ಬೆಂಗಳೂರು: ಮುಡಾ ನಿವೇಶನ ಹಗರಣ (MUDA Scam) ಹಲವಾರು ರಾಜಕೀಯ ಆರೋಪ, ಪ್ರತ್ಯಾರೋಪ ಮತ್ತು ಕಾನೂನು ಹೋರಾಟಗಳಿಗೆ ಕಾರಣವಾಗುತ್ತಿರುವ ನಡುವೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪತ್ನಿ ಪಾರ್ವತಿ, ತಮಗೆ ಮಂಜೂರಾಗಿರುವ 14 ಸೈಟ್ಗಳನ್ನು ವಾಪಸ್ ನೀಡಲು ಮುಂದಾಗಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ನಾಟಕೀಯ ತಿರುವು ದೊರಕಿದೆ. ಇದೇ ವೇಳೆ ಸಿಎಂ ಪತ್ನಿ, ಸಾರ್ವಜನಿಕ ಪತ್ರವೊಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಮ್ಮನ್ನು ರಾಜಕೀಯ ದುರುದ್ದೇಶಕ್ಕೆ ಗುರಿಯಾಗಿಸಿಕೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಪಾರ್ವತಿ ಅವರು ಈ ಕುರಿತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಮನವಿ ಸಲ್ಲಿಸಿದ್ದು, ಭೂಸ್ವಾಧೀನಕ್ಕಾಗಿ ಪಡೆದಿರುವ ಬದಲಿ 14 ನಿವೇಶಗಳನ್ನು ವಾಪಸ್ ನೀಡುವುದಾಗಿ ಬರೆದುಕೊಂಡಿದ್ದಾರೆ. ಮೈಸೂರು ತಾಲೂಕು ಕಸಬಾ ಹೋಬಳಿ, ಕೆಸರೆ ಗ್ರಾಮದ ಸರ್ವೇ ಸಂಖ್ಯೆ 464 ರಲ್ಲಿ 3 ಎಕರೆ 16 ಗುಂಟೆ ವಿಸ್ತೀರ್ಣದ ನನ್ನ ಜಮೀನನ್ನು ಭೂಸ್ವಾಧೀನವಿಲ್ಲದೆ ಉಪಯೋಗಿಸಿಕೊಂಡಿದ್ದಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರವಾಗಿ ವಿಜಯನಗರ 3 ಮತ್ತು 4 ನೇ ಹಂತದಲ್ಲಿ ವಿವಿಧ ಅಳತೆಯ 14 ನಿವೇಶನಗಳನ್ನು ಮಂಜೂರು ಮಾಡಲಾಗಿದೆ. ಈ ನಿವೇಶನಗಳ ಕ್ರಯಪತ್ರಗಳನ್ನು ರದ್ದುಗೊಳಿಸುವ ಮೂಲಕ ನಾನು ಪರಿಹಾರದ ನಿವೇಶನಗಳನ್ನು ಒಪ್ಪಿಸಲು ಮತ್ತು ಹಿಂತಿರುಗಿಸಲು ಬಯಸುತ್ತೇನೆ. ನಿವೇಶನಗಳ ಸ್ವಾಧೀನವನ್ನು ಸಹ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮರಳಿ ಹಸ್ತಾಂತರಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಇನ್ನೊಂದು ಪತ್ರದಲ್ಲಿ ಏನಿದೆ?
ಸಿಎಂ ಪಾರ್ವತಿ ಅವರು ಇನ್ನೊಂದು ಪತ್ರವನ್ನೂ ಬರೆದಿದ್ದಾರೆ. ಅದರಲ್ಲಿಅವರು ತಮ್ಮ ರಾಜಕೀಯ ದುರುದ್ದೇಶಕ್ಕೆ ಎಳೆದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಪತ್ರದ ವಿವರ ಈ ಕೆಳಗೆ ಇದೆ.
ನನ್ನ ಪತಿಯಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಸಣ್ಣ ಕಳಂಕವೂ ಅಂಟಿಕೊಳ್ಳದಂತಹ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು. ರಾಜಕೀಯವೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟು ಮಾಡಬಾರದು ಎಂಬ ನಿರ್ಧಾರಕ್ಕೆ ಬದ್ಧಳಾಗಿ ಬದುಕಿದವಳು ನಾನು . ನಾನೆಂದೂ ಮನೆ, ಆಸ್ತಿ, ಚಿನ್ನ, ಸಂಪತ್ತನ್ನು ಬಯಸಿದವಳಲ್ಲ. ಯಾವುದೇ ಕಾರಣಕ್ಕೂ ನನ್ನಿಂದ ಅವರ ರಾಜಕೀಯ ಜೀವನಕ್ಕೆ ಒಂದು ಸಣ್ಣ ಹನಿಯಷ್ಟೂ ಕಳಂಕ ತಟ್ಟಬಾರದೆಂದು ಎಚ್ಚರಿಕೆಯಿಂದ ನಡೆದುಕೊಂಡವಳು.
ನನ್ನ ಪತಿಗೆ ರಾಜ್ಯದ ಜನತೆ ಹರಿಸುತ್ತಾ ಬಂದ ಪ್ರೀತಿ ಅಭಿಮಾನಗಳನ್ನು ದೂರದಿಂದಲೇ ಕಂಡು ಸಂತೋಷ ಮತ್ತು ಹೆಮ್ಮೆ ಪಟ್ಟವಳು. ಹೀಗಿದ್ದರೂ ಮೈಸೂರಿನ ಮುಡಾ ನಿವೇಶನಕ್ಕೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳಿಂದ ನಾನು ಘಾಸಿಗೊಂಡಿದ್ದೇನೆ. ನನ್ನ ಸ್ವಂತ ಸೋದರ ಅರಿಶಿನ – ಕುಂಕುಮದ ಭಾಗವಾಗಿ ಕೊಟ್ಟ ನಿವೇಶನಗಳು ಇಷ್ಟೊಂದು ರಾದ್ಧಾಂತವಾಗುತ್ತದೆ. ಇದರಿಂದ ನನ್ನ ಪತಿಯವರು ಅನ್ಯಾಯವಾಗಿ ಆರೋಪಗಳನ್ನು ಎದುರಿಸುವಂತಾಗಬಹುದು ಎನ್ನುವುದನ್ನು ನಾನು ಊಹಿಸಿದವಳೂ ಅಲ್ಲ.
ಇದನ್ನೂ ಓದಿ: Muda Case: ಮುಡಾ ಪ್ರಕರಣದಲ್ಲಿ ಇಡಿ ಎಂಟ್ರಿ; ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲು
ನನಗೆ ಈ ನಿವೇಶನ, ಮನೆ, ಆಸ್ತಿ, ಸಂಪತ್ತು ಯಾವುದೂ ಕೂಡ ನನ್ನ ಪತಿಯ ಗೌರವ, ಘನತೆ, ಮರ್ಯಾದೆ ಮತ್ತು ಅವರ ನೆಮ್ಮದಿಗಿಂತ ದೊಡ್ಡದಲ್ಲ. ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಅವರಿಂದ ಏನನ್ನೂ ನನಗಾಗಲೀ, ನನ್ನ ಕುಟುಂಬಕ್ಕಾಗಲೀ ಬಯಸದೇ ಇದ್ದ ನನಗೆ ಈ ನಿವೇಶನಗಳು ತೃಣಕ್ಕೆ ಸಮ. ಈ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿರುವ ಮುಡಾದ 14 ನಿವೇಶನಗಳನ್ನು ವಾಪಸ್ ಮಾಡಲು ನಿರ್ಧರಿಸಿದ್ದೇನೆ. ಈ ಬಗ್ಗೆ ನನ್ನ ಪತಿಯವರ ಅಭಿಪ್ರಾಯ ಏನಿದೆ ಎನ್ನುವುದು ನನಗೆ ತಿಳಿದಿಲ್ಲ. ನನ್ನ ಮಗನ ಬಳಿಯಾಗಲಿ, ನನ್ನ ಕುಟುಂಬದ ಇತರ ಸದಸ್ಯರ ಬಳಿಯಾಗಲಿ ಇದರ ಬಗ್ಗೆ ನಾನು ಚರ್ಚಿಸಿಲ್ಲ. ಇದು ನಾನು ನನ್ನ ಆತ್ಮ ಸಾಕ್ಷಿಯ ಕರೆಗೆ ಓಗೊಟ್ಟು ಪ್ರಜ್ಞಾಪೂರ್ವಕವಾಗಿ ಕೈಗೊಂಡಿರುವ ತೀರ್ಮಾನ.
ಈ ಹಂತದಲ್ಲಿ ಇಂತಹ ನಿರ್ಧಾರಕ್ಕೆ ಏಕೆ ಬಂದಿರಿ? ಎಂದು ಯಾರಾದರೂ ಕೇಳಬಹುದು. ಆರೋಪ ಕೇಳಿ ಬಂದ ದಿನವೇ ನಾನು ಈ ನಿರ್ಧಾರ ಮಾಡಿದ್ದೆ. ಆದರೆ, ಈ ಮುಡಾ ನಿವೇಶನ ಹಂಚಿಕೆಯ ಆರೋಪವನ್ನು ರಾಜಕೀಯ ದುರುದ್ದೇಶದಿಂದ ಮಾಡಲಾಗಿದ್ದು, ಈ ಅನ್ಯಾಯದ ವಿರುದ್ಧ ಹೋರಾಡಬೇಕು. ಅವರ ಸಂಚಿಗೆ ನಾವು ಬಲಿಯಾಗಬಾರದು ಎಂದು ಕೆಲವು ಹಿತೈಷಿಗಳು ಹೇಳಿದ ಕಾರಣಕ್ಕೆ ನಿವೇಶನ ವಾಪಸು ಮಾಡಬೇಕೆಂಬ ನಿರ್ಧಾರವನ್ನು ಕೈ ಬಿಟ್ಟಿದ್ದೆ.
ನನ್ನ ಈ ನಿರ್ಧಾರ ಅಚಲವಾಗಿದ್ದು, ಈ ನಿವೇಶನಗಳನ್ನು ವಾಪಸು ನೀಡುವುದರ ಜೊತೆಗೆ ಮುಡಾಕ್ಕೆ ಸಂಬಂಧಿಸಿದ ಎಲ್ಲಾ ಆರೋಪಗಳ ಬಗ್ಗೆ ಸಮಗ್ರ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ. ಕೊನೆಯದಾಗಿ, ಎಲ್ಲಾ ರಾಜಕೀಯ ಪಕ್ಷದ ನಾಯಕರು ಮತ್ತು ಮಾಧ್ಯಮ ಕ್ಷೇತ್ರದ ಬಂಧುಗಳಲ್ಲಿ ನನ್ನ ವಿನಮ್ರ ವಿನಂತಿ. ದಯವಿಟ್ಟು ರಾಜಕೀಯ ಕ್ಷೇತ್ರದಿಂದ ದೂರವಿದ್ದು, ತಮ್ಮ ಪಾಡಿಗೆ ತಾವಿರುವ ರಾಜಕೀಯ ಕುಟುಂಬದ ಹೆಣ್ಣು ಮಕ್ಕಳನ್ನು ರಾಜಕೀಯ ದ್ವೇಷ ಸಾಧನೆಗಾಗಿ ವಿವಾದದ ಕಣಕ್ಕೆ ಎಳೆದು ತಂದು ಅವರ ಘನತೆ, ಗೌರವಗಳಿಗೆ ಹಾನಿ ಮಾಡಬೇಡಿ