Sunday, 5th January 2025

Murder Case: ಮದ್ಯಸೇವನೆಗೆ ಹಣ ನೀಡದ ವ್ಯಕ್ತಿಗೆ ಬಿಯರ್ ಬಾಟಲ್‌ನಿಂದ ಚುಚ್ಚಿ ಹತ್ಯೆ

Murder Case

ಮೈಸೂರು: ಮದ್ಯ ಸೇವನೆಗೆ ಹಣ ನೀಡಲು ನಿರಾಕರಿಸಿದ್ದಕ್ಕೆ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆಸಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ (Murder Case) ಮಾಡಿರುವ ಘಟನೆ ಮೈಸೂರು (Mysuru Crime news) ಜಿಲ್ಲೆಯ ನಂಜನಗೂಡಿನ ಸರಸ್ವತಿ ಕಾಲೋನಿಯಲ್ಲಿ ನಡೆದಿದೆ.

ನಂಜನಗೂಡಿನ ಮಹದೇವ ನಗರದ ನಿವಾಸಿ ರಫೀಕ್ (40) ಸಾವನ್ನಪ್ಪಿದ್ದಾರೆ. ನೀಲಕಂಠ ನಗರದ ನಿವಾಸಿ ಸಲೀಂ ಹಾಗೂ ಆತನ ಸ್ನೇಹಿತನಿಂದ ಕೊಲೆ ನಡೆದಿದೆ. ರಫೀಕ್ ಬಳಿ ಬಂದು ಮದ್ಯ ಸೇವನೆಗೆ ಸಲೀಂ ಮತ್ತು ಆತನ ಸ್ನೇಹಿತ ಹಣ ಕೇಳಿದ್ದಾರೆ. ಈ ವೇಳೆ ಹಣ ನೀಡಲು ನಿರಾಕರಿಸಿದ್ದಕ್ಕೆ ರಫೀಕ್ ಜೊತೆಗೆ ಸಲೀಂ ಮತ್ತು ಆತನ ಸ್ನೇಹಿತ ಗಲಾಟೆ ಮಾಡಿದ್ದಾರೆ.

ರಫೀಕ್ ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ರಫೀಕ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಮೈಸೂರಿನ ಕೆ ಆರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಫೀಕ್ ಸಾವನ್ನಪ್ಪಿದ್ದಾರೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಠಾಣೆಗೆ ಬಂದ ಮಹಿಳೆ ಮೇಲೆ ಡಿವೈಎಸ್‌ಪಿ ಲೈಂಗಿಕ ವಿಕೃತಿ, ವಿಡಿಯೋ ವೈರಲ್‌

ತುಮಕೂರು: ಜಮೀನು ತಗಾದೆ ವಿಚಾರದಲ್ಲಿ ದೂರು ನೀಡಲು ಬಂದ ಮಹಿಳೆಯನ್ನು ತನ್ನ ಕಾಮಪಿಪಾಸೆ ತೀರಿಸಿಕೊಳ್ಳಲು ಪೊಲೀಸ್‌ ಅಧಿಕಾರಿ ಬಲವಂತಪಡಿಸಿದ ಘಟನೆ ಮಧುಗಿರಿಯಲ್ಲಿ ನಡೆದಿದೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ ನಡೆದಿರುವ ಈ ಘಟನೆಯಿಂದಾಗಿ ಪೊಲೀಸ್‌ ಇಲಾಖೆ ತಲೆ ತಗ್ಗಿಸುವಂತಾಗಿದೆ.

ಜಮೀನು ತಗಾದೆ ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಠಾಣೆಗೆ ಬಂದ ಮಹಿಳೆಯನ್ನು ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ರಾಮಚಂದ್ರಪ್ಪ ಶೌಚಾಲಯದ ಬಳಿ ಕರೆದುಕೊಂಡುಹೋಗಿ ತನ್ನ ಕಾಮಪಿಪಾಸೆ ತೀರಿಸಲು ಬಲವಂತಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸನ್ನಿವೇಶದಲ್ಲಿ ಅದನ್ನು ಠಾಣೆಯಲ್ಲಿದ್ದ ಸಾರ್ವಜನಿಕರೊಬ್ಬರು ಶೌಚಾಲಯದ ಗೋಡೆಯ ಈಚೆಯಿಂದ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ತುಮಕೂರಿನ ಎಲ್ಲೆಡೆ ಹರಿದಾಡುತ್ತಿದೆ. ಪೊಲೀಸ್‌ ಇಲಾಖೆ ಈ ಬಗ್ಗೆ ಕಠಿಣ ಶಿಸ್ತುಕ್ರಮಕ್ಕೆ ಮುಂದಾಗಿದೆ. ಇದರ ಬೆನ್ನಲ್ಲೇ ಡಿವೈಎಸ್‌ಪಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಜಮೀನು ವ್ಯಾಜ್ಯದ ಬಗ್ಗೆ ಪಾವಗಡ ಮೂಲದ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಕುರಿತು ವಿಚಾರಿಸಲು ಮಹಿಳೆಯನ್ನು ಡಿವೈಎಸ್‌ಪಿ ಕಚೇರಿಗೆ ಕರೆಸಲಾಗಿತ್ತು. ಈ ವೇಳೆ ಮಹಿಳೆಯನ್ನು ಪುಸಲಾಯಿಸಿದ ರಾಮಚಂದ್ರಪ್ಪ ಆಕೆಯನ್ನು ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋಗಿದ್ದಾರೆ. ಮಹಿಳೆ ಜೊತೆ ಡಿವೈಎಸ್‌ಪಿ ಬಲವಂತವಾಗಿ ನಡೆದುಕೊಳ್ಳುತ್ತಿದ್ದುದ್ದನ್ನು ಸೆರೆಹಿಡಿದ ವ್ಯಕ್ತಿಯೊಬ್ಬರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ಇದನ್ನೂ ಓದಿ: Child Death: ಅಂಗನವಾಡಿಯಲ್ಲಿ ಹಾವು ಕಚ್ಚಿ 4 ವರ್ಷದ ಬಾಲಕಿ ಸಾವು