Monday, 25th November 2024

Mandya Violence: ಗಣೇಶೋತ್ಸವ ಮೆರವಣಿಗೆ ವೇಳೆ ಭಾರೀ ಕಲ್ಲು ತೂರಾಟ; ಪೆಟ್ರೋಲ್‌ ಬಾಂಬ್‌ ಎಸೆದು ಅನ್ಯಕೋಮಿನ ಯುವಕರ ದಾಂಧಲೆ

Mandya violence

ಮಂಡ್ಯ: ಮಂಡ್ಯ(Mandya Violence)ದಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿ ಪೆಟ್ರೋಲ್‌ ಬಾಂಬ್‌ ಎಸೆದು ದಾಂಧಲೆ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ನಾಗಮಂಗಲ(Nagamangala) ದ ಬದರಿಕೊಪ್ಪಲಿನಲ್ಲಿ ಅದ್ದೂರಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. ನಾಗಮಂಗಲದ ಮೈಸೂರು ರಸ್ತೆ(Mysore road)ಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಅನ್ಯಕೋಮಿನ ಯುವಕರು ಕಲ್ಲುತೂರಾಟ ನಡೆಸಿದ್ದರು. ಈ ವೇಳೆ ಹಿಂದೂ-ಮುಸ್ಲಿಂ ಯುವಕರ ನಡುವೆ ವಾಕ್ಸಮರ, ತಳ್ಳಾಟ ನೂಕಾಟ ನಡೆಯಿತು. ಬಳಿಕ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.

ಇನ್ನು ದುಷ್ಕರ್ಮಿಗಳ ಗುಂಪು ಅಂಗಡಿ, ಅಂಗಡಿ ಮುಂದಿದ್ದ ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ ರಸ್ತೆ ಮಧ್ಯೆ ಕತ್ತಿ ಹಿಡಿದು ಝಳಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸುಮಾರು 46 ಮಂದಿಯನ್ನುಅರೆಸ್ಟ್‌ ಮಾಡಿದ್ದಾರೆ. ಪ್ರಸ್ತುತ ಪ್ರದೇಶದಲ್ಲಿ 144ಸೆಕ್ಷನ್‌ ಜಾರಿಯಾಗಿದೆ.

ವದಂತಿಗೆ ಕಿವಿಗೊಡಬೇಡಿ

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಚೆಲುವರಾಯಸ್ವಾಮಿಯವರು, ನಮ್ಮ ನಾಗಮಂಗಲ ಶಾಂತಿ, ಸೌಹಾರ್ದತೆಯ ನೆಲೆ. ಇಲ್ಲಿ ಅಶಾಂತಿ ಮೂಡಿಸುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ. ತಪ್ಪು ಮಾಡಿರುವವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಪರಿಸ್ಥಿತಿ ಈಗ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ. ಸೆಕ್ಷನ್‌ 144 ಕೂಡ ಜಾರಿಯಲ್ಲಿದೆ. ಯಾವುದೇ ಆಸ್ತಿ ನಷ್ಟ, ಪ್ರಾಣಹಾನಿಯಾಗದಂತೆ ನೋಡಿಕೊಳ್ಳಿ. ಪರಿಸ್ಥಿತಿ ನಿಯಂತ್ರಣಕ್ಕೆ ಸೂಚನೆ ಕೊಟ್ಟಿದ್ದೇವೆ. ಆ ಕೆಲಸ ಆಗುತ್ತಿದೆ ಎಂದು ತಿಳಿಸಿದರು.

ಗುಜರಾತ್‌ನಲ್ಲೂ ಕೆಲವು ದಿನಗಳ ಹಿಂದೆ ಇಂತಹದ್ಧೇ ಒಂದು ಘಟನೆ ನಡೆದಿತ್ತು. ಸೂರತ್ ನಗರದಲ್ಲಿ ನಡೆದ ಗಣಪತಿ ಉತ್ಸವದ ವೇಳೆ ಅನ್ಯಕೋಮಿನ ದುಷ್ಕರ್ಮಿಗಳು ಗಣಪತಿ ಪೆಂಡಾಲ್‌ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮವಾಗಿ ಗಣೇಶನ ವಿಗ್ರಹವನ್ನು ಹಾನಿಗೊಳಿಸಲಾಗಿದೆ. ಭಾನುವಾರ ತಡರಾತ್ರಿ ಸೈಯದ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಭಾರೀ ಘರ್ಷಣೆ ಏರ್ಪಟ್ಟಿದೆ.

ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮಾರು 30ಕ್ಕೂ ಅಧಿಕ ಜನರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಬಂಧಿತರಲ್ಲಿ ಅನೇಕರು ಅಪ್ರಾಪ್ತರಾಗಿದ್ದು, ಸುಮಾರು 300 ಜನರ ಗುಂಪು ಲಾಲ್‌ಗೇಟ್ ಪೊಲೀಸ್ ಠಾಣೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅಲ್ಲಿ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಕೆಲವು ಪೊಲೀಸರು ಗಾಯಗೊಂಡಿದ್ದಾರೆ ಮತ್ತು ಪೊಲೀಸ್ ವಾಹನಕ್ಕೆ ಹಾನಿಯಾಗಿದೆ. ಕೊನೆಗೆ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು ಮತ್ತು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು ಎಂದು ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗಹ್ಲೌತ್ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ಬಾಂಗ್ಲಾದೇಶದ ಕೋಮುಗಲಭೆ ಘಟನೆೆಗೆ ಮರುಗಿದ ಮೊರ್ತಾಜಾ