ಶ್ರೀನಗರ: ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (LOC) ಬಳಿ ಮಂಗಳವಾರ ಸಂಜೆ ನಡೆದ ಸೇನಾ ವಾಹನ (Military vehicle) ಅಪಘಾತದಲ್ಲಿ ಐವರು ಯೋಧರು (Soldiers Death) ಸಾವನ್ನಪ್ಪಿದ್ದು, ಈ ಪೈಕಿ ಮೂವರು ಕನ್ನಡಿಗರು ಎಂದು ತಿಳಿದುಬಂದಿದೆ.
ಒಟ್ಟು 18 ಯೋಧರು ಪ್ರಯಾಣಿಸುತ್ತಿದ್ದ ಸೇನಾ ವಾಹನ 350 ಅಡಿ ಆಳದ ಕಮರಿಗೆ ಉರುಳಿದ್ದು, ಐವರು ಯೋಧರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನೀಲಂನ ಸೇನಾ ಪ್ರಧಾನ ಕಚೇರಿಯಿಂದ ಬಲ್ನೋಯಿ ಘೋರಾ ಪೋಸ್ಟ್‌ಗೆ ತೆರಳುವಾಗ, ಘೋರಾ ಪೋಸ್ಟ್ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ ತಿರಕಣ್ಣವರ (45), ಕುಂದಾಪುರ ಬಳಿಯ ಕೋಟೇಶ್ವರ ಬಿಜಾಡಿಯ ಅನೂಪ್ (33) ಮಹಾಲಿಂಗಪುರದ 25 ವರ್ಷದ ಮಹೇಶ್ ಮರಿಗೊಂಡ ಮೃತ ಕರ್ನಾಟಕದ ಯೋಧರು. ಇನ್ನಿಬ್ಬರು ಮಹಾರಾಷ್ಟ್ರದ ಯೋಧರು ಸಾವಿಗೀಡಾಗಿದ್ದಾರೆ.
ಸಿಎಂ ಸಂತಾಪ
ಜಮ್ಮು ಕಾಶ್ಮೀರದ ಪೂಂಛ್ ಬಳಿ ಸೇನಾ ವಾಹನ ಅಪಘಾತಕ್ಕೀಡಾಗಿ ಕನ್ನಡಿಗ ಯೋಧರಾದ ದಯಾನಂದ ತಿರಕಣ್ಣವರ, ಅನೂಪ್ ಹಾಗೂ ಮಹೇಶ್ ಮರಿಗೊಂಡ ಅವರು ಹುತಾತ್ಮರಾದ ಸುದ್ದಿ ತಿಳಿದು ನೋವಾಯಿತು.
— Siddaramaiah (@siddaramaiah) December 25, 2024
ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ದೇಶ ಸೇವೆಗಾಗಿ ಜೀವ… pic.twitter.com/K5mDBIn8sS
ಅಪಘಾತದಲ್ಲಿ ಸಾವನ್ನಪ್ಪಿದ ಯೋಧರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು “ಜಮ್ಮು ಕಾಶ್ಮೀರದ ಪೂಂಛ್ ಬಳಿ ಸೇನಾ ವಾಹನ ಅಪಘಾತಕ್ಕೀಡಾಗಿ ಕನ್ನಡಿಗ ಯೋಧರಾದ ದಯಾನಂದ ತಿರಕಣ್ಣವರ, ಅನೂಪ್ ಹಾಗೂ ಮಹೇಶ್ ಮರಿಗೊಂಡ ಅವರು ಹುತಾತ್ಮರಾದ ಸುದ್ದಿ ತಿಳಿದು ನೋವಾಯಿತು. ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Terror Attack: ಜಮ್ಮು & ಕಾಶ್ಮೀರದಲ್ಲಿ ಎನ್‌ಕೌಂಟರ್; ಸೇನಾಧಿಕಾರಿ ಹುತಾತ್ಮ