ಮಂಡ್ಯ: ಬಸ್ ಓವರ್‌ಟೇಕ್ ಮಾಡುವ ವೇಳೆ ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟು, ಒಬ್ಬ ಗಂಭೀರವಾಗಿ ಗಾಯಗೊಂಡಿರುವುದು (Mandya Accident) ಜಿಲ್ಲೆಯ ಮಳವಳ್ಳಿ ತಾಲೂಕಿನ ಬೋಸೇಗೌಡನದೊಡ್ಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ನಡೆದಿದೆ.
ಬೆಂಗಳೂರಿನ ಪ್ರಣವ್, ಆಕಾಶ್, ಆದರ್ಶ ಮೃತರು. ಪೃಥ್ವಿ ಗಾಯಾಳುವಾಗಿದ್ದಾನೆ. ಈತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳು ಬೆಂಗಳೂರಿನಿಂದ ಮೈಸೂರು ಜಿಲ್ಲೆಯ ತಲಕಾಡು ಪ್ರವಾಸಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕೆಎಸ್ಆರ್ಟಿಸಿ ಬಸ್ ಅನ್ನು ಓವರ್‌ಟೇಕ್ ಮಾಡಿ ಎದುರಿಗೆ ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿಯಾಗಿದೆ. ಹೀಗಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬನಿಗೆ ಗಂಭೀರ ಗಾಯಗಳಾಗಿವೆ. ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸುದ್ದಿಯನ್ನೂ ಓದಿ | Self Harming: ಕೋಟಾದಲ್ಲಿ ಜೆಇಇಗೆ ಸಿದ್ಧತೆ ನಡೆಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ; ಈ ವರ್ಷ 20ನೇ ಕೇಸ್
ಪತಿ ಮೇಲೆ ಅನೈತಿಕ ಸಂಬಂಧ ಶಂಕೆ; ಬೇಸತ್ತು ನೇಣಿಗೆ ಶರಣಾದ ಮಹಿಳೆ
ಬೆಂಗಳೂರು: ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ನಗರದ ಬಾಗಲಗುಂಟೆಯಲ್ಲಿ ನಡೆದಿದೆ. ಅನೈತಿಕ ಸಂಬಂಧವಿದೆ ಎಂದು ಅನುಮಾನದಿಂದ ಪತಿ ಜತೆ ಜಗಳ ಮಾಡಿಕೊಂಡ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡವರು. ಪತಿ ನವೀನ್ ಜತೆ ಜಗಳ ಮಾಡಿಕೊಂಡು ರೂಮ್ ಲಾಕ್ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ 9 ವರ್ಷಗಳ ಹಿಂದೆ ಮದುವೆ ಆಗಿತ್ತು. ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ಬರ ಬರುತ್ತಾ ಪತಿ ನವೀನ್ ಮೇಲೆ ಪತ್ನಿಗೆ ಅನುಮಾನ ಶುರುವಾಗಿದೆ. ಪತಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆಂದು ಶಂಕಿಸಿ ಪತ್ನಿ ಐಶ್ವರ್ಯಾ ಜಗಳ ಮಾಡಿದ್ದಾರೆ. ಇತ್ತೀಚೆಗೆ ಧರ್ಮಸ್ಥಳಕ್ಕೆಂದು ನವೀನ್ ಟ್ರಿಪ್ ಹೋಗಿದ್ದರು. ಅವರು ಮನೆಗೆ ವಾಪಸ್ ಬಂದಾಗ ಮತ್ತೆ ಪತಿ ಹಾಗೂ ಪತ್ನಿ ಜಗಳ ನಡೆದಿದೆ. ಬಳಿಕ ಪತಿ ಮೇಲೆ ಸಿಟ್ಟಿನಿಂದ ಪತ್ನಿ ಐಶ್ವರ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | UP Shocker: ಫಸ್ಟ್ ನೈಟ್‌ನಂದೇ ಪತಿಯ ಬಳಿ ಬಿಯರ್, ಗಾಂಜಾಕ್ಕಾಗಿ ಬೇಡಿಕೆಯಿಟ್ಟ ವಧು!
ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಸಾವು
ಶಿವಮೊಗ್ಗ: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಶಿವಮೊಗ್ಗದ ನಂಜಪ್ಪ ಲೇಔಟ್‌ನಲ್ಲಿರುವ ಇಂಪಿರಿಯರ್ ಕಾಲೇಜಿನಲ್ಲಿ ಬುಧವಾರ (ಡಿ. 18) ನಡೆದಿದೆ. ಮುಬಷಿರ್ ಬಾನು (17) ಮೃತ ದುರ್ದೈವಿ. ದ್ವಿತೀಯ ಪಿಯುಸಿ ಓದುತ್ತಿದ್ದ ಮುಬಷಿರ್ ಬಾನು, ಕಾಲೇಜಿನಲ್ಲಿ ಪ್ರಜ್ಞೆ ತಪ್ಪಿ ಏಕಾಏಕಿ ಹಿಮ್ಮುಖವಾಗಿ ಬಿದ್ದಿದ್ದಾಳೆ. ಪ್ರೌಢ ಶಾಲೆಯ ಶಿಕ್ಷಕರು ಕಾಲೇಜಿಗೆ ಬಂದ ಹಿನ್ನೆಲೆಯಲ್ಲಿ ಮಾತನಾಡಿಸಲೆಂದು ಪ್ರಿನ್ಸಿಪಾಲ್ ಕಚೇರಿಗೆ ಬರುತ್ತಿದ್ದ ವೇಳೆ ಲೋ ಬಿಪಿಯಿಂದ ಮೂರ್ಛೆ ತಪ್ಪಿ ಬಿದ್ದಿದ್ದಾಳೆ. ಈ ವೇಳೆ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಯುವತಿ ಬಿದ್ದು ಸಾವನ್ನಪ್ಪಿದ ವಿಡಿಯೋ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.