Tuesday, 7th January 2025

Na D’Souza: ಕೃತಿಗಳ ಮೂಲಕ ನಾಡಿನ ಸಮಸ್ಯೆಗೆ ಧ್ವನಿಯಾಗಿದ್ದವರು ನಾ.ಡಿಸೋಜ

Na D’Souza

ಬೆಂಗಳೂರು: ಕನ್ನಡ ಸಾರಸ್ವತ ಲೋಕದ ಬಲವಾದ ಕೊಂಡಿಯೊಂದು ಕಳಚಿದೆ. ಭಾನುವಾರ (ಜ. 5) ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಹಿರಿಯ ಸಾಹಿತಿ ನಾ.ಡಿಸೋಜ (Na D’Souza) ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕಾದಂಬರಿ, ಕಥೆಗಳ ಮೂಲಕ ಸಾಹಿತ್ಯ ಪ್ರೇಮಿಗಳ ಮನಗೆದ್ದಿದ್ದ ಅವರು ನಾಡಿನ ಸಮಸ್ಯೆಗೆ ಧ್ವನಿಯಾಗಿದ್ದವರು. ಅಲ್ಲದೆ ಅಪ್ಪಟ ಪರಿಸರವಾದಿಯಾಗಿಯೂ ಗುರುತಿಸಿಕೊಂಡಿದ್ದರು (Na D’Souza passes away).

ಬಾಲ್ಯದಲ್ಲಿಯೇ ಸಾಹಿತ್ಯದತ್ತ ಆಕರ್ಷಿತರಾಗಿದ್ದ ನಾ.ಡಿಸೋಜ ಅವರು ಸಮುದಾಯದ ಗಟ್ಟಿ ದನಿಯಾಗಿದ್ದರು. ಅವರು ತಮ್ಮ ಕೃತಿಗಳಲ್ಲಿ ಪರಿಸರವನ್ನು, ಸಮುದಾಯದವ ಸಮಸ್ಯೆಯನ್ನು ದಿಟ್ಟವಾಗಿ ತೆರೆದಿಡುತ್ತಿದ್ದರು. ಇದಕ್ಕೆ ಉತ್ತಮ ಉದಾಹರಣೆ ʼದ್ವೀಪʼ. ಮಲೆನಾಡಿನ ಜನರು ಮುಳುಗಡೆಯಿಂದ ಅನುಭವಿಸಿದ ಸಂಕಷ್ಟವನ್ನು ಹತ್ತಿರದಿಂದ ನೋಡಿದ್ದ ಅವರು ಅದನ್ನು ಲೇಖನಿಯಲ್ಲಿ ಬಿಚ್ಚಿಟ್ಟಿದ್ದರು. ಇದು ಚಲನಚಿತ್ರವಾಗಿಯೂ ಮುಂದೆ ಜನಪ್ರಿಯವಾಯಿತು. ಇದೊಂದು ಉದಾಹರಣೆಯಷ್ಟೇ. ಇಂತಹ ಜ್ವಲಂತ ಸಮಸ್ಯೆಗಳ ಚಿತ್ರಣ ಅವರ ಪ್ರತಿ ಕೃತಿಯಲ್ಲಿಯೂ ಮೂಡಿ ಬಂದು ಹಲವರ ಕಣ್ತೆರಿಸಿದೆ.

ನಾ. ಡಿಸೋಜ ಅವರು ಕೇವಲ ಸಾಹಿತಿಯಲ್ಲದೇ ಪರಿಸರ ಪ್ರೇಮಿಯಾಗಿಯೂ ಗುರುತಿಸಿಕೊಂಡಿದ್ದರು. ಆ ರೀತಿಯಾಗಿಯೇ ಬದುಕಿ ಬಾಳಿದ್ದರು ಕೂಡ. ಇಕ್ಕೇರಿ ಗಣಿ ಬೇಡ ಹೋರಾಟ, ಅಂಬುತೀರ‍್ತದಿಂದ ಅರಬಿ ಸಮುದ್ರದವರೆಗಿನ ಶರಾವತಿ ನಡೆ, ತಾಳಗುಪ್ಪ ಶಿವಮೊಗ್ಗ ಬ್ರಾಡ್ ಗೇಜ್ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಕಾಣಿಸಿಕೊಂಡಿದ್ದರು.

ಸಂದ ಪ್ರಶಸ್ತಿ

ನಾ.ಡಿಸೋಜ ಅವರ ಸಾಹಿತ್ಯ ಕೃಷಿಗೆ ಹಲವು ಪ್ರಶಸ್ತಿ ಲಭಿಸಿವೆ. ಅವುಗಳಲ್ಲಿ ಪ್ರಮುಖವಾದವು:
1988 ಮತ್ತು 1993ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1988ರಲ್ಲಿ ಗುಲ್ವಾಡಿ ವೆಂಕಟರಾವ ಪ್ರಶಸ್ತಿ
1995ರಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1997ರಲ್ಲಿ ಅಖಿಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
1998ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
1998ರಲ್ಲಿ ಮಂಗಳೂರು ಸಂದೇಶ ಪ್ರಶಸ್ತಿ
2003ರಲ್ಲಿ ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ
2006ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ
2006ರಲ್ಲಿ ವರ್ಧಮಾನ ಪ್ರಶಸ್ತಿ
2006ರಲ್ಲಿ ಮುಂಬಯಿಯ ಅಖಿಲ ಭಾರತ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ
2007ರಲ್ಲಿ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್
2011ರಲ್ಲಿ ಕೇಂದ್ರಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರ
2012ರಲ್ಲಿ ಮಾಸ್ತಿ ಪ್ರಶಸ್ತಿ
2024ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿ
2014ರಲ್ಲಿ ಕೊಡಗಿನಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ.

ಗಣ್ಯರ ಸಂತಾಪ

ನಾ.ಡಿಸೋಜ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ, ʼʼನಾಡಿನ ಹಿರಿಯ ಸಾಹಿತಿ ನಾ.ಡಿಸೋಜಾ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಸಾಹಿತ್ಯ ಕೃಷಿಯ ಜತೆಯಲ್ಲಿ ಪರಿಸರ ರಕ್ಷಣೆಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನಾ.ಡಿಸೋಜಾ ಅವರು ಜನಪರ ಕಾಳಜಿಯ ಲೇಖಕ. ನಾ.ಡಿಸೋಜಾ ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆʼʼ ಎಂದು ಬರೆದುಕೊಂಡಿದ್ದಾರೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರು ನೋವು ವ್ಯಕ್ತಪಡಿಸಿ, ʼʼನಾ.ಡಿಸೋಜ ಅವರದು ಬದುಕು ಬೇರೆಯಲ್ಲ, ಬರಹ ಬೇರೆಯಲ್ಲ ಎರಡೂ ಒಂದೇ. ಬರೆದಂತೆ ಬದುಕಿದವರು, ಬದುಕಿದಂತೆ ಬರೆದವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನಾ.ಡಿಸೋಜ ಅವರ ಕೊಡುಗೆ ಅನನ್ಯವಾದದ್ದು. ಶ್ರೀಯುತರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆʼʼ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Na D’Souza: ಮಾತೃಭಾಷೆ ಕೊಂಕಣಿಯಾದರೂ ಕನ್ನಡದಲ್ಲಿ ಸಾಹಿತ್ಯ ಕೃಷಿ ನಡೆಸಿದ್ದ ನಾ.ಡಿಸೋಜ

Leave a Reply

Your email address will not be published. Required fields are marked *