ಬೆಂಗಳೂರು: ಕರ್ನಾಟಕದ ಮಡಿಕೇರಿ (Madikeri) ದೇಶದ ಅತ್ಯಂತ ಸ್ವಚ್ಛ ವಾಯು (Clean Air) ಗುಣಮಟ್ಟ ಹೊಂದಿರುವ ನಗರ ಎನಿಸಿಕೊಂಡಿದೆ. ಕರ್ನಾಟಕದ (Karnataka) 25 ನಗರಗಳು ವಾಯು ಗುಣಮಟ್ಟದ ಮಾನದಂಡಗಳನ್ನು (NAAQS) ಪೂರೈಸಿವೆ. ಇದು ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ (NCAP) ಪರಿಶೀಲಿಸುವ ಹೊಸ ಅಧ್ಯಯನದ ವರದಿಯ ಫಲಿತಾಂಶ.
PM10 ಮಾಲಿನ್ಯದ ಭಾರತೀಯ ಮಾನದಂಡಗಳಲ್ಲಿ ಮಡಿಕೇರಿ “ದೇಶದ ಸ್ವಚ್ಛ ನಗರ” ಎಂದು ಕರೆಯಲ್ಪಟ್ಟಿದೆ. ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಆಂಡ್ ಕ್ಲೀನ್ ಏರ್ (CREA) ಸಂಶೋಧಕರು ಈ ವರದಿ ತಯಾರಿಸಿದ್ದಾರೆ. ಭಾರತದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ NCAPಯ ಪ್ರಭಾವವನ್ನು ಇದು ಪರಿಶೀಲಿಸಿದೆ.
ನಿರ್ದಿಷ್ಟವಾಗಿ PM 10, PM 2.5 ಗಾತ್ರದ ದೂಳಿನ ಕಣಗಳ ವಿಷಯದಲ್ಲಿ ಗಮನಹರಿಸಬೇಕಾಗಿರುವುದನ್ನು ಎತ್ತಿ ತೋರಿಸಿದೆ. ದೇಶದ 130 ನಗರಗಳಲ್ಲಿ 28 ಇನ್ನೂ ವಾಯು ಗುಣಮಟ್ಟ ನಿಗಾ ಕೇಂದ್ರಗಳನ್ನು ಹೊಂದಿಲ್ಲ. ಕೇವಲ 97 ನಗರಗಳು 80% ಅಥವಾ ಹೆಚ್ಚಿನ PM10 ಮಾಹಿತಿಯನ್ನು ವರದಿ ಮಾಡಿವೆ. 2024ರಲ್ಲಿ 253 ನಗರಗಳಲ್ಲಿ 206 NAAQS ಅನ್ನು ಮೀರಿವೆ. ಕೇವಲ 47 ನಗರಗಳು NAAQS ಅನ್ನು ಪೂರೈಸಿವೆ. 61 ನಗರಗಳು PM10ರ ಸಾಂದ್ರತೆಯ NAAQS ಅನ್ನು ಮೀರಿವೆ. ಈ ದೋಷಗಳನ್ನು ಗುರುತಿಸಿದ್ದರೂ ಅನೇಕ ನಗರಗಳು ಮಾಲಿನ್ಯದ ಮೂಲಗಳನ್ನು ಗುರುತಿಸಲು ಪ್ರಾರಂಭಿಸಿಲ್ಲ. ಕೇವಲ 50 ನಗರಗಳು ಮೂಲವ್ಯವಸ್ಥೆಯ ಅಧ್ಯಯನ ಸಿದ್ಧಪಡಿಸುತ್ತಿವೆ.
ರಾಜಸ್ಥಾನ ಮತ್ತು ಮಹಾರಾಷ್ಟ್ರಗಳ ನಗರಗಳು ಹೆಚ್ಚಿನ ಮಾಲಿನ್ಯ ಹೊಂದಿವೆ. ಅಲ್ಲಿನ ಎಲ್ಲಾ 34 ಮತ್ತು 31 ನಗರಗಳು NAAQS ಅನ್ನು ಮೀರಿವೆ. ಹಾಗೆಯೇ ಬಿಹಾರ ಮತ್ತು ಹರಿಯಾಣದ ಸ್ಥಿತಿ ಕೂಡ ಆತಂಕಕಾರಿ. ಅಲ್ಲಿನ ಎಲ್ಲಾ 23 ಮತ್ತು 22 ನಗರಗಳು ಮಾಲಿನ್ಯಪೂರಿತ. ಕರ್ನಾಟಕದ ಸ್ಥಿತಿ ಉತ್ತಮವಾಗಿದೆ. ಇಲ್ಲಿನ 25ರಲ್ಲಿ 21 ನಗರಗಳು PM10 ಕಣಗಳ ಮಾನದಂಡವನ್ನು ಪೂರೈಸಿವೆ ಎಂದು ಅಧ್ಯಯನ ಹೇಳಿದೆ.
ದೇಶದ ಟಾಪ್ 50 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕರ್ನಾಟಕವೂ ಮುಂದಿದೆ. ಪ್ರತಿ ಘನ ಮೀಟರ್ ಗಾಳಿಗೆ 32 ಮೈಕ್ರೊಗ್ರಾಂ PM10 ಕಣಗಳ ವಾರ್ಷಿಕ ಸರಾಸರಿಯೊಂದಿಗೆ ಮಡಿಕೇರಿಯು ಭಾರತದಲ್ಲಿ ಅತ್ಯಂತ ಸ್ವಚ್ಛ ನಗರವಾಗಿದೆ. ಈ ಮೌಲ್ಯವು NAAQS ಮಾನದಂಡದ ಒಳಗೇ ಇದ್ದರೂ, ಇದು WHO ಶಿಫಾರಸು ಮಾಡಿದ ಮಾನದಂಡಗಳಿಗಿಂತ ಎರಡು ಪಟ್ಟು ಹೆಚ್ಚು ಎಂದು ಅಧ್ಯಯನವು ಹೇಳಿದೆ.