Wednesday, 8th January 2025

Mysuru Bandh: ಡಾ.ಅಂಬೇಡ್ಕರ್‌ ಕುರಿತು ಅಮಿತ್‌ ಶಾ ಹೇಳಿಕೆ ಖಂಡಿಸಿ ಇಂದು ಮೈಸೂರು, ಮಂಡ್ಯ ಬಂದ್

mysuru bandh

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ (Dr BR Ambedkar) ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿಕೆ ಖಂಡಿಸಿ ಇಂದು (ಜನವರಿ 7) ಮೈಸೂರು (Mysuru Bandh) ಹಾಗೂ ಮಂಡ್ಯ ಬಂದ್‌ಗೆ (Mandya Bandh) ಕರೆ ನೀಡಲಾಗಿದೆ.

ಅಂಬೇಡ್ಕರ್‌ ಅಭಿಮಾನಿಗಳ ಹೋರಾಟ ಸಮಿತಿ ಕರೆ ನೀಡಿರುವ ಮೈಸೂರು ಬಂದ್​ಗೆ ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಬೆಳಗ್ಗೆಯಿಂದ ಸಂಜೆಯವರೆಗೂ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಮೈಸೂರು ಪ್ರವಾಸ ಯೋಜನೆ ಹಾಕಿದ್ದರೆ ಅದನ್ನು ಮುಂದೂಡುವುದು ಒಳಿತು.

ಮಂಗಳವಾರ ಮೈಸೂರು ಬಂದ್​ಗೆ ದಲಿತ ಪರ ಸಂಘಟನೆಗಳು , ರೈತ ಪರ ಸಂಘಟನೆಗಳು, ಮುಸ್ಲಿಂ ಸಂಘಟನೆಗಳು, ಕಾರು ಚಾಲಕರ ಸಂಘಟನೆಗಳು, ಬೀದಿ ಬದಿ ವ್ಯಾಪಾರಿಗಳು ಬೆಂಬಲ ಬೆಂಬಲ ಸೂಚಿಸಿದ್ದು, ಇಂದು ಬೆಳಗ್ಗೆಯಿಂದ ಮಧ್ಯಾಹ್ನ 4 ಗಂಟೆ ವರೆಗೆ ಬಂದ್‌ ನಡೆಯಲಿದೆ ಎಂದು ಮಾಜಿ ಮೇಯರ್‌ ಪುರುಷೋತ್ತಮ್‌ ಹೇಳಿದ್ದಾರೆ.

ಹೋಟೆಲ್‌ ಮಾಲೀಕರ ಸಂಘ ಹಾಗೂ ಮೈಸೂರಿನ ಪ್ರವಾಸೋದ್ಯಮ ನೆಚ್ಚಿಕೊಂಡಿರುವ ಇತರ ಉದ್ಯಮಿಗಳು ನಾಳಿನ ಬಂದ್​ಗೆ ನೈತಿಕ ಬೆಂಬಲ ಸೂಚಿಸಿದ್ದು, ಕಾರ್ಮಿಕರು ಕೈಗೆ ಕಪ್ಪುಪಟ್ಟಿ ಧರಿಸಿ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು ಬಂದ್​ಗೆ ಮೈಸೂರು ನಗರ ಕಾಂಗ್ರೆಸ್‌ ಹಾಗೂ ಜಿಲ್ಲಾ ಕಾಂಗ್ರೆಸ್‌ ಬೆಂಬಲ ನೀಡಲಿದ್ದು, ಬಂದ್​ನಲ್ಲಿ ಎಲ್ಲ ಕಾಂಗ್ರೆಸ್‌ ಶಾಸಕರು ಭಾಗವಹಿಸಲಿದ್ದಾರೆ. ಶಾಂತಿಯುತ ಬಂದ್​ಗೆ ನಾವು ಬೆಂಬಲ ನೀಡುತ್ತೇವೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿಜಯ್‌ ಕುಮಾರ್‌ ಹೇಳಿದ್ದಾರೆ. ಮೈಸೂರು ಬಂದ್​ಗೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿದ್ದು, ಬಂದ್​ ವಿಚಾರವಾಗಿ ವರ್ತಕರು ಗೊಂದಲದಲ್ಲಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸುವ ಬಗ್ಗೆ ಜಿಲ್ಲಾಧಿಕಾರಿಗಳು ತೀರ್ಮಾನ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಮೈಸೂರು ಸಂಪರ್ಕಿಸುವ ಎಲ್ಲ ಹೆದ್ದಾರಿಗಳಲ್ಲಿ ವಾಹನಗಳ ಸಂಚಾರ ತಡೆ ಹಿಡಿಯಲು ತೀರ್ಮಾನಿಸಲಾಗಿದೆ. ಹೀಗಾಗಿ ಮೈಸೂರಿಗೆ ಭೇಟಿ ನೀಡುವವರಿಗೆ ಕಷ್ಟವಾಗಲಿದೆ. ಅಂಗಡಿಗಳು ತೆರದಿರುವುದಿಲ್ಲ. ಆಟೋ ಸಂಚಾರ ಸಹ ಇರುವುದಿಲ್ಲ. ಪ್ರತಿಭಟನಾಕಾರರು ಅಲ್ಲಲ್ಲಿ ರಸ್ತೆಗಳನ್ನು ಬಂದ್ ಮಾಡುವ ಸಾಧ್ಯತೆಗಳಿವೆ.

ಮಂಡ್ಯ ಸಹ ಬಂದ್

ಇಂದು ಮಂಡ್ಯ ನಗರ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ದಲಿತ, ರೈತ, ಅಲ್ಪಸಂಖ್ಯಾತ, ಹಿಂದುಳಿದ ಒಕ್ಕೂಟದ ವತಿಯಿಂದ ಬೆಳಗ್ಗೆ 6 ಗಂಟೆಯಿಂದ ಸಂಜೆ ಆರು ಗಂಟೆವರೆಗೂ ಮಂಡ್ಯ ನಗರ ಬಂದ್‌ಗೆ ಕರೆ ನೀಡಲಾಗಿದೆ. ಬೃಹತ್ ಪ್ರತಿಭಟನೆಯನ್ನು ಕೂಡ ನಡೆಸಲು ಹೋರಾಟಗಾರರು ಸಜ್ಜಾಗಿದ್ದಾರೆ.

Leave a Reply

Your email address will not be published. Required fields are marked *