Wednesday, 11th December 2024

Mysuru Dasara 2024: ಮೈಸೂರು ದೀಪಾಲಂಕಾರ 12 ದಿನ ವಿಸ್ತರಣೆ; ಡಿ.ಕೆ.ಶಿವಕುಮಾರ್‌

Mysuru Dasara 2024

ಮೈಸೂರು: ನಾಡಹಬ್ಬ ಮೈಸೂರು ದಸರಾ (Mysuru Dasara 2024) ಅದ್ಧೂರಿಯಾಗಿ ನೆರವೇರಿದೆ. ವಿಜಯದಶಮಿ ದಿನವಾದ ಶನಿವಾರ ಸಾಂಸ್ಕೃತಿಕ ನಗರಿಯಲ್ಲಿ ವಿಜೃಂಭನೆಯಿಂದ ಜಂಬೂ ಸವಾರಿ ನಡೆದಿದ್ದು, ರಾಜ್ಯ ಸೇರಿ ವಿವಿಧೆಡೆಯಿಂದ ಲಕ್ಷಾಂತರ ಜನರು ದಸರಾ ವೈಭವವನ್ನು ಕಣ್ತುಂಬಿಕೊಂಡಿದ್ದಾರೆ. ದಸರಾ ಆಚರಣೆಗೆ ತೆರೆ ಎಳೆದರೂ ಇಲ್ಲಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಮೈಸೂರಿನ ದೀಪಾಲಂಕಾರವನ್ನು 10-12 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಮೈಸೂರು ದಸರಾ ಮಹೋತ್ಸವ, ಜಂಬೂಸವಾರಿ ಹಿನ್ನೆಲೆಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ನಾನು ಇಂಧನ ಸಚಿವನಾಗಿದ್ದಾಗ ಮಾಡಿದ್ದಕ್ಕಿಂತಲೂ ಈ ಬಾರಿ ಅತ್ಯುತ್ತಮವಾಗಿ ದೀಪಾಲಂಕಾರ ಮಾಡಲಾಗಿದೆ. ಜತೆಗೆ ಒಂದೂವರೆ ಸಾವಿರ ಡ್ರೋನ್‌ಗಳ ಶೋ ವ್ಯವಸ್ಥೆಯನ್ನೂ ಮಾಡಲಾಗಿದೆʼʼ ಎಂದು ಅವರು ಹೇಳಿದ್ದಾರೆ.

ʼʼಕಳೆದ 10 ದಿನಗಳಲ್ಲಿ ಇಳಯರಾಜ, ಎ.ಆರ್. ರೆಹಮಾನ್‌ ಅವರ ಕಾರ್ಯಕ್ರಮಗಳಿಗೆ ಎರಡೂವರೆ ಲಕ್ಷ ಜನ ಸೇರಿದ್ದರು. ದಸರಾ ಮುಗಿದರೂ ಪ್ರವಾಸಿಗರು ಅಗಮಿಸುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ದೀಪಾಲಂಕಾರ ಇನ್ನೂ 10-12 ದಿನಗಳವರೆಗೆ ಇರಲಿದೆʼʼ ಎಂದು ಮಾಹಿತಿ ನೀಡಿದ್ದಾರೆ.

ಅತಿ ಹೆಚ್ಚುಬಾರಿ ಅಂಬಾರಿಗೆ ಪುಷ್ಪಾರ್ಚನೆ ಅವಕಾಶ ನನ್ನ ಭಾಗ್ಯ: ಸಿದ್ದರಾಮಯ್ಯ

ಅಂಬಾರಿ ಏರಿದ ತಾಯಿ ಚಾಮುಂಡಿಗೆ ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾಗಿ ಪುಷ್ಪಾರ್ಚನೆ ಅರ್ಪಿಸಿದ ಭಾಗ್ಯ ತಮ್ಮ ಪಾಲಿಗೆ ಒದಗಿ ಬಂದಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಅರ್ಪಿಸಿದ ಬಳಿಕ ಅವರು ಮಾತನಾಡಿದರು.

ಕಳೆದ ವರ್ಷ ಭೀಕರ ಬರಗಾಲದ ಕಾರಣದಿಂದ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದ ಸರಳ ದಸರಾವನ್ನು ಆಯೋಜಿಸಲಾಗಿತ್ತು. ಆದರೆ ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿ, ನಿರೀಕ್ಷಿತ ಮಟ್ಟಕ್ಕಿಂತ ಉತ್ತಮ ಬೆಳೆ ಆಗುವ ಲಕ್ಷಣಗಳೂ ಸ್ಪಷ್ಟವಾಗಿವೆ. ಸಾಲದ್ದಕ್ಕೆ ಈ ಬಾರಿ ಜಿಎಸ್ ಟಿ ಮತ್ತು ತೆರಿಗೆ ಸಂಗ್ರಹವೂ ನಿರಾಸೆ ಮೂಡಿಸಿಲ್ಲ. ಇದು ರಾಜ್ಯದ ಆರ್ಥಿಕತೆ ಆರೋಗ್ಯಕರವಾಗಿ ಏರುಗತಿಯಲ್ಲಿ ಇರುವುದಕ್ಕೆ ಸಾಕ್ಷಿಯಾಗಿದೆ. ಎಲ್ಲವೂ ಒಟ್ಟಾಗಿ ದಸರಾ ಸಂಭ್ರಮವನ್ನು ಹೆಚ್ಚಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅದ್ಧೂರಿ ಮತ್ತು ಅಚ್ಚುಕಟ್ಟಾದ ದಸರಾ ಆಯೋಜಿಸಿದ ಜಿಲ್ಲಾಡಳಿತ ಶ್ರಮ ಮತ್ತು ಶಿಸ್ತಿಗೆ ಈ ವೇಳೆ ಸಿಎಂ ಅಭಿನಂದನೆ ಸಲ್ಲಿಸಿದರು.

ಈ ಸುದ್ದಿಯನ್ನೂ ಓದಿ: Mysuru Dasara: ಮೈಸೂರು ದಸರಾ ವೈಭವದ ಫೋಟೊಗಳು ಇಲ್ಲಿವೆ

ದಸರಾ ಪೂರ್ವಭಾವಿ ಸಭೆಗಳಲ್ಲಿ ಕೊಟ್ಟ ಸೂಚನೆ ಮತ್ತು ತೆಗೆದುಕೊಂಡ ನಿರ್ಣಯಗಳನ್ನು ಜಿಲ್ಲಾಡಳಿತ ಶಿಸ್ತುಬದ್ದವಾಗಿ ಜಾರಿಗೊಳಿಸಿದೆ. ಇದೇ ಮೊದಲ ಬಾರಿಗೆ ಯುವ ದಸರಾವನ್ನು ಚಾಮುಂಡಿ ತಪ್ಪಲಿನ ಉತ್ತನಹಳ್ಳಿಯಲ್ಲಿ ಸಂಘಟಿಸಿ ಲಕ್ಷ ಲಕ್ಷ ಮಂದಿ ಸಂಭ್ರಮಿಸಿದರು. ಶಾಸ್ತ್ರೀಯ ಸಂಗೀತ ಪ್ರಕಾರಗಳಿಂದ, ಸಮಕಾಲೀನ ಸಂಗೀತವನ್ನೂ, ಶಾಸ್ತ್ರೀಯ ನೃತ್ಯದಿಂದ ಸಮಕಾಲೀನ ನೃತ್ಯ ಪ್ರಕಾರಗಳು, 20 ಕ್ಕೂ ಹೆಚ್ಚು ತಂಡಗಳು, ನೂರಾರು ಕಲಾವಿದರು ಯುವ ದಸರಾ ಸಡಗರವನ್ನು ಹೆಚ್ಚಿಸಿದ್ದಾರೆ. ಹಾಗೆಯೇ ದಸರಾದ ಮುಖ್ಯ ಸಾಂಸ್ಕೃತಿಕ ವೇದಿಕೆಯಲ್ಲೂ ಸಾಹಿತ್ಯ, ಸಂಗೀತ, ಕಲೆ, ನೃತ್ಯಗಳು ಮೇಳೈಸಿ ಖುಷಿ ಕೊಟ್ಟಿದೆ ಎಂದು ತಿಳಿಸಿದರು.