಡಲಾಗುತ್ತದೆ. ಜೈಲಿನ ಮ್ಯಾನುಯಲ್ ಬದಲಾವಣೆಗೆ ಸಿದ್ದತೆ ನಡೆಯುತ್ತಿದ್ದು, ಶೀಘ್ರವೇ ಬದಲಾವಣೆ ಮಾಡಲಾಗುವುದು ಎಂದರು.

***

ವೈರಲ್ ಆಗಿರುವ ವಿಡಿಯೋ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದೆ. ಸಚಿವರು ತನಿಖೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ತಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ಭಾಗಿಯಾದ ಜೈಲು ಅಧಿಕಾರಿಗಳ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.

ಅಲೋಕ್ ಮೋಹನ್, ಕಾರಾಗೃಹ ಇಲಾಖೆ ಡಿಜಿಪಿ

ಪರಪ್ಪನ ಅಗ್ರಹಾರದಲ್ಲಿನ ವಸ್ತುಸ್ಥಿತಿಯ ಬಗ್ಗೆ ವರದಿ ತರಿಸಿಕೊಂಡು, ಡಿಜಿ(ಕಾರಾಗೃಹ) ಅವರೊಂದಿಗೆ ಚರ್ಚಿಸಿ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ