Tuesday, 7th January 2025

Na D’Souza: ಮಾತೃಭಾಷೆ ಕೊಂಕಣಿಯಾದರೂ ಕನ್ನಡದಲ್ಲಿ ಸಾಹಿತ್ಯ ಕೃಷಿ ನಡೆಸಿದ್ದ ನಾ.ಡಿಸೋಜ

Na D'Souza

ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ, ಕಾದಂಬರಿಗಳ ಮೂಲಕ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ನಾ.ಡಿಸೋಜ (Na D’Souza) ಇನ್ನಿಲ್ಲ. ಮಂಗಳೂರಿನಲ್ಲಿ ಅವರು ಭಾನುವಾರ (ಜ. 5) ನಿಧನ ಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಶಿವಮೊಗ್ಗದ ಸಾಗರದಲ್ಲಿ ಜನಿಸಿದ ಅವರು ಅಪ್ಪಟ ಪರಿಸರವಾದಿಯಾಗಿಯೂ ಜನಪ್ರಿಯರಾಗಿದ್ದರು.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಫಿಲಿಪ್ ಡಿಸೋಜ ಮತ್ತು ರೂಪೀನಾ ಡಿಸೋಜ ದಂಪತಿಯ ಪುತ್ರನಾಗಿ ನಾ.ಡಿಸೋಜ ಅವರು 1937ರ ಜೂ. 6ರಂದು ಜನಿಸಿದರು. ಅವರ ಮೂಲ ಹೆಸರು ನಾರ್ಬಟ್ ಡಿಸೋಜ. ಸಾಹಿತ್ಯ ಲೋಕದಲ್ಲಿ ನಾ.ಡಿಸೋಜ ಎಂದೇ ಚಿರಪರಿಚಿತರಾಗಿದ್ದಾರೆ. ಅವರ ಮಾತೃಭಾಷೆ ಕೊಂಕಣಿಯಾದರೂ ಕನ್ನಡದಲ್ಲಿ ಸಾಹಿತ್ಯ ಕೃಷಿ ನಡೆಸಿದ್ದಾರೆ.

ರಾಜರತ್ನಂ, ಕುವೆಂಪು, ಬೇಂದ್ರೆ ಮುಂತಾದವರ ಪದ್ಯಗಳನ್ನು ತಮ್ಮ 6ನೇ ವಯಸ್ಸಿನಲ್ಲಿ ಓದಿದ್ದ ನಾ.ಡಿಸೋಜ ಆಗಲೇ ಸಾಹಿತ್ಯ ಕಡೆಗೆ ಆಕರ್ಷಿತರಾಗಿದ್ದರು. ಅದಕ್ಕೆ ತಕ್ಕಂತೆ ಅವರು ಓದುತ್ತಿದ್ದ ಸಾಗರದ ಹೈಸ್ಕೂಲಿನಲ್ಲಿ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರರ ತಮ್ಮ ಗೊರೂರು ನರಸಿಂಹಾಚಾರ್ಯರು ಶಿಕ್ಷಕರಾಗಿದ್ದರು. ಅವರ ಪ್ರಭಾವವೂ ಬಾಲಕ ಡಿಸೋಜ ಅವರ ಮೇಲೆ ಬೀರಿತ್ತು. ಇದು ಅವರ ಸಾಹಿತ್ಯಸಕ್ತಿಯನ್ನು ಹೆಚ್ಚಿಸಿತು.

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಖ್ಯಾತ ಕವಿ ಜಿ.ಎಸ್. ಶಿವರುದ್ರಪ್ಪ ಅವರಂಥ ಪ್ರಾಚಾರ್ಯರು ದೊರೆತಿದ್ದು ನಾ.ಡಿಸೋಜ ಅವರೊಳಗಿನ ಸಾಹಿತಿಗೆ ಇನ್ನಷ್ಟು ಉತ್ತೇಜನ ನೀಡಿತು. ಕಾಲೇಜು ಓದುತ್ತಿರುವಾಗಲೇ ಬೆರಳಚ್ಚು ಮತ್ತು ಶೀಘ್ರ ಲಿಪಿ ಪರೀಕ್ಷೆಯನ್ನು ಪಾಸು ಮಾಡಿಕೊಂಡಿದ್ದರಿಂದ ಅವರು ಪದವಿ ಮುಗಿಯುತ್ತಿದ್ದಂತೆಯೇ ಲೋಕೋಪಯೋಗಿ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಂಡರು. ನಂತರ ಪ್ರಥಮ ದರ್ಜೆ ಗುಮಾಸ್ತರಾಗಿ ಶರಾವತಿ ಯೋಜನೆ (ಕಾರ್ಗಲ್), ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರ ಮತ್ತಿತರೆಡೆ ಸುಮಾರು ಮೂರೂವರೆ ದಶಕಗಳಿಗೂ ಹೆಚ್ಚುಕಾಲ ಕಾರ್ಯನಿರ್ವಹಿಸಿ 1995ರಲ್ಲಿ ನಿವೃತ್ತಿ ಹೊಂದಿದರು.

ಕೆಲವರು ಸರ್ಕಾರಿ ನೌಕರಿ ಸಿಕ್ಕರೆ ಸಾಕು ಅಲ್ಲಿಗೆ ಸುಮ್ಮನಾಗಿ ಬಿಡುತ್ತಾರೆ. ಆದರೆ ನಾ.ಡಿಸೋಜ ಹಾಗಲ್ಲ. ತಮ್ಮೊಳಗಿನ ಸಾಹಿತಿಗೆ ನೀರೆರೆದು ಪೋಷಿಸಿದರು. ಲೇಖನಗಳನ್ನು ಬರೆಯತೊಡಗಿದರು. ಮೊದಲ ಬಾರಿಗೆ ʼಪ್ರಪಂಚʼ ಎಂಬ ಪತ್ರಿಕೆಯಲ್ಲಿ ಅವರ ಕಥೆ ಮುದ್ರಿತವಾಗಿ ಜನಪ್ರಿಯವಾಗಿಯಿತು. ಅಲ್ಲಿಂದ ಬಳಿಕ ಅವರು ಹಿಂದಿರುಗಿ ನೋಡಲೇ ಇಲ್ಲ. ಅವರ ಮೊದಲ ಕಾದಂಬರಿ ʼಬಂಜೆ ಬೆಂಕಿʼ ಅಪಾರ ಜನ ಮನ್ನಣೆ ಗಳಿಸಿತು. ಇದುವರೆಗೆ ಕಾದಂಬರಿ, ಮಕ್ಕಳ ಕಾದಂಬರಿ, ಕಥಾ ಸಂಕಲ, ನಾಟಕ ಸೇರಿ 70ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ.

ತಮ್ಮ ಕಾದಂಬರಿ ಮುಖಾಂತರ ಅವರು ಮುಖಾಂತರ, ಪರಿಸರ ನಾಶ, ಭ್ರಷ್ಟಾಚಾರ, ಹಿಂದುಳಿದ ಬುಡಕಟ್ಟು ಜನಾಂಗದ ವ್ಯಥೆ ಮುಂತಾದ ಸಮಾಜಮುಖಿ ವಸ್ತುಗಳನ್ನು ತೆರೆದಿಟ್ಟಿದ್ದಾರೆ. ಅವರ ಅನೇಕ ಕಾದಂಬರಿಗಳು ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಓದುಗರನ್ನು ಸೆಳೆದಿವೆ.

ʼದ್ವೀಪʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗರಿ

ವಿಶೇಷ ಎಂದರೆ ನಾ.ಡಿಸೋಜ ಅವರು ಬರೆದ ಕಾದಂಬರಿಯನ್ನು ಆಧರಿಸಿ ತಯಾರಾದ ʼದ್ವೀಪʼ ಕನ್ನಡ ಚಿತ್ರ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ. ಗಿರೀಶ್‌ ಕಾಸರವಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ಸೌಂದರ್ಯಾ, ಅವಿನಾಶ್‌ ಮತ್ತಿತರರು ನಟಿಸಿದ್ದಾರೆ. ಇದು 2002ರಲ್ಲಿ ತೆರೆಕಂಡಿತ್ತು. ಜೋಗದಲ್ಲಿ ವಿದ್ಯುಚ್ಛಕ್ತಿ ಯೋಜನೆಯನ್ನು ಆರಂಭಿಸಿದಾಗ ಬಹಳಷ್ಟು ಜನರ ಬದುಕು ಮುಳುಗಡೆಯಾದ ಕಥೆಯನ್ನು ಇದು ಒಳಗೊಂಡಿದೆ. ಇನ್ನು ʼಕಾಡಿನ ಬೆಂಕಿʼ, ʼಬಳುವಳಿʼ, ʼಬೆಟ್ಟದಪುರದ ದಿಟ್ಟ ಮಕ್ಕಳುʼ ಮತ್ತು ʼಆಂತರ್ಯʼ ಕಾದಂಬರಿಗಳು ಚಲನಚಿತ್ರಗಳಾಗಿವೆ. ಡಿಸೋಜ ಅವರ ಹಲವಾರು ಸಣ್ಣ ಕಥೆಗಳು ಕೊಂಕಣಿ, ಮಲಯಾಳಂ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿವೆ.

ಈ ಸುದ್ದಿಯನ್ನೂ ಓದಿ: Na. D’Souza: ಹಿರಿಯ ಸಾಹಿತಿ ನಾ. ಡಿಸೋಜ ಅನಾರೋಗ್ಯದಿಂದ ನಿಧನ

Leave a Reply

Your email address will not be published. Required fields are marked *