Monday, 7th October 2024

Murugha Seer: ಪೋಕ್ಸೊ ಪ್ರಕರಣ: ಜೈಲಿನಿಂದ ಮುರುಘಾ ಶ್ರೀ ಬಿಡುಗಡೆಗೆ ಕೋರ್ಟ್ ಆದೇಶ

Murugha seer

ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗದ ಮುರುಘಾಶ್ರೀಗಳಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜೈಲಿನಿಂದ ಅವರನ್ನು ಬಿಡುಗಡೆ ಮಾಡಲು ಕೋರ್ಟ್ ಆದೇಶ ಹೊರಡಿಸಿದೆ. ಸಾಕ್ಷಿಗಳ ವಿಚಾರಣೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಮುರುಘಾ ಶ್ರೀಗಳ (Murugha Seer) ಬಿಡುಗಡೆಗೆ ಆದೇಶಿಸಿದೆ.

ಈ ಹಿಂದೆ ಮುರುಘಾಶ್ರೀಗೆ ಹೈಕೋರ್ಟ್ ಜಾಮೀನು ನೀಡಿತ್ತು, ಆದರೆ ಸಾಕ್ಷಿಗಳ ವಿಚಾರಣೆ ನಡೆಯುವವರೆಗೂ ಬಂಧನದಲ್ಲಿಡಲು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಇದೀಗ ಮುರುಘಾಶ್ರೀ ಜೈಲಿನಿಂದ ಬಿಡುಗಡೆಗೆ ಚಿತ್ರದುರ್ಗದ 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಈ ಸುದ್ದಿಯನ್ನೂ ಓದಿ | Ratan Tata: ಹಿರಿಯ ಉದ್ಯಮಿ ರತನ್ ಟಾಟಾ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಸಂತ್ತಸ್ತೆಯರು ಇಬ್ಬರು ಸೇರಿ 12 ಮಂದಿ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದ್ದು, ಮುರುಘಾ ಶ್ರೀಗಳನ್ನು ಕೋರ್ಟ್‌ನಿಂದ ಜಿಲ್ಲಾ ಕಾರಾಗೃಹಕ್ಕೆ ಕರೆದುಕೊಂಡು ಹೋಗಿ, ಬಳಿಕ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಕನ್ನಡ ಕಲಿಯಿರಿ ಎಂದದ್ದಕ್ಕೆ ಅಂಗಡಿಯಾತನಿಂದ ಗ್ರಾಹಕನ ಮೇಲೆ ಮಾರಕ ಹಲ್ಲೆ

ಬೆಂಗಳೂರು: ಕನ್ನಡ ಕಲಿಯಿರಿ, ಕನ್ನಡ ಮಾತನಾಡಿ ಎಂದು ಹೇಳಿದ್ದಕ್ಕೆ 52 ವರ್ಷದ ವ್ಯಕ್ತಿ ಹಾಗೂ ಅವರ ಪತ್ನಿಯನ್ನು ಮುಖಮೂತಿ ನೋಡದೆ ಥಳಿಸಿದ ಘಟನೆ (Assault case) ಬೆಂಗಳೂರಿನ (Bengaluru crime news) ಚಿಕ್ಕಪೇಟೆಯ ಅಂಗಡಿಯೊಂದರಲ್ಲಿ ನಡೆದಿದೆ. ಅಂಗಡಿಯಾತ ಹಾಗೂ ಸಿಬ್ಬಂದಿ ಕನ್ನಡಿಗರ ಮೇಲೆ ಈ ಹಲ್ಲೆ ನಡೆಸಿದ್ದಾರೆ.

ಚಿಕ್ಕಪೇಟೆಯ ಬಿವಿಕೆ ಅಯ್ಯಂಗಾರ್ ರಸ್ತೆಯ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ದಾಬಸ್‌ಪೇಟೆ ನಿವಾಸಿ ಸಯ್ಯದ್ ರಫೀಕ್ ಹಲ್ಲೆಗೆ ಒಳಗಾದ ವ್ಯಕ್ತಿ. ಘಟನೆಗೆ ಸಂಬಂಧಿಸಿ ಮಮತಾ ಆರ್ಟ್ಸ್ ಸ್ಟೋರ್‌ನ ಉದ್ಯೋಗಿಗಳಾದ ಶೇಷ ಕುಮಾರ್ ಮತ್ತು ಅರವಿಂದ್ ಎಂಬವರನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

ಸೆ. 30ರಂದು ಚಿಕ್ಕಪೇಟೆಯಲ್ಲಿರುವ ಮಮತಾ ಸ್ಟೋರ್ಸ್‌ಗೆ ರಫೀಕ್‌ ಪತ್ನಿ ಜತೆ ತೆರಳಿದ್ದರು. ಕಂಚಿನ ದೀಪದ ಕಂಬದ ವಿನ್ಯಾಸಗಳನ್ನು ತೋರಿಸುವಂತೆ ಕೇಳಿದ್ದರು. “ನಾನು ಕಂಚಿನ ದೀಪದ ಕಂಬ’ ಎಂದು ಕನ್ನಡದಲ್ಲಿ ಕೇಳಿದ್ದೆ. ಅಂಗಡಿಯವರಿಗೆ ಅದು ಅರ್ಥವಾಗಿರಲಿಲ್ಲ. ಅವರಿಗೆ ನಾನು ಅದನ್ನು ವಿವರಿಸಲು ಪ್ರಯತ್ನಿಸಿದೆ. ಆಗ ಅಂಗಡಿ ಮಾಲೀಕ ಮಧ್ಯಪ್ರವೇಶಿಸಿದ. ನಾನು ಆತನ ಜತೆ ಮಾತನಾಡುತ್ತಿದ್ದೆ. ಆಗ ಉದ್ಯೋಗಿಗಳು ನನ್ನನ್ನು ನಿಂದಿಸಿದರು. ಆಗ ‘ಇಲ್ಲಿ ವ್ಯವಹಾರ ಮಾಡಬೇಕೆಂದರೆ ಕನ್ನಡ ಕಲಿಯಿರಿ’ ಎಂದೆ. ಅರವಿಂದ್ ನನ್ನ ಮೇಲೆ ರೇಗಾಡಿದ. ನನ್ನ ಜತೆ ಮಾತನಾಡಲು ಶಾಲೆಗೆ ಹೋಗಿ ಕನ್ನಡ ಬೇರೆ ಕಲಿಯಬೇಕೇ ಎಂದು ಕಿರುಚಾಡಿದ. ಶಾಲೆಗೆ ಹೋಗಿ ಕನ್ನಡ ಕಲಿಯುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಹೇಳಿದೆ” ಎಂದು ರಫೀಕ್‌ ಘಟನೆಯನ್ನು ವಿವರಿಸಿದರು.

“ನಂತರ ವಾಗ್ವಾದ ಉಂಟಾಯಿತು. ಅಂಗಡಿ ಸಿಬ್ಬಂದಿ ನನ್ನ ಹೆಂಡತಿಯನ್ನೂ ನಿಂದಿಸಿದರು. ನಾನು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಆತ ನನ್ನ ಮುಖಕ್ಕೆ ಗುದ್ದಿ, ಹಲ್ಲೆ ಮಾಡಿದ. ಮತ್ತೊಬ್ಬ ನೌಕರ ಹಿತ್ತಾಳೆಯ ತಟ್ಟೆ ತೆಗೆದುಕೊಂಡು ನನ್ನ ತಲೆಗೆ ಅನೇಕ ಬಾರಿ ಥಳಿಸಿದ. ನನ್ನ ತಲೆಯಿಂದ ರಕ್ತ ಸುರಿಯತೊಡಗಿತು. ಅಂಗಡಿಯಿಂದ ಹೊರಗೆ ಓಡಿ ಬಂದು ಜನರ ಸಹಾಯ ಕೋರಿದೆ. ಅಲ್ಲಿದ್ದ ಕೆಲವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಅವರಿಬ್ಬರು ಅವರ ಮೇಲೆಯೂ ಹಲ್ಲೆ ನಡೆಸಲು ಪ್ರಯತ್ನಿಸಿದರು” ಎಂದು ರಫೀಕ್‌ ಹೇಳಿದ್ದಾರೆ.

ಇದನ್ನೂ ಓದಿ: Sameer Acharya: ಸಮೀರ್‌ ಆಚಾರ್ಯ ದಾಂಪತ್ಯದಲ್ಲಿ ಕಲಹ; ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 118 (ಮಾರಕ ಆಯುಧಗಳಿಂದ ಗಂಭೀರವಾಗಿ ಗಾಯ ಮಾಡುವುದು ಅಥವಾ ಗಾಯಕ್ಕೆ ಕಾರಣವಾಗುವುದು) ಮತ್ತು 352ರ (ಶಾಂತಿ ಕದಡುವ ಪ್ರಚೋದನೆಯ ಉದ್ದೇಶದೊಂದಿಗೆ ಅವಮಾನಿಸುವುದು) ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.