ಬೆಂಗಳೂರು: ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ, ವಿಜಯ್ ಕಾರ್ತಿಕೇಯ ನಿರ್ದೇಶನದ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ನಾಯಕರಾಗಿ ನಟಿಸಿರುವ ʼಮ್ಯಾಕ್ಸ್ʼ ಚಿತ್ರ (Max Movie) ಡಿಸೆಂಬರ್ 25ರಂದು ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂತೋಷವನ್ನು ಸಂಭ್ರಮಿಸಲು ಥ್ಯಾಂಕ್ಸ್ ಗಿವಿಂಗ್ ಸಮಾರಂಭ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕಿಚ್ಚ ಸುದೀಪ್, ಎರಡೂವರೆ ವರ್ಷದ ಬಳಿಕ ನನ್ನ ಚಿತ್ರ ಬಿಡುಗಡೆಯಾಗಿದೆ. ಮ್ಯಾಕ್ಸ್ ಚಿತ್ರ ಯಶಸ್ಸು ಕಂಡಿದೆ. ಅಭಿಮಾನಿಗಳ ಹಾಗೂ ಚಿತ್ರತಂಡದವರ ಮುಖದಲ್ಲಿ ಗೆಲುವಿನ ನಗು ಮೂಡಿದೆ. ಆ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ. ನಾನು ಸದ್ಯ ಈ ಯಶಸ್ಸಿನ ಖುಷಿಯನ್ನು ಅನುಭವಿಸುತ್ತಿದ್ದೇನೆ. ಪ್ರೀಕ್ವೆಲ್, ಸೀಕ್ವೆಲ್ ಯಾವುದರ ಬಗ್ಗೆ ಸದ್ಯಕ್ಕೆ ಗಮನ ಹರಿಸಿಲ್ಲ. ನಿರ್ದೇಶಕ ರಾಜಮೌಳಿ ಅವರು ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಅದು ಇನ್ನಷ್ಟು ಖುಷಿಯ ಸಂಗತಿ. ತಮಿಳಿನಲ್ಲಿ ಅದ್ಬುತ ಪ್ರದರ್ಶನ ಕಾಣುತ್ತಿದೆ. ನಿರ್ಮಾಪಕರು, ನಿರ್ದೇಶಕರು ಅಲ್ಲಿಯವರೆ ಆಗಿರುವುದರಿಂದ ಅವರ ಮುಖದಲ್ಲಿ ಖುಷಿ ಕಾಣುತ್ತಿದೆ. ನಟನಾಗಿ ನನಗೂ ಹೆಮ್ಮೆ ಇದೆ. ತಮಿಳಿನಲ್ಲಿ ಕಲಾವಿದರು ಚಿತ್ರ ನೋಡುತ್ತಿದ್ದಾರೆ.
‘ಮ್ಯಾಕ್ಸ್’ ಚಿತ್ರದ ಯಶಸ್ಸಿನ ನಂತರ ನನ್ನ ಸ್ನೇಹಿತರ ಬಳಗ ಇನ್ನಷ್ಟು ಹೆಚ್ಚಾಗಿದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬಳಸಲಾಗಿದ್ದ ಕಾಸ್ಟೂಮ್ ಎತ್ತಿ ಇಟ್ಟಿದ್ದೇನೆ. ಅದು ನೆನಪು. ಪ್ರತೀ ಸಿನಿಮಾದಲ್ಲಿ ಈ ರೀತಿ ಮಾಡುವ ಅಭ್ಯಾಸವಿದೆ ಎಂದರು.
ಮ್ಯಾಕ್ಸ್ ಸಿನಿಮಾವನ್ನು ಅಪ್ಪ ನೋಡಿ ಖುಷಿ ಪಟ್ಟಿದ್ದಾರೆ. ಕೆಲವೊಂದು ಸನ್ನಿವೇಶಗಳನ್ನು ಅಮ್ಮನ ನೆನಪಾಗಿ ನೋಡಲು ಆಗಲಿಲ್ಲ, ಹೀಗಾಗಿ ನಾನು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿನಿಮಾ ನೋಡಿಲ್ಲ. ಈ ಚಿತ್ರದ ಮೂಲಕ ಮಗಳು ಸಾನ್ವಿಯನ್ನು ಗಾಯಕಿಯಾಗಿ ಪರಿಚಯ ಮಾಡಿದ್ದೇನೆ, ಅದರ ಸಂಪೂರ್ಣ ಕ್ರೆಡಿಟ್ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೆ ಸಲ್ಲಬೇಕು ಎಂದರು.
ನನ್ನ ಮೊದಲ ಕನ್ನಡದ ನಿರ್ಮಾಣದ ಚಿತ್ರ ಗೆದ್ದಿರುವುದು ಖುಷಿಯಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದ ಸದಸ್ಯರಿಗೆ, ಕನ್ನಡ ಕಲಾಭಿಮಾನಿಗಳಿಗೆ ಹಾಗೂ ವಿಶೇಷವಾಗಿ ಕಿಚ್ಚ ಸುದೀಪ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಚಿತ್ರ ಗೆದ್ದಿದೆ. ಈ ಗೆಲವು ತಂಡದ್ದು. ಅವಕಾಶ ನೀಡಿದ ನಿರ್ಮಾಪಕರಿಗೆ, ಕಿಚ್ಚ ಸುದೀಪ್ ಅವರಿಗೆ ಹಾಗೂ ಇಡೀ ತಂಡಕ್ಕೆ ನಿರ್ದೇಶಕ ವಿಜಯ್ ಕಾರ್ತಿಕೇಯ ಧನ್ಯವಾದ ತಿಳಿಸಿದರು.
ಈ ಸುದ್ದಿಯನ್ನೂ ಓದಿ | JNEC 2024: ಕಿರಿಯರ ಈಕ್ವೆಸ್ಟ್ರಿಯನ್ ಚಾಂಪಿಯನ್‌ಶಿಪ್‌ನಲ್ಲಿ ಇಶಾನ್ ಸುಂದರಂ ಚಾಂಪಿಯನ್!
ಕೆ.ಆರ್.ಜಿ ಸಂಸ್ಥೆಯ ಕಾರ್ತಿಕ್ ಗೌಡ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಶೇಖರ್ ಚಂದ್ರ, ಕಲಾ ನಿರ್ದೇಶಕ ಶಿವಕುಮಾರ್, ಸಂಕಲನಕಾರ ಗಣೇಶ್, ಸಂಭಾಷಣೆ ಬರೆದಿರುವ ಮಂಜು ಮಾಂಡವ್ಯ, ಕಲಾವಿದರಾದ ಸುಧಾ ಬೆಳವಾಡಿ, ಕರಿ ಸುಬ್ಬು, ಕೃಷ್ಣ ಹೆಬ್ಬಾಳೆ, ಸಂಯುಕ್ತ ಹೊರನಾಡು, ಸುಕೃತ ವಾಗ್ಲೆ, ಜಿ.ಜಿ, ವಿಜಯ್ ಚಂಡೂರ್, ಪ್ರವೀಣ್ ಮುಂತಾದವರು ಚಿತ್ರದ ಗೆಲುವಿನ ಸಂತಸವನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.