Wednesday, 13th November 2024

Temple Entry: ಪ್ರಬಲ ಜಾತಿಗಳ ವಿರೋಧದ ನಡುವೆ ದೇಗುಲ ಪ್ರವೇಶಿಸಿ ಪೂಜಿಸಿದ ಪರಿಶಿಷ್ಟರು

temple entry

ಮಂಡ್ಯ: ತಾಲ್ಲೂಕಿನ (Mandya news) ಹನಕೆರೆ ಗ್ರಾಮದ ಕಾಲಭೈರವೇಶ್ವರ ದೇವಾಲಯಕ್ಕೆ ಭಾನುವಾರ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶಿಷ್ಟ ಜಾತಿಯ ಜನರಿಗೆ ಪ್ರವೇಶ (temple entry) ನೀಡಿ, ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರಬಲ ಜಾತಿಗಳ ಕೆಲವರು ಗಲಾಟೆ ನಡೆಸಿದರು.

ಈ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದೆ. ಎರಡು ವರ್ಷದ ಹಿಂದೆ ₹1.5 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಈ ಹಿಂದಿನಿಂದಲೂ ಇಲ್ಲಿಗೆ ಪರಿಶಿಷ್ಟರ ಪ್ರವೇಶ-ಪೂಜೆಗೆ ಪ್ರಬಲ ಜಾತಿಯ ಜನರು ಅವಕಾಶ ನೀಡಿರಲಿಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಗ್ರಾಮದ ಪರಿಶಿಷ್ಟ ಸಮುದಾಯದ ಯುವಕರು ಪೊಲೀಸರು ಹಾಗೂ ತಾಲ್ಲೂಕು ಆಡಳಿತದ ಮೊರೆ ಹೋಗಿದ್ದರು. ಶಾಂತಿಸಭೆಯೂ ನಡೆದಿತ್ತು. ಆದರೂ ದಲಿತ ಸಮುದಾಯದವರಿಗೆ ಪ್ರವೇಶ ನೀಡಲು ಪ್ರಬಲ ಜಾತಿಗಳು ಒಪ್ಪಿರಲಿಲ್ಲ.

ಶನಿವಾರ ರಾತ್ರಿಯೇ ಗ್ರಾಮದ ಪರಿಶಿಷ್ಟ ಸಮುದಾಯದ ಯುವಕರ ಗುಂಪು ದೇಗುಲದ ಪ್ರವೇಶಕ್ಕೆ ಯತ್ನಿಸಿದ್ದು, ಪ್ರಬಲ ಜಾತಿಗಳ ಗುಂಪು ಇದಕ್ಕೆ ಅವಕಾಶ ನೀಡಿರಲಿಲ್ಲ. ಭಾನುವಾರ ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್‌, ಮಾಜಿ ಶಾಸಕ ಶ್ರೀನಿವಾಸ್‌ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ದೇವಾಲಯ ಪ್ರವೇಶಿಸಿ, ದೇವರಿಗೆ ಪೂಜೆ ಸಲ್ಲಿಸಿದರು.

ಕಾಲಭೈರವೇಶ್ವರ ಸ್ವಾಮಿ ಪೂಜೆಗೆ ಬಂದಿದ್ದ ದಲಿತರ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಕೆಲವರಷ್ಟೇ ವಿರೋಧಿಸುತ್ತಿದ್ದು, ಸಮಸ್ಯೆ ಶಾಂತಿಯುತವಾಗಿ ಬಗೆಹರಿದಿದೆ ಎಂದು ಶಿವಕುಮಾರ್ ಬಿರಾದಾರ್, ಮಂಡ್ಯ ತಹಶೀಲ್ದಾರ್‌ ತಿಳಿಸಿದರು.

ಪರಿಶಿಷ್ಟರ ದೇಗುಲ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ ಗುಂಪೊಂದು ದೇಗುಲದ ಮುಂಭಾಗ ಇಡಲಾಗಿದ್ದ ನಾಮಫಲಕವನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿತು. ದೇವಾಲಯದ ಒಳ ನುಗ್ಗಿದ ಯುವಕರು, ಉತ್ಸವ ಮೂರ್ತಿಯನ್ನು ಹೊತ್ತೊಯ್ದು ಎದುರು ಇದ್ದ ಮಹದೇಶ್ವರ ದೇವಾಲಯದಲ್ಲಿಟ್ಟ ಘಟನೆಯೂ ನಡೆಯಿತು.

‘ ಗ್ರಾಮದಲ್ಲಿರುವ ಎರಡು ಗುಂಪಿನ ದಲಿತರ ಪೂಜೆಗೆ ಅನುಕೂಲವಾಗುವಂತೆ ಚಿಕ್ಕಮ್ಮ ಮತ್ತು ಮಂಚಮ್ಮ ದೇಗುಲವನ್ನು ಕಟ್ಟಿಸಿಕೊಟ್ಟಿದ್ದೇವೆ. ಈಗ ಏಕಾಏಕಿ ಕಾಲಭೈರವೇಶ್ವರ ಸ್ವಾಮಿ ದೇಗುಲ ಪ್ರವೇಶಿಸಿ ನಾವು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯ ಮುರಿದಿದ್ದಾರೆ’ ಎಂದು ಪ್ರಬಲ ಜಾತಿಗಳ ಗುಂಪು ಅಧಿಕಾರಿಗಳು ಮತ್ತು ಪೊಲೀಸರ ಜೊತೆ ವಾಗ್ವಾದ ನಡೆಸಿತು.

ತಹಶೀಲ್ದಾರ್‌ ಶಿವಕುಮಾರ್ ಬಿರಾದಾರ್ ಮಾತನಾಡಿ ‘ ಇದು ಮುಜರಾಯಿ ಇಲಾಖೆಗೆ ಸೇರಿದ ದೇಗುಲವಾಗಿದ್ದು, ಎಲ್ಲರಿಗೂ ಮುಕ್ತ ಪ್ರವೇಶವಿದೆ. ಯಾರೂ ಅಡ್ಡಿಪಡಿಸು ವಂತಿಲ್ಲ’ ಎಂದು ಎಚ್ಚರಿಸಿದರು. ಅಂತಿಮವಾಗಿ ಪೊಲೀಸ್ ಭದ್ರತೆಯಲ್ಲಿ ದೇಗುಲ ಪ್ರವೇಶ ನಡೆದಿದ್ದು, ಗ್ರಾಮದಲ್ಲಿ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿತ್ತು.