Tuesday, 26th November 2024

Muda Case: ಮುಡಾ ಹಗರಣ; ಸಿಎಂ ವಿರುದ್ಧದ ಕೇಸ್‌ ಸಿಬಿಐಗೆ ವಹಿಸಲು ಕೋರಿದ್ದ ಅರ್ಜಿ ವಿಚಾರಣೆ ಡಿ.10ಕ್ಕೆ ನಿಗದಿ

Muda Case

ಬೆಂಗಳೂರು: ಮುಡಾ ನಿವೇಶನ ಹಗರಣ (Muda Case) ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಡಿ.10ಕ್ಕೆ ಹೈಕೋರ್ಟ್ ನಿಗದಿಪಡಿಸಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮಂಗಳವಾರ ನಡೆಸಿ, ಅರ್ಜಿಯ ವಿಚಾರಣೆಗೆ ದಿನಾಂಕ ನಿಗದಿ ಮಾಡಿದರು.

ಜಮೀನಿನ ಮೂಲ ಮಾಲೀಕ ದೇವರಾಜು ಪರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ದುಶ್ಯಂತ್ ದವೆ, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶ ಎತ್ತಿ ಹಿಡಿದಿರುವ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆ ಡಿಸೆಂಬರ್ 5ಕ್ಕೆ ನಿಗದಿಯಾಗಿದೆ. ಈ ನಿಟ್ಟಿನಲ್ಲಿ ಸಿಬಿಐ ತನಿಖೆ ಕೋರಿರುವ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 5ರ ನಂತರ ನಿಗದಿಪಡಿಸಲು ಮನವಿ ಮಾಡಿದರು.

ಈ ವೇಳೆ ಅರ್ಜಿದಾರ ಸ್ನೇಹಮಯಿ ಕೃಷ್ಣ ಪರ ವಕೀಲ ಕೆ.ಜಿ.ರಾಘವನ್, ವಿಚಾರಣೆ ಮುಂದೂಡುವುದಕ್ಕೂ ಮುನ್ನ ತನಿಖೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಒಮ್ಮೆ ಪರಿಶೀಲಿಸಬೇಕು ಎಂದು ಕೋರಿದರು. ಇದಕ್ಕೆ ದುಶ್ಯಂತ್ ದವೆ, ಇದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪೀಠ, ಇಂದು ಅರ್ಜಿ ವಿಚಾರಣೆ ನಡೆಸುತ್ತಿಲ್ಲ. ಹೀಗಾಗಿ ದಾಖಲೆ ಪರಿಶೀಲನೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿ ವಿಚಾರಣೆಯನ್ನು ಡಿಸೆಂಬರ್ 10ರ 2.30ಕ್ಕೆ ನಿಗದಿಪಡಿಸಿತು.

ಈ ಸುದ್ದಿಯನ್ನೂ ಓದಿ | Constitutional Day : ಸಂಸತ್‌ನಲ್ಲಿ 75ನೇ ವರ್ಷದ ಸಂವಿಧಾನ ದಿನಾಚರಣೆ; ಸಂಸ್ಕೃತ ಭಾಷೆಯಲ್ಲಿ ಸಂವಿಧಾನ ಪ್ರತಿ ರಿಲೀಸ್‌ ಮಾಡಿದ ರಾಷ್ಟ್ರಪತಿ

ಪ್ರಕರಣವನ್ನು ರಾಜ್ಯದ ತನಿಖಾ ಸಂಸ್ಥೆಗೆ ವಹಿಸಿರುವುದರಿಂದ ಅಧಿಕಾರದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಲೋಕಾಯುಕ್ತ ಪೊಲೀಸರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐಗೆ ನೀಡಬೇಕು ಎಂದು ಉಚ್ಚ ನ್ಯಾಯಾಲಯಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದರು.