Thursday, 28th November 2024

ಅಪಾರ ನಿರೀಕ್ಷೆಯಲ್ಲಿ ಮೇವು ಬೆಳೆಗಾರರು

ಎಂಟೇ ತಿಂಗಳಲ್ಲಿ ಹೂಬಿಟ್ಟ ಮಲ್ಲಿಕಾ ತಳಿ

ಉತ್ತಮ ಮುಂಗಾರು ಮಳೆ

ಅರಳಿದ ರೈತನ ಮುಖ

ವಿಶೇಷ ವರದಿ: ನಾರಾಯಣಸ್ವಾಮಿ.ಸಿ.ಎಸ್. ಚಿಕ್ಕ ಕೋಲಿಗ

ಹೊಸಕೋಟೆ: ಮಾವಿನ ಗಿಡಗಳಲ್ಲಿ ಚೆನ್ನಾಗಿ ಹೂವು ಬಿಟ್ಟಿರುವುದರಿಂದ ಈ ಬಾರಿ ಉತ್ತಮ ಫಸಲು ಬರುವ ನಿರೀಕ್ಷೆ ಹುಟ್ಟಿಸಿದ್ದು, ರೈತರ ಮುಖದಲ್ಲಿ ಮಂದಹಾಸವನ್ನು ಮೂಡಿಸಿದೆ.

ತಾಲೂಕಿನ ಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮಾವುಬೆಳೆ ಬೆಳೆಯಲಾಗುತ್ತಿದ್ದು, ಸುಮಾರು 100-200 ಹೆಕ್ಟೇರ್ ನಷ್ಟು ಬೆಳೆಯಲಾಗುತ್ತಿದೆ, ತಾಲೂಕಿನಲ್ಲಿ ಸುಮಾರು 400-500 ಹೆಕ್ಟೇರ್‌ಗಳಷ್ಟು ಬೆಳೆಯ ಲಾಗುತ್ತಿದೆ. ಈ ಬಾರಿ ಉತ್ತಮ ಮಾರುಕಟ್ಟೆ ಬೆಲೆ ಸಿಗುವ ಲಕ್ಷಣಗಳು ಕಂಡುಬಂದಿದೆ.

ಅಧಿಕ ಬೆಳೆ ಕೊಡುವ ಸಾಧ್ಯತೆ: ಮಾವಿನ ಬೆಳೆಗೆ 2-3 ದಿನಕ್ಕೆ ಒಂದು ಬಾರಿ ಹನಿ ನೀರಾವರಿ ಪದ್ಧತಿಯಲ್ಲಿ ನೀರು ಹಾಯಿಸ ಬೇಕಾಗುತ್ತದೆ. ಬೆಳಗಿನ ಜಾವ ಹೆಚ್ಚು ಮಂಜು ಬೀಳುವುದರಿಂದ ಗಿಡಕ್ಕೆ ಬೂದಿರೋಗ ತಗಲುವ ಸಾಧ್ಯತೆ ಇರುತ್ತದೆ. ಈ ರೋಗದ
ನಿಯಂತ್ರಣಕ್ಕೆ ನಿರ್ವಹಣೆ ಅತಿ ಮುಖ್ಯ. ದಿನ ಬಿಟ್ಟು ದಿನ ಗಿಡಗಳಿಗೆ ಔಷಧ ಸಿಂಪಡಿಸಿ ಸರಿಯಾದ ನಿರ್ವಹಣೆ ಮಾಡಿದರೆ ಬೂದಿರೋಗದಿಂದ ತಪ್ಪಿಸಿಕೊಂಡು ಫಸಲು ಸಮೃದ್ಧವಾಗಿ ಬೆಳೆಯಲು ಸಹಕಾರಿಯಾಗುತ್ತದೆ.

ಇದೇ ಜಾಗದಲ್ಲಿ ಮಾವಿನ ಗಿಡ ನೆಡುವುದರ ಜತೆಗೆ ತೊಗರಿ ಬೇಳೆ, ಅವರೆ ಬೇಳೆ, ಹುರಳಿ ಬೇಳೆಯನ್ನು ಸಹ ಮಿಶ್ರವನ್ನಾಗಿಸಿ ಬೆಳೆಯಲಾಗಿತ್ತು. ಇದೀಗ ಮಲ್ಲಿಕಾ ಮಾವು ಬೆಳೆಯುತ್ತಿದ್ದು, ಅಧಿಕ ಇಳುವರಿ ಕೊಡುವ ಸಾಧ್ಯತೆ ಇದೆ. ಪ್ರತಿಯೊಂದು ತೋಟಗಳ ಮಾವಿನ ಮರಗಳಲ್ಲಿ ಹೂವು ತುಂಬಿ ಕಂಗೊಳಿಸುತ್ತಿದೆ. ಈಗಿರುವ ಹೂವಿನ ಪ್ರಮಾಣಕ್ಯನುಗುಣವಾಗಿ ಕಾಯ್ದರೆ ಉತ್ತಮ  ಫಸಲು ದೊರೆಯುತ್ತದೆ.

ಪ್ರಬಲ ಮುಂಗಾರು, ಚಿಗುರೊಡೆದ ಆಸೆ: ನಂದಗುಡಿ ಸುತ್ತಮುತ್ತ ಮಾವಿನ ಮರಗಳ ತುಂಬಾ ಹೂ ತುಂಬಿ ಕಂಗೊಳಿಸು ತ್ತಿದ್ದು, ಮಾವು ಬೆಳೆಗಾರರು ಉತ್ತಮ ಫಸಲಿನ ನಿರೀಕ್ಷಿಸಬಹುದು ಈ ಬಾರಿ ಜೂನ್ ತಿಂಗಳಿಂದಲೂ ಉತ್ತಮ ಮುಂಗಾರು ಮಳೆಯಾಗಿದ್ದು ಮಾವಿನ ಬೆಳೆಗೆ ಅನುಕೂಲವಾಗಿದ್ದು ಪರಿಣಾಮ ಮಾವಿನ ಗಿಡಗಳು ಉತ್ತಮವಾಗಿ ಹೂ ಹೊಡೆದಿದೆ. ಈಗಿರುವ ಹೂವಿನ ಪ್ರಮಾಣದಷ್ಟೇ ಕಾಯಿ ಬಿಡುತ್ತದೆ ಅಂದಾಜಿಸಲಾಗಿದೆ ಉತ್ತಮವಾಗಿ ಹೂ ಬಂದಿರುವುದು ಸಾಮಾನ್ಯವಾಗಿ ರೈತರು ಹಾಗೂ ವ್ಯಾಪಾರಿಗಳಿಗೆ ಸಂತಸ ಉಂಟುಮಾಡಿದೆ.

ಕಳೆದ ಬಾರಿ ಕೈ ಸುಟ್ಟುಕೊಂಡ ರೈತ, ವ್ಯಾಪಾರಿ: ಕಳೆದ ಬಾರಿ ಉತ್ತಮವಾಗಿದ್ದ ಮಾವು ಫಸಲು ರೋಗ ಬಾಧೆ ಹಾಗೂ ನಿಫಾ ವೈರಸ್ ನಿಂದಾಗಿ ಮಾವಿನ ಹಣ್ಣನ್ನು ಕೇಳುವವರಿಲ್ಲದೆ ಅತೀ ಕನಿಷ್ಠ ಬೆಲೆಗೆ ಹೋದಷ್ಟಕ್ಕೆ ಮಾರಿದ ಘಟನೆ ಹಲವಡೆ ನಡೆ ಯಿತು. ಇದರಿಂದ ಬೇಸತ್ತ ವ್ಯಾಪಾರಸ್ಥರು ಮಾವಿನ ತೋಟದ ಕಡೆಗೇ ಸುಳಿಯದಿದ್ದರೆ, ಇನ್ನೂ ಮಾವು ಬೆಳೆಗಾರರು ಅನೇಕ ಕಡೆ ಫಸಲಿನ ಮರಗಳನ್ನು ಕಡಿದು ಹಾಕಿದ ಪ್ರಸಂಗಗಳು ನಡೆದಿದ್ದವು.

ಎಂಟು ತಿಂಗಳಲ್ಲೇ ಫಸಲು: ಕಳೆದ ಆಗಸ್ಟ್ ತಿಂಗಳಲ್ಲಿ ಕೆಲವರು ಗಿಡಹಾಕಿ ಸರಿಯಾಗಿ ಪೋಷಿಸಿದ ಕಾರಣ ಅವರ ತೋಟ ಗಳಲ್ಲಿ ಎಂಟು ತಿಂಗಳಲ್ಲೇ ಉತ್ತಮ ಹೂ ಬಿಟ್ಟಿದೆ. ಈ ಗಿಡಗಳಿಗೆ ಕಾಲ ಕಾಲಕ್ಕೆ ನೀರು, ಗೊಬ್ಬರ, ಹಿಂಡಿ ಸೇರಿದಂತೆ ಸರಿಯಾದ ನಿರ್ವಹಣೆ ಮಾಡಿದ್ದರಿಂದ ಈ ವರ್ಷ ಉತ್ತಮ ಫಸಲಿನೊಂದಿಗೆ ಲಾಭ ಗಳಿಸಲು ಸಾಧ್ಯವಾಗಲಿದೆ ಎಂಬುದು ರೈತರು ತಿಳಿಸಿ ದ್ದಾರೆ.

ಕೋಟ್ಸ್‌

ಈ ಬಾರಿ ಜಿಲ್ಲಾಯಾದ್ಯಂತ ಬೆಳೆ ಉತ್ತಮವಾಗಿದೆ. ಆದರೆ ಎಲ್ಲಾ ಕಡೆ ಫಸಲು ಚೆನ್ನಾಗಿ ಬಂದರೆ ಬೆಲೆ ಇಳಿಯುವ ಲಕ್ಷಣಗಳು ಗೋಚರಿಸಲಿದ್ದು, ಆತಂಕ ಉಂಟುಮಾಡಿದೆ. ಈಗಾದಲ್ಲಿ ಸರಕಾರ ಮಾವು ವ್ಯಾಪಾರಿಗಳ ಹಿತ ಕಾಯಬೇಕು.
– ಅನ್ವರ್ ಸಾಬ್ ಮಾವು ವ್ಯಾಪಾರಿ

ಯಾವುದೇ ಬೆಳೆ ಬೆಳೆಯಬೇಕಾದರೇ ಸರಿಯಾದ ಮಾರ್ಗದರ್ಶನವನ್ನು ತೋಟಗಾರಿಕಾ ಇಲಾಯಿಂದ ಪಡೆದುಕೊಳ್ಳಬೇಕು.
ಅಗತ್ಯಕ್ಕೆ ತಕ್ಕಂತೆ ಬೆಳೆಯನ್ನು ಬೆಳೆಯಬೇಕು, ಸರಿಯಾದ ನಿರ್ವಹಣೆಯಿಂದ ಹೆಚ್ಚಿನ ಇಳುವರಿ ಕಾಣಬಹುದು. ರೈತರು ಔಷಧವನ್ನು ಸಕಾಲಕ್ಕೆ ಗಿಡಗಳಿಗೆ ಒದಗಿಸಬೇಕಾಗುತ್ತದೆ. ರೈತರು ಲಾಭಗಳಿತ್ತಾರೆಯೋ ಇಲ್ಲವೋ ಎಂಬುವುದು
ಮಾರುಕಟ್ಟೆಯ ಬೆಲೆ ನಿಗದಿಯ ಮೇಲೆ ನಿಂತಿದೆ.
-ಮುನಿನಾರಾಯಣಸ್ವಾಮಿ ರೈತ, ಚಿಕ್ಕಕೋಲಿಗ

ಬಾದಾಮಿ, ಸೇಂದೂರ ನೀಲಂ, ಮಲ್ಲಿಕಾ, ಮಲಗೋಬ, ತೋತಾಪರಿ, ತಳಿಯ ಮಾವಿನ ತೋಟಗಳಲ್ಲಿ ಉತ್ತಮವಾಗಿ ಹೂವಾಗಿದೆ. ಆದರೂ ಹೂವು ಪೀಚಾಗುವವರೆಗೆ ಆತಂಕ ಇದ್ದೇ ಇರುತ್ತದೆ. ಕಳೆದ ಬಾರಿಯ ನಷ್ಟವನ್ನು ಊಹಿಸಿದರೆ
ಮಾವಿನ ಸಹವಾಸವೇ ಬೇಡ ಎನಿಸುತ್ತದೆ.

– ಕರೀಂ ಪೀರ್ ಮಾವು ವ್ಯಾಪಾರಿ