Monday, 30th December 2024

Murder Case: ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಘೋರ ಕೃತ್ಯ- ವಾಟರ್‌ ಹೀಟರ್‌ನಿಂದ ಹೊಡೆದು ಸ್ನೇಹಿತನ ಬರ್ಬರ ಹತ್ಯೆ

murder case

ಬೆಂಗಳೂರು: ಆಶ್ರಯ ಕೊಟ್ಟ ಸ್ನೇಹಿತನನ್ನೇ ದುರುಳನೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿತ್ತು. ಇದೀಗ ಮತ್ತೊಂದು ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ಜತೆಗಿದ್ದ ಸ್ನೇಹಿತನನ್ನೇ ವ್ಯಕ್ತಿಯೊಬ್ಬ ವಾಟರ್ ಹೀಟರ್ ನಿಂದ ಹೊಡೆದು ಬರ್ಬರವಾಗಿ ಕೊಲೆ(Murder Case) ಮಾಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಶ್ರೀನಿವಾಸಪುರದಲ್ಲಿ ಈ ಬರ್ಬರ ಕೊಲೆ ನಡೆದಿದ್ದು, ಮೃತ ದುರ್ದೈವಿಯನ್ನು ಶ್ರೀನಿವಾಸ್‌ ಎಂದು ಗುರುತಿಸಲಾಗಿದೆ. ಈತನನ್ನು ನಾಗರಾಜ್‌ ಎಂಬಾತ ವಾಟರ್ ಹೀಟರ್ ನಿಂದ ಹೊಡೆದ ಕೊಲೆ ಮಾಡಿದ್ದಾನೆ. ಶ್ರೀನಿವಾಸ್ ಹಾಗೂ ನಾಗರಾಜ್ ಇಬ್ಬರು ಗಾರೆ ಕೆಲಸ ಮಾಡಿಕೊಂಡಿದ್ದರು. ಶ್ರೀನಿವಾಸ್ ಮದುವೆಯಾಗಿದ್ದರೂ ಪತ್ನಿಯನ್ನು ಬಿಟ್ಟು ಪ್ರತ್ಯೇಕವಾಗಿ ವಾಸವಾಗಿದ್ದ. ಕೊಲೆ ಆರೋಪಿ ನಾಗರಾಜ್ ಗೆ ಇನ್ನೂ ಮದುವೆಯಾಗಿರಲಿಲ್ಲ. ಇಬ್ಬರೂ ಶ್ರೀನಿವಾಸಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಶ್ರೀನಿವಾಸ್ ಹಾಗೂ ನಾಗರಾಜ್ ಜಗಳವಾಗಿದ್ದು, ಈ ವೇಳೆ ನಾಗರಾಜ್ ಕೋಪದ ಬರದಲ್ಲಿ ವಾಟರ್ ಹೀಟರ್ ನಿಂದ ಶ್ರೀನಿವಾಸ್ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಶ್ರೀನಿವಾಸ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಪಾಪಿಯೋರ್ವ ಕುಡಿದ ಮತ್ತಿನಲ್ಲಿ ಸಿಗರೇಟ್‌ನಿಂದ ಮರ್ಮಾಂಗ ಸುಟ್ಟು ಯುವಕನ ಭೀಕರ ಹತ್ಯೆ (Murder Case) ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಭೋವಿತಿಮ್ಮನಪಾಳ್ಯದಲ್ಲಿ ನಡೆದಿತ್ತು. ಡಿ.19ರಂದು ನಡೆದಿರುವ ಘಟನೆ ನಡೆದಿತ್ತು.

ಪ್ರದೀಪ್ (41) ಮೃತ ದುರ್ದೈವಿಯಾಗಿದ್ದು, ಚೇತನ್ (30) ಆರೋಪಿಯಾಗಿದ್ದಾನೆ. ಮೃತ ಪ್ರದೀಪ್ ಹೆಂಡತಿಯೊಂದಿಗೆ ಜಗಳವಾಡಿಕೊಂಡಿದ್ದ, ಇದರಿಂದ ಇಬ್ಬರು ಬೇರೆಯಾಗಿದ್ದರು. ಆಕೆಯನ್ನು ಆರೋಪಿ ಚೇತನ್ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ. ಇದರಿಂದ ಕುಡಿದ ಮತ್ತಿನಲ್ಲಿ ಬಂದ ಪ್ರದೀಪ್ ಅವನ ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಪ್ರದೀಪ್ ತಲೆಯನ್ನು ಗೋಡೆಗೆ ಗುದ್ದಿಸಿ, ಸಿಗರೇಟ್‌ನಿಂದ ಮರ್ಮಾಂಗವನ್ನು ಸುಟ್ಟು ಚೇತನ್ ಹತ್ಯೆ ಮಾಡಿದ್ದಾನೆ.‌

ಘಟನೆ ಸಂಬಂಧ ಆರೋಪಿ ಚೇತನ್‌ನನ್ನು ಪೊಲೀಸರು ಬಂಧಿಸಿದ್ದು, ಸಲಿಂಗಕಾಮಕ್ಕೆ ಸ್ನೇಹಿತನನ್ನು ಹತ್ಯೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಮಾದನಾಯನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Raichur News: ಲಿಂಗಸುಗೂರಿನಲ್ಲಿ ಯುವಕ ಅನುಮಾನಾಸ್ಪದ ಸಾವು; ಕೊಲೆ ಶಂಕೆ