Thursday, 12th December 2024

Mysuru Dasara 2024: ನಾಡಹಬ್ಬ ದಸರೆಗೆ ಇಂದು ಡಾ.ಹಂಪನಾ ಚಾಲನೆ, ನವರಾತ್ರಿ ಸಂಭ್ರಮಕ್ಕೆ ಸಜ್ಜಾದ ನಾಡು

Mysuru Dasara 2024

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಉತ್ಸವಕ್ಕೆ (Mysuru Dasara 2024) ಮೈಸೂರು (Mysore Dasara) ಸಜ್ಜಾಗಿದೆ. ನವರಾತ್ರಿಯ (Navaratri 2024) ಸಂಭ್ರಮ ಕಳೆಗಟ್ಟಿದ್ದು, ದಸರಾ ಮಹೋತ್ಸವಕ್ಕೆ ಇಂದು ಹಿರಿಯ ಸಾಹಿತಿ ನಾಡೋಜ ಡಾ| ಹಂಪ ನಾಗರಾಜಯ್ಯ (Hampana) ಅವರಿಂದ ವಿಧ್ಯುಕ್ತ ಚಾಲನೆ ದೊರೆಯಲಿದೆ.

ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಬೆಳಗ್ಗೆ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆಯೊಂದಿಗೆ ಹಂಪನಾ ಅವರು 414ನೇ ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ. ನಂತರ 10 ದಿನ ನಡೆಯುವ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್‌.ಸಿ.ಮಹದೇವಪ್ಪ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಲಾಗುತ್ತದೆ. ಇದಕ್ಕಾಗಿ ದೇವಾಲಯದಲ್ಲಿದ್ದ ಬೆಳ್ಳಿ ರಥವನ್ನು ವೇದಿಕೆಯ ಮೇಲೆ ನಿಲ್ಲಿಸಲಾಗಿದೆ. ಬೆಟ್ಟದಲ್ಲಿ ದಸರೆಗೆ ಚಾಲನೆ ದೊರೆಯುತ್ತಿದ್ದಂತೆ ದಸರಾ ದೀಪಾಲಂಕಾರ, ಯುವ ದಸರಾ, ರೈತ ದಸರಾ, ಮಕ್ಕಳ ದಸರಾ, ದಸರಾ ವಸ್ತುಪ್ರದರ್ಶನ, ಆಹಾರ ಮೇಳ, ದಸರಾ ಕ್ರೀಡಾಕೂಟ, ದಸರಾ ಸಾಂಸ್ಕೃತಿಕ ಕಾರ್ಯಕ್ರಮ, ಫ‌ಲಪುಷ್ಪ ಪ್ರದರ್ಶನ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ವಿಜಯದಶಮಿಯಂದು 40ಕ್ಕೂ ಹೆಚ್ಚು ಸ್ತಬ್ಧಚಿತ್ರಗಳೊಂದಿಗೆ ಗಜಪಡೆಯಿಂದ ಜಂಬೂ ಸವಾರಿ ನಡೆಯಲಿದ್ದು, ರಾತ್ರಿ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದೆ.

ಬೆಟ್ಟದಲ್ಲಿ ದೇವಿಗೆ ವಿಶೇಷ ಪೂಜೆ

ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಗೆ 10 ದಿನವೂ ವಿಶೇಷ ಅಲಂಕಾರ ಮಾಡಲಾಗುತ್ತದೆ. ಅ. 3ರಂದು ಬ್ರಾಹ್ಮೀ , 4ರಂದು ಮಹೇಶ್ವರಿ, 5ರಂದು ಕೌಮಾರಿ, 6ರಂದು ವೈಷ್ಣವಿ, 7ರಂದು ವಾರಾಹಿ, 8ರಂದು ಇಂದ್ರಾಣಿ, 9ರಂದು ಸಿದ್ಧಿ ಧಾತ್ರಿ, 10ರಂದು ಸರಸ್ವತಿ, 11ರಂದು ಮಹಾಲಕ್ಷ್ಮೀ ಹಾಗೂ 12ರಂದು ಅಶ್ವಾರೋಹಣ ಅಲಂಕಾರ ಮಾಡಲಾಗುತ್ತದೆ.

ಖಾಸಗಿ ದರ್ಬಾರ್‌

ಮೈಸೂರಿನಲ್ಲಿ ದಸರಾ ಮಹೋತ್ಸವ ಸಂಭ್ರಮ ಮನೆ ಮಾಡಿದರೆ, ಅರಮನೆಯಲ್ಲಿ ಶರನ್ನವರಾತ್ರಿ ಆಚರಣೆಯ ಸಡಗರ ಶುರುವಾಗಲಿದೆ. ರಾಜವಂಶಸ್ಥ ಯದುವೀರ ಒಡೆಯರ್‌ ಖಾಸಗಿ ದರ್ಬಾರ್‌ ನಡೆಸಲಿದ್ದಾರೆ. ಬೆಳಗ್ಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ ಅವರಿಗೆ ಕಂಕಣಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 10.30ಕ್ಕೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ, ಹಸುಗಳು ಆಗಮಿಸಲಿವೆ. ಬೆಳಗ್ಗೆ 11ಕ್ಕೆ ಕಳಸ ಪೂಜೆ ಮತ್ತು ಸಿಂಹಾಸನ ಪೂಜೆ ನೆರವೇರಲಿದೆ. ಬೆ. 11.35 ರಿಂದ 12.05ರ ಒಳಗೆ ಯದುವೀರ ಅವರ ಸಿಂಹಾಸನಾರೋಹಣದ ಮೂಲಕ ಖಾಸಗಿ ದರ್ಬಾರ್‌ ಆರಂಭವಾಗಲಿದೆ.

ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ

ದಸರಾ ಉದ್ಘಾಟನೆ ಸಂದರ್ಭ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ನೀಡಲಾಗುವ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿಗೆ ಹಾವೇರಿ ಜಿಲ್ಲೆಯ ಖ್ಯಾತ ಶಹನಾಯಿ ವಾದಕ ಪಂಡಿತ್‌ ಬಸವರಾಜ ಭಜಂತ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ಗುರುವಾರ ಸಂಜೆ ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 5 ಲಕ್ಷ ರೂ. ನಗದು, ಪ್ರಶಸ್ತಿ ಫ‌ಲಕ, ಸ್ಮರಣಿಕೆ ಒಳಗೊಂಡಿದೆ.

ಇದನ್ನೂ ಓದಿ: Mysuru Dasara 2024: ಹಿರಿಯ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ ಈ ಬಾರಿಯ ದಸರಾ ಉದ್ಘಾಟಕರು