Sunday, 22nd December 2024

Mysuru News: ಟಿಐಇ ಜಾಗತಿಕ ಸಮ್ಮೇಳನ 2024; ಆವಿಷ್ಕಾರಿ ಯೋಜನೆಗಳ ಪ್ರಸ್ತುತಪಡಿಸಿದ ಮೈಸೂರಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳು

Mysuru News

ಮೈಸೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಟಿಐಇ ಜಾಗತಿಕ ಸಮ್ಮೇಳನದಲ್ಲಿ (TIE Global Summit 2024) ಆವಿಷ್ಕಾರಿ ಯೋಜನೆಗಳನ್ನು ಪ್ರಸ್ತುತಪಡಿಸಲು ಹಾಗೂ ಅವುಗಳನ್ನು ರೂಪಿಸಲು ಎಕ್ಸೆಲ್ ಪಬ್ಲಿಕ್ ಶಾಲೆ ಹಾಗೂ ಎಕ್ಸೆಲ್ ಸಾಫ್ಟ್ ಟೆಕ್ನಾಲಜೀಸ್, ವಿಕಾಸ ಪರ್ವ ಹೆಸರಿನಡಿ ವಿಭಿನ್ನವಾದ ಉದ್ಯಮಶೀಲತೆ ಹಾಗೂ ವಿನ್ಯಾಸ ಚಿಂತನೆ ಕಾರ್ಯಾಗಾರ ಆಯೋಜಿಸುವ ಮೂಲಕ ಮೈಸೂರು ಜಿಲ್ಲೆಯ (Mysuru News) 36 ಸರ್ಕಾರಿ ಶಾಲೆಗಳಿಗೆ ನೆರವಾದವು. ಎಕ್ಸೆಲ್ ಸಮೂಹದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಂಗವಾದ ಎಕ್ಸೆಲ್ ಎಂಪಥಿ ಫೌಂಡೇಷನ್ ಈ ಕಾರ್ಯಾಗಾರಕ್ಕೆ ಹೂಡಿಕೆ ಮಾಡಿತ್ತು. ಸಾಮುದಾಯಿಕ ಸಮಸ್ಯೆಗಳನ್ನು ಬಗೆಹರಿಸುವ ಯೋಜನೆ ಅಭಿವೃದ್ದಿಪಡಿಸಲು ಆರು ವಾರಗಳ ಕಾಲ ನಡೆದ ಕಾರ್ಯಾಗಾರದಲ್ಲಿ 36 ಸರ್ಕಾರಿ ಶಾಲೆಗಳ 186 ವಿದ್ಯಾರ್ಥಿಗಳು ಹಾಗೂ 36 ಶಿಕ್ಷಕರು ಪಾಲ್ಗೊಂಡಿದ್ದರು.

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಚೌಕಟ್ಟಾಗಿಸಿಕೊಂಡು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹುಡುಕುವುದಕ್ಕೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ, ಆವಿಷ್ಕಾರ, ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪನ್ನ ಅಭಿವೃದ್ಧಿ, ಎಂಜಿನಿಯರಿಂಗ್ ವಿನ್ಯಾಸ ಪ್ರಕ್ರಿಯೆ ಹಾಗೂ ಉದ್ಯಮಶೀಲತೆಯಂತಹ ಕ್ಷೇತ್ರಗಳನ್ನು ಪರಿಚಯಿಸಲಾಯಿತು.

ಎಲ್ಲಾ 186 ವಿದ್ಯಾರ್ಥಿಗಳನ್ನು ‘ಫೈರ್‌ಸ್ಟಾರ್ಟರ್ಸ್ ಗ್ಯಾಂಗ್’ ಟೈಕೂನ್ ಟಿಜಿಎಸ್ 2024 ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿತ್ತು. ಆರೋಗ್ಯ ಸೇವೆ, ಸುಸ್ಥಿರ ಕೃಷಿ, ನವೀಕರಿಸಬಲ್ಲ ಇಂಧನ, ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಆವಿಷ್ಕಾರ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಆಯ್ದ 10 ಯೋಜನೆಗಳೊಂದಿಗೆ ಇತರೆ ಜಿಲ್ಲೆಗಳ ಆವಿಷ್ಕಾರಿ ಯೋಜನೆಗಳನ್ನು ‘ರೂರಲ್ ಯೂತ್ ಇನ್ನೋವೇರ‍್ಸ್: ವಾಟ್ ಈಸ್ ಎನ್ ಇನ್ನೋವೇಷನ್ ಮೈಂಡ್‌ಸೆಟ್?’ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಯಿತು. ತಮ್ಮ ಆವಿಷ್ಕಾರಿ ಉಪಾಯಗಳು ಹಾಗೂ ಉದ್ಯಮಶೀಲತೆಯ ಹುಮ್ಮಸ್ಸನ್ನು ಪ್ರದರ್ಶಿಸಲು ಈ ಕಾರ್ಯಚಟುವಟಿಕೆ ಯುವ, ಕ್ರಿಯಾಶೀಲ ಮನಸ್ಸುಗಳಿಗೆ ವಿಶೇಷ ವೇದಿಕೆಯಾಯಿತು.

ಕಾರ್ಯಕ್ರಮವನ್ನು ಉದ್ಯಮಿ ಆನಂದ್ ಕಡಕೊಲ್ ಅವರು, ಸಂವಹನಾತ್ಮಕ ಪ್ರಶ್ನೆಗಳ ಸರಣಿಯೊಂದಿಗೆ ಗಮ್ಯವಾದ ಚರ್ಚೆಯ ಮೂಲಕ ನಡೆಸಿಕೊಟ್ಟರು. ವಿದ್ಯಾರ್ಥಿಗಳ ಚಿಂತನಾ ಪ್ರಕ್ರಿಯೆಗಳು ಜತೆಗೆ ಅವರು ಸಮಸ್ಯೆಗಳನ್ನು ಹೇಗೆ ಗುರುತಿಸಿದರು ಹಾಗೂ ಅವುಗಳಿಗೆ ಪರಿಹಾರಗಳನ್ನು ಹೇಗೆ ಕಂಡುಹಿಡಿದರು ಎಂಬುದನ್ನು ವಿವರಿಸಲು ಪ್ರೋತ್ಸಾಹಿಸುವ ಮೂಲಕ ಕಡಕೊಲ್ ಅವರು ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಿದರು. ವಿಸ್ತರಣಾ ಸಾಮರ್ಥ್ಯ, ಅನುಷ್ಠಾನ ಸವಾಲುಗಳು ಹಾಗೂ ಸಾಮಾಜಿಕ ಪರಿಣಾಮಗಳಂತಹ ವಿಚಾರಗಳತ್ತ ಗಮನ ಕೇಂದ್ರೀಕರಿಸುವ ಮೂಲಕ ಕಡಕೊಲ್ ಅವರ ಪರಿಕಲ್ಪನೆಗಳ ಪ್ರಾಯೋಗಿಕತೆಯನ್ನು ಪರಿಶೀಲಿಸಿದರು. ತಮ್ಮ ಉದ್ಯಮ ಯೋಜನೆಗಳು, ಖರ್ಚು-ವೆಚ್ಚದ ಸಂರಚನೆ ಹಾಗೂ ಹೂಡಿಕೆಯ ಅಗತ್ಯಗಳು ಮತ್ತು ಅನರು ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ವಿವರಿಸುವ ಮೂಲಕ ವಿದ್ಯಾರ್ಥಿಗಳು ಗಮನಾರ್ಹ ಕಾರ್ಯತಂತ್ರವನ್ನು ಪ್ರಸ್ತುತಪಡಿಸಿದರು. ಈ ಅಧಿವೇಶನದ ಹೊರತಾಗಿ ವಿದ್ಯಾಥಿಗಳಿಗೆ ಇತರ ಶಾಲೆಗಳ ವಿದ್ಯಾರ್ಥಿಗಳು, ಉದ್ಯಮಿಗಳು, ಉದ್ಯಮ ದಿಗ್ಗಜರೊಂದಿಗೆ ಸಂಪರ್ಕ ಹೊಂದಲು ಅವಕಾಶ ದೊರೆಯಿತು.

ಎಕ್ಸೆಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮ್ಯಾಥ್ಯು ಕೆ.ಜಿ., ನಮ್ಮ ವಿಕಾಸ ಪರ್ವ ಉಪಕ್ರಮ, ವಿದ್ಯಾರ್ಥಿಗಳಿಗೆ ಕೇವಲ ತಮ್ಮ ಕೌಶಲ್ಯ ಪ್ರದರ್ಶಿಸಲು ಸಹಾಯ ಮಾಡಿದ್ದಷ್ಟೇ ಅಲ್ಲದೆ, ನಮ್ಮ ಸುತ್ತಲಿನ ಪರಿಸರದಲ್ಲಿರುವ ಸವಾಲುಗಳಿಗೆ ಕಾರ್ಯಸಾಧಕ ಹಾಗೂ ವಿಸ್ತರಿಸಬಹುದಾದ ಪರಿಹಾರಗಳನ್ನು ಕಂಡುಕೊಳ್ಳುವ ಸಾಮರ್ಥ್ಯ ಪ್ರದರ್ಶಿಸಲು ನೆರವಾಯಿತು. ತರಗತಿ ಕೊಠಡಿಗಳಿಂದ ಇಂತಹ ಜಾಗತಿಕ ವೇದಿಕೆ ವರೆಗಿನ ಅವರ ಪಯಣ ನಿಜಕ್ಕೂ ಸ್ಪೂರ್ತಿದಾಯಕವಾದದ್ದು ಎಂದು ವಿದ್ಯಾರ್ಥಿಗಳ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದರು.

ಎಕ್ಸೆಲ್‌ಸಾಫ್ಟ್ ಟೆಕ್ನಾಲಜೀಸ್ ಹಾಗೂ ಎಕ್ಸೆಲ್ ಸಮೂಹದ ಅಧ್ಯಕ್ಷ ಸುದನ್ವ ಧನಂಜಯ, ವಿಕಾಸ ಪರ್ವದಂತಹ ಕಾರ್ಯಾಗಾರಗಳು ಹಾಗೂ ಟಿಐಇ ಜಾಗತಿಕ ಸಮ್ಮೇಳನದಂತಹ ವೇದಿಕೆಗಳು ವಿದ್ಯಾರ್ಥಿಗಳಿಗೆ ಆವಿಷ್ಕಾರ ಮಾಡಲು, ಒಟ್ಟಾಗಿ ಕೆಲಸ ಮಾಡಲು ಹಾಗೂ ಅಸಾಮಾನ್ಯ ಚಿಂತನೆಗೆ ಅತ್ಯಮೂಲ್ಯ ಅವಕಾಶಗಳನ್ನು ಒದಗಿಸುತ್ತವೆ. ತಮ್ಮ ಉಪಾಯಗಳನ್ನು ಮತ್ತಷ್ಟು ಪರಿಷ್ಕರಿಸಲು ಹಾಗೂ ಉತ್ತಮ ಭವಿಷ್ಯ ನಿರ್ಮಾಣದೆಡೆಗೆ ಕಾರ್ಯಪ್ರವೃತ್ತರಾಗುವ ಈ ಯುವ ಮನಸ್ಸುಗಳ ಪ್ರಯಾಣಕ್ಕೆ ಇದು ನಾಂದಿಯಾಗಿದೆ ಎಂದರು.

ಈ ಸುದ್ದಿಯನ್ನೂ ಓದಿ | Siddaganga Mutt: ಸಿದ್ದಗಂಗಾ ಮಠಕ್ಕೆ ನೀಡಿದ್ದ 70 ಲಕ್ಷ ರೂ. ವಿದ್ಯುತ್ ಬಿಲ್ ವಾಪಸ್: ಎಂ.ಬಿ.ಪಾಟೀಲ್‌

ಟಿಜಿಎಸ್ 2024 ನಲ್ಲಿನ ಅವರ ಯಶಸ್ಸಿನ ನಂತರ ಭಾರತದ ಅತಿದೊಡ್ಡ ಸ್ಕೂಲ್ ಇನ್ನೋವೇಷನ್ ಚಾಲೆಂಜ್, ಸ್ಕೂಲ್ ಇನ್ನೋವೇಷನ್ ಮ್ಯಾರಥಾನ್ 2024 ರಲ್ಲಿ ಎಲ್ಲಾ 36 ಆವಿಷ್ಕಾರಿ ಯೊಜನೆಗಳನ್ನು ಸಲ್ಲಿಸಲಾಯಿತು. ಸಾಮುದಾಯಿಕ ಸಮಸ್ಯೆಗಳನ್ನು ಗುರುತಿಸುವುದು ಹಾಗೂ ಅವುಗಳಿಗೆ ಆವಿಷ್ಕಾರಿ ಹಾಗೂ ವ್ಯಾವಹಾರಿಕ ಪರಿಹಾರಗಳನ್ನು ಕಂಡುಹಿಡಿಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ, ಶಿಕ್ಷಣ ಮಂತ್ರಾಲಯ, ಅಟಲ್ ಇನ್ನೋವೇಷನ್ ಮಿಷನ್ (ಎಐಎಂ), ನೀತಿ ಆಯೋಗ ಹಾಗೂ ಶೈಕ್ಷಣಿಕ ಆವಿಷ್ಕಾರ ಕೇಂದ್ರ (ಎಂಐಸಿ) ಮಂತ್ರಾಲಯ ಈ ಕಾರ್ಯಕ್ರಮ ಆಯೋಜಿಸಿತ್ತು. ಈ ಪ್ರಯತ್ನ ಎಕ್ಸೆಲ್ ಸಮೂಹ, ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ), ಡಿಡಿಪಿಐ(ಅಡ್ಮಿನ್), ಡಿಡಿಪಿಐ(ಡೆವಲಪ್‌ಮೆಂಟ್), ಎಲ್ಲಾ ಶಿಕ್ಷಣ ಕ್ಷೇತ್ರದ ಬಿಇಒಗಳು, ಡಿಐಇಟಿಯ ಶಿಕ್ಷಣ ಸಿಬ್ಬಂದಿಗಳು ಹಾಗೂ 36 ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಒಟ್ಟಾಗಿ ಮಾಡಿದ ಕೆಲಸದ ಪ್ರತಿಫಲವಾಗಿತ್ತು.