Saturday, 16th November 2024

Ration card: ಕಾರು ಹೊಂದಿದ್ದರೆ ರೇಷನ್‌ ಕಾರ್ಡ್‌ ಇಲ್ಲ! 22 ಲಕ್ಷ ಬಿಪಿಎಲ್‌ ಪಡಿತರ ಚೀಟಿಗಳಿಗೆ ಖೊಕ್

BPL card

ನವದೆಹಲಿ: ನೀವು ಸ್ವಂತ ಕಾರು ಹೊಂದಿದ್ದವರಾಗಿದ್ದರೆ ಇನ್ನು ಮುಂದೆ ನೀವು ಹೊಂದಿರುವ ಬಿಪಿಎಲ್‌ ಪಡಿತರ ಕಾರ್ಡ್‌ (BPL ration card) ರದ್ದಾಗಲಿದೆ. ಆಹಾರ ಇಲಾಖೆ (Food department) 14 ಮಾನದಂಡಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಈ ಪಟ್ಟಿಯಲ್ಲಿರುವರು ಬಿಪಿಎಲ್‌ (BPL Card) ಮೂಲಕ ರೇಷನ್‌ ಕಾರ್ಡ್‌ ಸೌಲಭ್ಯ ಹೊಂದುವಂತಿಲ್ಲ.

ಭಾರತೀಯ ಪ್ರಜೆಗಳ ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಜೊತೆಗೆ ಪಡಿತರ ಚೀಟಿ ಕೂಡ ಒಂದು. ಆದರೆ ಲಕ್ಷಾಂತರ ಮಂದಿ ಅರ್ಹರಲ್ಲದವರೂ ಬಿಪಿಎಲ್ ಕಾರ್ಡ್ ಮೂಲಕ ರೇಷನ್‌ ಸೌಲಭ್ಯ ಪಡೆಯುತ್ತಿದ್ದಾರೆ. ಈ ಅಕ್ರಮ ತಡೆಗಟ್ಟಲು ಮಹತ್ವ ದ ಕ್ರಮ ಕೈಗೊಳ್ಳಲಾಗುತ್ತಿದೆ. ಆಹಾರ ಇಲಾಖೆ ಪಡಿತರ ಚೀಟಿಯಲ್ಲಿ ಆಗಿರುವ ಅಕ್ರಮ ಪತ್ತೆ ಹಚ್ಚುತ್ತಿದೆ.

ರಾಜ್ಯದಲ್ಲಿ ಸುಮಾರು 22 ಲಕ್ಷ ಪಡಿತರ ಚೀಟಿಗಳು ಅನರ್ಹವಾಗಿವೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಆಹಾರ ಇಲಾಖೆ 14 ಮಾನದಂಡಗಳ ಪಟ್ಟಿ ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿದ್ದೂ ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಪಡೆದುಕೊಂಡಿದ್ದರೆ ಅಂಥವರ ರೇಷನ್ ಕಾರ್ಡ್ ರದ್ದಾಗಲಿದೆ.

ಕಾರು, 100 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನ, ತೆರಿಗೆ ಪಾವತಿದಾರರು, 7.5 ಎಕರೆ ಭೂಮಿಗಿಂತ ಹೆಚ್ಚಿನ ಜಮೀನು ಹೊಂದಿದವರು, ಕಾಲೇಜು ನೌಕರರು, ಗುತ್ತಿಗೆದಾರರು, ಕೈಗಾರಿಕೋದ್ಯಮಿ, ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಹೊಂದಿರುವವರ ಬಿಪಿಎಲ್, ಅಂತ್ಯೋದಯ ಕಾರ್ಡ್ ರದ್ದು ಮಾಡಲಾಗುತ್ತದೆ.
ಈ ರೀತಿ 14 ಮಾನದಂಡಗಳನ್ನು ಆಹಾರ ಇಲಾಖೆ ಪಟ್ಟಿ ಮಾಡಿದೆ. ಆಹಾರ ಇಲಾಖೆ ಪಟ್ಟಿ ಮಾಡಿರುವ ಈ ಮಾನದಂಡಗಳ ಒಳಗಿದ್ದು, ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್‌ ಹೊಂದಿದವರ ಕಾರ್ಡನ್ನು ರದ್ದು ಮಾಡಲಾಗುತ್ತಿದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ನೀಡಲಾಗುತ್ತದೆ. ಆದರೆ ಬಡತನ ರೇಖೆಗಿಂತ ಮೇಲಿರುವ ಲಕ್ಷಾಂತರ ಮಂದಿ ಈ ಕಾರ್ಡ್ ಪಡೆದಿದ್ದಾರೆ. ಈ ಕುರಿತು ಆಹಾರ ಇಲಾಖೆ ಕುಟುಂಬ ತಂತ್ರಾಂಶದ ಮೂಲಕ ಮಾಹಿತಿ ಪಡೆದಿದೆ. ಇ- ಆಡಳಿತ ಕೇಂದ್ರದ ಮೂಲಕ ಡೇಟಾ ಸಂಗ್ರಹಿಸಿರುವ ಆಹಾರ ಇಲಾಖೆ ಬರೋಬ್ಬರಿ 22,62,413 ರೇಷನ್ ಕಾರ್ಡ್ ಅನರ್ಹ ಎಂದು ಪಟ್ಟಿ ಮಾಡಿದೆ.

10,97,621 ಬಿಪಿಎಲ್ ಕಾರ್ಡ್ ಹಾಗೂ 10,54,368 ಅಂತ್ಯೋದಯ ಕಾರ್ಡ್‌ಗಳನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿದೆ ಎಂದು ಇ- ಆಡಳಿಕ ಕೇಂದ್ರದಿಂದ ಪಡೆದಿರುವ ಡೇಟಾದಲ್ಲಿ ಬಹಿರಂಗವಾಗಿದೆ. ಮುಂದಿನ 10 ದಿನಗಳಲ್ಲಿ 22 ಲಕ್ಷ ಪಡಿತರ ಚೀಟಿಗಳು ರದ್ದಾಗಲಿವೆ. ಇದರ ಜೊತೆಗೆ ಅಕ್ರಮವಾಗಿ ಪಡೆದಿರುವ ಕಾರ್ಡ್‌ಗಳು ಪತ್ತೆಯಾದರೆ ಈ ಕಾರ್ಡ್ ಕೂಡ ರದ್ದಾಗಲಿದೆ.

ಇದನ್ನೂ ಓದಿ: ಲಕ್ಷಾಂತರ ಮೌಲ್ಯದ ಅಕ್ರಮ ಪಡಿತರ ಜಪ್ತಿ…