ಬೆಂಗಳೂರು: ಬೆಂಗಳೂರಿನ (Bengaluru) ಆರ್‌ಆರ್ ನಗರ (RR Nagar) ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ (MLA Munirathna) ಅವರ ಮೇಲೆ ಕಿಡಿಗೇಡಿಗಳು ಮೊಟ್ಟೆ ಎಸೆದ ಹಿನ್ನೆಲೆಯಲ್ಲಿ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ (KC General Hospital) ದಾಖಲಿಸಲಾಗಿತ್ತು. ಹೀಗಾಗಿ ಶಾಸಕ ಮುನಿರತ್ನ ಅವರನ್ನು ಸಂಸದ ಡಾ.ಸಿ.ಎನ್. ಮಂಜುನಾಥ್ (MP Dr Majunath) ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಕೆಮಿಕಲ್ ಮಾದರಿಯ ಪದಾರ್ಥ ಎಸೆತ?
ಆಸ್ಪತ್ರೆಯಲ್ಲಿ ಮುನಿರತ್ನ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು, ನಾನು ಮುನಿರತ್ನ ಅವರನ್ನು ಭೇಟಿಯಾಗಿ ಮಾತನಾಡಿದ್ದೇನೆ. ತಪಾಸಣೆ ಮಾಡಿದಾಗ ಅವರ ತಲೆ ಹಿಂಭಾಗಕ್ಕೆ ಪೆಟ್ಟು ಬಿದ್ದಿದೆ. ಕೆಮಿಕಲ್ ಮಾದರಿಯ ಪದಾರ್ಥದಿಂದ ಹೊಡೆದಿದ್ದಾರೆ. ವಿಪರೀತ ತಲೆ ಸುತ್ತು ಮತ್ತು ವಾಂತಿ ಬಂದ ಹಾಗೆ ಆಗುತ್ತಿರುವುದರಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಮೊಟ್ಟೆ ದಾಳಿಯಿಂದ ಕೂದಲು ಸ್ವಲ್ಪ ಬರ್ನ್ ಆಗಿದೆ ಎಂದು ತಿಳಿಸಿದರು.
ಹಲವಾರು ತಿಂಗಳುಗಳ ರಾಜಕೀಯ ಘಟನೆ ನೋಡಿದರೆ ಮುನಿರತ್ನ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಅನ್ನಿಸುತ್ತಿದೆ. ನಾವೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವುದರಿಂದ ಆರೋಗ್ಯಕರ ರಾಜಕೀಯ ಮಾಡಬೇಕು. ವ್ಯವಸ್ಥೆ ದಾರಿ ತಪ್ಪುತ್ತಿರುವ ಹಾಗಿದೆ. ಮುನಿರತ್ನ ಪೊಲೀಸರಿಗೆ ದೂರು ಕೊಡುತ್ತಾರೆ ಎಂದು ಮಂಜುನಾಥ್ ಹೇಳಿದರು.
ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮುನಿರತ್ನಗೆ ಚಿಕಿತ್ಸೆ
ಮೊಟ್ಟೆ ಬಿದ್ದ ಕೂಡಲೇ ಮುನಿರತ್ನ ಅವರಿಗೆ ಕೆಸಿ ಜನರಲ್ ಆಸ್ಪತ್ರೆಯ ವಿವಿಐಪಿ (VVIP) ವಾರ್ಡ್‌ಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಗಂಟೆಗೂ ಅಧಿಕ ಕಾಲ ವೈದ್ಯರು ತಪಾಸಣೆ ನಡೆಸಿದ್ದಾರೆ. ಡಾ. ಪಂಕಜಾ ಅವರ ತಂಡ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಎ ಬ್ಲಾಕ್‌ನ ಸ್ಪೆಷಲ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಿದ್ದಾರೆ. ಶಾಸಕ ಮುನಿರತ್ನ ಅವರು ತೀವ್ರವಾಗಿ ಆಯಾಸಗೊಂಡಿದ್ದಾರೆ. ಇನ್ನು ಸ್ಪೆಷಲ್ ವಾರ್ಡ್ ಬಳಿ ಭದ್ರತಾ ದೃಷ್ಟಿಯಿಂದ ಪೊಲೀಸರನ್ನು ನಿಯೋಜಿಸಲಾಗಿದೆ.
ಆಸ್ಪತ್ರೆಗೆ ದಾಖಲಾಗಿರುವ ಶಾಸಕ ಮುನಿರತ್ನ ಅವರಿಗೆ ಇಸಿಜಿ ಸೇರಿದಂತೆ ಕೆಲವು ತಪಾಸಣೆಗಳನ್ನು ವೈದ್ಯರು ನಡೆಸಿದ್ದಾರೆ. ತಪಾಸಣೆ ಮುಗಿದ ಬಳಿಕವೂ ವಾರ್ಡ್‌ನಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನೊಂದೆಡೆ ವಾರ್ಡ್ ಗೆ ಆಗಮಿಸಿದ ನಂದಿನಿ ಲೇಔಟ್ ಪೊಲೀಸರು, ಘಟನೆಯ ಸಂಬಂಧ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ. ಚಿಕಿತ್ಸೆ ಬಳಿಕ ಘಟನೆ ಸಂಬಂಧ ಶಾಸಕ ಮುನಿರತ್ನ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ:Viral Video: AI ಚಮತ್ಕಾರದಿಂದ ಸಾಂತಾಕ್ಲಾಸ್ ವೇಷದಲ್ಲಿ ಕಾಣಿಸಿಕೊಂಡ ಕೇಜ್ರಿವಾಲ್; ವಿಡಿಯೊ ಫುಲ್ ವೈರಲ್!