Friday, 27th December 2024

Manmohan Singh: ಮನಮೋಹನ್‌ ಸಿಂಗ್‌ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆಶಿ ಸೇರಿ ಗಣ್ಯರ ಸಂತಾಪ; ನಾಳಿನ ಬೆಳಗಾವಿ ಕಾರ್ಯಕ್ರಮ ರದ್ದು

Manmohan Singh

ಬೆಂಗಳೂರು: ಮಾಜಿ ಪ್ರಧಾನಿ, ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್‌ ಸಿಂಗ್‌ (Manmohan Singh) ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಪ್ರಮುಖ ರಾಜಕಾರಣಿಗಳು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು ಮಾಜಿ ಪ್ರಧಾನಿ ನಿಧನವಾಗಿದ್ದರಿಂದ ನಾಳೆ (ಡಿ. 27) ಐತಿಹಾಸಿಕ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ ರದ್ದು ಮಾಡಲಾಗಿದೆ.

1924ರಲ್ಲಿ ನಡೆದ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಸಮಾರಂಭದ ಭಾಗವಾಗಿ ಬೆಳಗಾವಿಯಲ್ಲಿ ರಾಜ್ಯ ಸರ್ಕಾರದಿಂದ ಗಾಂಧಿ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎರಡನೇ ದಿನವಾದ ಶುಕ್ರವಾರ ಸುವರ್ಣ ವಿಧಾನಸೌಧದ ಆವರಣದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಬೇಕಿತ್ತು. ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್‌ ಅಧಿವೇಶನ ಇದಾಗಿದ್ದರಿಂದ ಅವರ ನೆನಪಿಗಾಗಿ ಸುವರ್ಣ ವಿಧಾನಸೌಧದ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಆದರೆ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿದ್ದು, ರಾಜ್ಯದ ನಾಯಕರು ಅಂತಿಮ ದರ್ಶನ ಪಡೆಯಲು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಈ ಸುದ್ದಿಯನ್ನೂ ಓದಿ | Manmohan Singh: ಅಚ್ಚರಿಯ ರೀತಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಆಯ್ಕೆಯಾಗಿದ್ದು ಹೇಗೆ?

ಮಾತಿಗಿಂತ ಕೃತಿ‌ ಲೇಸೆಂಬ ನುಡಿಗಟ್ಟಿಗೆ ಅನ್ವರ್ಥದಂತೆ ಬದುಕಿದ ನಾಯಕ: ಸಿಎಂ

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅಪಾರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವವು ಭಾರತದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ ಎಂದು ತಿಳಿಸಿದ್ದಾರೆ.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರದ ಯೋಜನೆಗಳಿಗೆ ಅವರಿಂದ ದೊರೆತ ಮಾರ್ಗದರ್ಶನ ಹಾಗೂ ಬೆಂಬಲವನ್ನು ಸ್ಮರಿಸಲೇಬೇಕು. ಯುಪಿಎ ಸರ್ಕಾರದ ಆಹಾರ ಹಕ್ಕು ಕಾಯ್ದೆಯು ನಮ್ಮ ನಾಡಿನ ಪ್ರಗತಿಯ ಹಾದಿಗೆ ಹೊಸ ಆಯಾಮ ಕಲ್ಪಿಸಿಕೊಟ್ಟಿದೆ. ಮಾತಿಗಿಂತ ಕೃತಿ‌ ಲೇಸೆಂಬ ನುಡಿಗಟ್ಟಿಗೆ ಅನ್ವರ್ಥದಂತೆ ಬದುಕಿದ ಓರ್ವ ಮುತ್ಸದ್ದಿ ನಾಯಕನನ್ನು ಕಳೆದುಕೊಂಡ ಭಾರತವಿಂದು ಬಡವಾಗಿದೆ. ಮೃತರ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಮತ್ತು ಕೋಟ್ಯಂತರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಅಸಾಧಾರಣ ನಾಯಕ ಮಾತ್ರ ಅಲ್ಲ, ಅಸಾಧಾರಣ ವ್ಯಕ್ತಿತ್ವವಿದ್ದ ವ್ಯಕ್ತಿ: ಡಿಕೆಶಿ

ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ಹಾಗೂ ಆರ್ಥಿಕ ತಜ್ಞರಾದ ಡಾ. ಮನಮೋಹನ್‌ ಸಿಂಗ್‌ ಅವರ ನಿಧನದೊಂದಿಗೆ ಅದ್ಭುತ ರಾಜತಾಂತ್ರಿಕತೆ ಹಾಗೂ ಸಮಗ್ರತೆ ಎಂದು ವ್ಯಾಖ್ಯಾನಿಸಲ್ಪಟ್ಟಿದ್ದ ಯುಗವೊಂದರ ಅಂತ್ಯವಾಗಿದೆ. ದೇಶದ ಅತ್ಯಂತ ನಿರ್ಣಾಯಕ ಕ್ಷಣಗಳಲ್ಲಿ ಪ್ರಧಾನಿಯಾಗಿ ಮತ್ತು ಆರ್ಥಿಕ ತಜ್ಞರಾಗಿ ಸಿಂಗ್‌ ಅವರು ಕೈಗೊಂಡ ನಿರ್ಧಾರಗಳು ಹಾಗೂ ಅವರ ದೂರದೃಷ್ಟಿಯ ಆಲೋಚನೆಗಳು ಶ್ಲಾಘನೀಯ.
ಅವರ ನಿಧನವು ತುಂಬಾ ಹತ್ತಿರದವರನ್ನೇ ಕಳೆದುಕೊಂಡಷ್ಟು ದುಃಖ ತಂದಿದೆ. ಅವರು ಅಸಾಧಾರಣ ನಾಯಕ ಮಾತ್ರ ಅಲ್ಲ, ಅಸಾಧಾರಣ ವ್ಯಕ್ತಿತ್ವವಿದ್ದ ವ್ಯಕ್ತಿ ಕೂಡ ಆಗಿದ್ದರು. ನಿಜವಾದ ಮಣ್ಣಿನ ಮಗ ಸಿಂಗ್‌ ಅವರಿಗೆ ಅಂತಿಮ ವಿದಾಯ ಹೇಳುವ ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ನನ್ನ ಸಂತಾಪಗಳು.

ದೇಶವನ್ನು ದುರಿತ ಕಾಲದಲ್ಲಿ ಸಶಕ್ತವಾಗಿ ಮುನ್ನಡೆಸಿದ್ದ ನಾಯಕ: ಎಚ್‌ಡಿಕೆ
ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಭಾರತದ ಮಾಜಿ ಪ್ರಧಾನಮಂತ್ರಿಗಳು, ಪ್ರಖ್ಯಾತ ವಿತ್ತತಜ್ಞರು, ಆರ್ಥಿಕ ಸುಧಾರಣೆಗಳ ಹರಿಕಾರರೂ ಆಗಿದ್ದ ಡಾ.ಮನಮೋಹನ್ ಸಿಂಗ್ ಅವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ದೂರದೃಷ್ಟಿ, ಸಂಯಮ ಮತ್ತು ತಮ್ಮ ಆರ್ಥಿಕ ಮೇದಸ್ಸಿನಿಂದ ರಾಷ್ಟ್ರವನ್ನು ದುರಿತ ಕಾಲದಲ್ಲಿ ಸಶಕ್ತವಾಗಿ ಮುನ್ನಡೆಸಿದ್ದ ಮನಮೋಹನ್ ಸಿಂಗ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ಆರ್ಥಿಕ ಸುಧಾರಣೆಗಳ ಮೂಲಕ ಭಾರತಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟವರು ಅವರು. ಅವರ ಕೊಡುಗೆಗಳು ಚಿರಸ್ಮರಣೀಯ. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಬಿ.ವೈ. ವಿಜಯೇಂದ್ರ ಸಂತಾಪ
ಬೆಂಗಳೂರು: ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ಹಿರಿಯ ರಾಜಕಾರಣಿ ಡಾ.ಮನಮೋಹನ್ ಸಿಂಗ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಡಾ.ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 1970 ರ ದಶಕದಲ್ಲಿ ಅವರು ಭಾರತ ಸರ್ಕಾರದ ಆರ್ಥಿಕ ಸಲಹೆಗಾರರಾಗಿದ್ದರು. ಬಳಿಕ ಆಗಿನ ಪ್ರಧಾನಮಂತ್ರಿ ನರಸಿಂಹ ರಾವ್ ಅವರ ಆರ್ಥಿಕ ಸಲಹೆಗಾರರಾದರು. ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶಕರಾಗಿ ಮತ್ತು ಗವರ್ನರ್ ಆಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಹಿರಿಯರ ಕುಟುಂಬಸ್ಥರು, ಬಂಧುಗಳು, ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

ಪ್ರತಿಭಟನೆ, ಪತ್ರಿಕಾಗೋಷ್ಠಿ ರದ್ದು: ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗ್ ಅವರು ನಿಧನರಾದ ಕಾರಣದಿಂದಾಗಿ ನಾಳೆ (27-12-2024) ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆಯಬೇಕಿದ್ದ ಪತ್ರಿಕಾಗೋಷ್ಠಿ ಮತ್ತು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಡೆಯಬೇಕಿದ್ದ ಪ್ರತಿಭಟನೆಯನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಕಟಣೆ ತಿಳಿಸಿದೆ.

ದೇಶದ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದರು:‌ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ. ಮನಮೋಹನ್ ಸಿಂಗ್ ರವರು ತಮ್ಮ ಶಾಂತ ಸ್ವಭಾವ, ಆಳವಾದ ಜ್ಞಾನ ಮತ್ತು ಅಪ್ರತಿಮ ದೃಷ್ಟಿಕೋನದಿಂದ ದೇಶದ ಆರ್ಥಿಕತೆ ಹಾಗೂ ಆಡಳಿತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದಿದ್ದರು. ಮನಮೋಹನ್ ಸಿಂಗ್ ಅವರು ಆರ್ಥಿಕ ತಜ್ಞರಾಗಿ ಸಲ್ಲಿಸಿದ ಸೇವೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ಎತ್ತರಕ್ಕೇರಿಸಿತ್ತು.

ಅತ್ಯುತ್ತಮ ಅರ್ಥಶಾಸ್ತ್ರಜ್ಞರಾಗಿ, ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡಿದ್ದ ಮನಮೋಹನ್ ಸಿಂಗ್ ಅವರು ಜಾಗತಿಕ ಮಟ್ಟದ ಅತ್ಯುತ್ತಮ ಪ್ರಶಸ್ತಿಗಳನ್ನ ಕೂಡ ಪಡೆದಿದ್ದರು. ಸತತ 10 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದ ಅವರು, ಈ ಹುದ್ದೆ ಅಲಂಕರಿಸಿದ ಸಿಖ್ ಸಮುದಾಯದ ಮೊದಲ ವ್ಯಕ್ತಿ ಎನಿಸಿದ್ದರು. ಅವರ ಕಾರ್ಯವೈಖರಿಯು ಪ್ರಜಾಪ್ರಭುತ್ವದ ಮಹತ್ವವನ್ನು ಮನವರಿಕೆ ಮಾಡಿಸುವಂತಿತ್ತು. ಪ್ರತಿಭಾವಂತರಾಗಿ, ಸದಾ ಜನಸಾಮಾನ್ಯರ ಆತ್ಮೀಯತೆಯನ್ನು ಕಾಪಾಡಿಕೊಂಡಿದ್ದರು. ಈ ದುಃಖದ ಕ್ಷಣದಲ್ಲಿ, ಅವರ ಕುಟುಂಬ, ಸ್ನೇಹಿತರ ಹಾಗೂ ಅಭಿಮಾನಿಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಅವರ ಸಾಧನೆ ಮತ್ತು ಮೌಲ್ಯಗಳು ಎಲ್ಲರ ಮನಸ್ಸಿನಲ್ಲಿ ಸದಾ ಜೀವಂತ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್, ಆಧಾರ್ ಜಾರಿ, ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು ಕಾಯ್ದೆ, ಅಮೆರಿಕ ಜೊತೆ ನಾಗರಿಕ ಪರಮಾಣು ಒಪ್ಪಂದ ಸೇರಿದಂತೆ ಹಲವು ಮಹತ್ವಪೂರ್ಣ ಯೋಜನೆಗಳು ಇವರ ಕಾಲದಲ್ಲಿ ಜಾರಿಯಾಗಿದ್ದವು ಎಂದು ಸಚಿವರು ಸ್ಮರಿಸಿದ್ದಾರೆ.

ಭಾರತ ಆರ್ಥಿಕವಾಗಿ ಬೆಳೆಯಲು ಭದ್ರ ಬುನಾದಿ ಹಾಕಿದ್ದರು: ಬೊಮ್ಮಾಯಿ

ಬೆಂಗಳೂರು: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿಧನ ಹೊಂದಿರುವ ಸುದ್ದಿ ಕೇಳಿ ಅತ್ಯಂತ ದುಖ ಉಂಟು ಮಾಡಿದೆ. ಆರ್ಥಿಕ ತಜ್ಞರಾಗಿ, ಪ್ರಧಾನ ಮಂತ್ರಿಯಾಗಿ ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದರು. ದೇಶದ ಆರ್ಥಿಕತೆಗೆ ದೊಡ್ಡ ಬದಲಾವಣೆ ತಂದಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಮನಮೋಹನ್ ಸಿಂಗ್ ಅವರು ಅಂತಾರಾಷ್ಟ್ರೀಯ ಸಂಸ್ಥೆಗಳಾದ ವಿಶ್ವ ಸಂಸ್ಥೆ, ಐಎಂಎಫ್ ನಲ್ಲಿ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದರಿಂದ ಈ ದೇಶವನ್ನು ಉಳಿಸಲು ಸಾಧ್ಯವಾಯಿತು. ರಿಸರ್ವ್ ಬ್ಯಾಂಕ್ ಗೌರ್ನರ್ ಆಗಿ ಕೆಲಸ ಮಾಡಿದ್ದು, ಈ ದೇಶದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಕಾರಣವಾಗಿದೆ. ದೇಶ ಆರ್ಥಿಕವಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಮನಮೋಹನ್ ಸಿಂಗ್ ಭದ್ರ ಬುನಾದಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಮನಮೋಹನ್ ಸಿಂಗ್ ಅವರು ಅತ್ಯಂತ ಸಜ್ಜನ ರಾಜಕಾರಣಿ ಆಗಿದ್ದರು. ಒಬ್ಬ ಮುತ್ಸದ್ದಿ ರಾಜಕಾರಣಿಯನ್ನು ದೇಶ ಕಳೆದುಕೊಂಡಿದೆ. ಅವರು ದೇಶಕ್ಕಾಗಿ ಸದಾ ಚಿಂತನೆ ಮಾಡುತ್ತಿದ್ದರು. ಹಲವಾರು ದೂರದೃಷ್ಟಿಯ ನಿರ್ಣಯಗಳನ್ನು ತೆಗೆದುಕೊಂಡಿದ್ದರು. ಅದರ ಲಾಭ ಈಗ ದೇಶಕ್ಕೆ ಆಗುತ್ತಿದೆ. ಅವರು ಪ್ರಚಾರ ಪ್ರೀಯ ರಾಜಕಾರಣ ಮಾಡಿರಲಿಲ್ಲ, ವಾಸ್ತವ ರಾಜಕಾರಣ ಮಾಡಿದ್ದರು. ಕೆಲವು ಅಪ್ರೀಯವಾದ ನಿರ್ಣಯಗಳನ್ನು ದೇಶದ ಹಿತ ದೃಷ್ಟಿಯಿಂದ ತೆಗೆದುಕೊಂಡಿದ್ದರು. ಅವರ ಗಟ್ಟಿ ನಿಲುವು, ಧಿಮಂತಿಕೆಯ ಗುಣ ಹಲವಾರು ಸಂದರ್ಭಗಳಲ್ಲಿ ಗೊತ್ತಾಗುತ್ತದೆ. ಭಾರತ ಚೀನಾ, ಅಮೇರಿಕಾ, ಯುರೋಪ್ ದೇಶಗಳಿಗೆ ಪೈಪೋಟಿ ಕೊಡಲು ಮನಮೊಹನ್ ಸಿಂಗ್ ಅವರು ಭದ್ರ ಬುನಾದಿ ಹಾಕಿದ್ದರು ಎಂದು ತಿಳಿಸಿದ್ದಾರೆ. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ.

ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪದಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Dr Manmohan Singh: ಮನಮೋಹನ್ ಸಿಂಗ್; ಭಾರತದ ಆರ್ಥಿಕ ಸುಧಾರಣೆಯ ಹರಿಕಾರ