ಶಿವಮೊಗ್ಗ: ಹಿರಿಯ ಸಾಹಿತಿ ನಾ.ಡಿಸೋಜ(Na D’Souza) ಅವರು ಇಂದು(ಜ.5) ಸಂಜೆ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಾ.ಡಿಸೋಜ ಅವರ ಪುತ್ರ ನವೀನ್ ಡಿಸೋಜ ಮತ್ತು ಸಂತೋಷ್ ಡಿಸೋಜ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಂದೆಯ ನಿಧನದ ಸುದ್ದಿಯನ್ನು ಪ್ರಕಟಿಸಿದ್ದಾರೆ.
ಮಲೆನಾಡಿಗೆ ಮಿಡಿದ ನಾಡಿ
ನಾ ಡಿಸೋಜ ಸಮಾಜಮುಖಿ ಸಾಹಿತಿಯಾಗಿ ಗುರುತಿಸಿಕೊಂಡವರು. ಕನ್ನಡ ಸಾರಸ್ವತ ಲೋಕದಲ್ಲಿ ನಾಡಿ ಎಂದೇ ಹೆಸರಾಗಿದ್ದ ಅವರು ತಮ್ಮ ಕತೆ ಮತ್ತು ಕಾದಂಬರಿಗಳ ಮೂಲಕ ಓದುಗರ ಮನಸ್ಸಿನಲ್ಲಿ ನೆಲೆ ನಿಂತವರು. ಸಮುದಾಯದ ಗಟ್ಟಿ ದನಿಯಾಗಿದ್ದ ಅವರು ಕತೆಗಾರರಾಗಿ,ಕಾದಂಬರಿಕಾರರಾಗಿ ಮತ್ತು ಮಕ್ಕಳ ಸಾಹಿತಿಯಾಗಿ ಸಾಕಷ್ಟು ಕೃಷಿ ಮಾಡಿದವರು. ಕನ್ನಡ ಕತಾಲೋಕದಲ್ಲಿ ಅವರು ಅಗ್ರಗಣ್ಯ ಕತೆಗಾರ. ಶಿಶು ಸಾಹಿತ್ಯಕ್ಕೂ ಹೊಸ ದಿಕ್ಕು ತೋರಗೊಟ್ಟವರು. ನಾಡಿ ವಿರಚಿತ ಶಿಶು ಪದ್ಯಗಳು ಈಗಲೂ ಪ್ರಸಿದ್ಧಿ ಪಡೆದಿವೆ. ಶಿವಮೊಗ್ಗದ ಸಾಗರದಲ್ಲಿ ನೆಲೆ ನಿಂತು ಸರಿ ಸುಮಾರು ಐದು ದಶಕಗಳ ಕಾಲ ಕನ್ನಡ ಓದುಗರನ್ನು ಕಾಡಿದ ನಾ.ಡಿಸೋಜ ಬರಹವನ್ನೇ ನಂಬಿ ಬದುಕಿದವರು. ಬದುಕಿದಂತೆಯೇ ಬರೆದವರು. ನಾಡಿ ಪ್ರಶಂಸೆ, ಪ್ರಶಸ್ತಿ ಮತ್ತು ಪ್ರಚಾರಕ್ಕೆ ಹಾತೊರೆಯದೆ ತಪಸ್ವಿಯಂತೆ ಬರೆಯುತ್ತಾ ಬಂದವರು. ಒಂದಿಡೀ ತಲೆಮಾರಿನ ಜನರಿಗೆ ಓದಿನ ಗೀಳು ಹತ್ತಿಸಿದ ಕೀರ್ತಿ ಡಿಸೋಜ ಅವರಿಗೆ ಸಲ್ಲಬೇಕು. ಅವರು ನಿರಂತರವಾಗಿ ತಮ್ಮ ಸಾಹಿತ್ಯದ ಮೂಲಕ ಮಲೆನಾಡಿನ ನಾಡಿ ಮಿಡಿತವನ್ನು ಹಿಡಿದವರು. ತಮ್ಮ ಕತೆ ಮತ್ತು ಕಾದಂಬರಿಗಳಲ್ಲಿ ಪ್ರಕೃತಿಯನ್ನೇ ಒಂದು ಪಾತ್ರವಾಗಿ ಸೃಷ್ಟಿಸುತ್ತಿದ್ದ ನಾಡಿ ಪರಿಸರ ಕಾಳಜಿಯ ಸಾಹಿತಿಯೂ ಹೌದು. ಮಲೆನಾಡಿನ ಜನರು ಮುಳುಗಡೆಯಿಂದ ಅನುಭವಿಸಿದ ಸಂಕಷ್ಟವನ್ನು ಹತ್ತಿರದಿಂದ ನೋಡಿದ್ದ ನಾಡಿ ʼಮುಳುಗಡೆʼ ಎಂಬ ಕಾದಂಬರಿಯನ್ನೇ ಬರೆದರು. ಆ ಕಾದಂಬರಿ ಅದೆಷ್ಟೋ ಜನರ ದನಿಯಾಯಿತು. ಆ ಕೃತಿಯಲ್ಲಿ ನಾ ಡಿಸೋಜ ಪರಿಸರ ಆಕ್ರಮಣಗಳು ತಮ್ಮ ಮೇಲೆ ಬೀರಿದ ದಟ್ಟವಾದ ಪ್ರಭಾವವನ್ನು ತೆರೆದಿಟ್ಟಿದ್ದಾರೆ.
ನಾಡಿ ಕೇವಲ ಕತೆ, ಕಾದಂಬರಿ ಬರೆದು ಮನೆಯಲ್ಲಿ ಸುಮ್ಮನೆ ಕೂತವರಲ್ಲ. ಗೋಷ್ಠಿ ಮತ್ತು ಸಮ್ಮೇಳನಗಳಲ್ಲಿ ಉದ್ದುದ್ದ ಭಾಷಣ ಮಾಡಿದವರೂ ಅಲ್ಲ. ಅವರು ಹುಟ್ಟು ಹೋರಾಟಗಾರ. ಜನರ ಕಷ್ಟಗಳಿಗೆ ಮಿಡಿಯುತ್ತಿದ್ದ ಅವರು ಶಿವಮೊಗ್ಗದ ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಸಾಗರಕ್ಕೆ ಬ್ರಿಟಿಷರ ಕಾಲದಲ್ಲೆ ಬರುತ್ತಿದ್ದ ರೈಲು ಸಂಚಾರ ನಿಲುಗಡೆಯಾದಾಗ ಪ್ರಬಲವಾದ ಹೋರಾಟ ಸಂಘಟಿಸಿ ಮತ್ತೆ ಆ ಭಾಗಕ್ಕೆ ರೈಲು ಸಂಚಾರ ಬರುವಂತೆ ಮಾಡಿದ ನಾಡಿ ಗಟ್ಟಿ ಹೋರಾಟಗಾರರು.
ನಾಡಿ ಹುಟ್ಟು-ಬಾಲ್ಯ,ಸಾಹಿತ್ಯ-ಪ್ರಶಸ್ತಿ ಪುರಸ್ಕಾರಗಳು
ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃಷಿ ಮಾಡುತ್ತಾ ಬಂದ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ.
ನಾ ಡಿಸೋಜ ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃತಿಗಳನ್ನು ಬರೆದಿದ್ದಾರೆ.
ಪ್ರಾರಂಭದ ದಿನಗಳಲ್ಲಿ ‘ಪ್ರಪಂಚ’ ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟವಾದದ್ದು 1964ರಲ್ಲಿ. ನಂತರ ಮಂಜಿನ ಕಾನು, ಈ ನೆಲ ಈಜಲ, ಕೆಂಪು ತ್ರಿಕೋನ, ನೆಲೆ, ಮಾನವ – ಹೀಗೆ ಇವರು ಬರೆದಿರುವ ಕಾದಂಬರಿಗಳು ಸುಮಾರು 40. ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹಲವು ಹತ್ತು ವಿಷಯಗಳನ್ನೊಳಗೊಂಡ ಅವರ ಕಾದಂಬರಿಗಳು ಅತಿ ಹೆಚ್ಚು ಜನಪ್ರಿಯಗೊಂಡಿವೆ. ನಾ. ಡಿಸೋಜ ಅವರ ದ್ವೀಪ, ಮುಳುಗಡೆ, ಕಾಡಿನ ಬೆಂಕಿ, ಬಳುವಳಿ, ಬೆಟ್ಟದಪುರದ ದಿಟ್ಟ ಮಕ್ಕಳು, ಆಂತರ್ಯ ಕೃತಿಗಳು ಚಲನಚಿತ್ರಗಳಾಗಿ ತೆರೆಯ ಮೇಲೆಯೂ ಕಾಣಿಸಿಕೊಂಡು ಪ್ರಶಸ್ತಿ ಪುರಸ್ಕಾರಕ್ಕೂ ಭಾಜನವಾಗಿವೆ. ಮಕ್ಕಳ ಸಾಹಿತ್ಯದಲ್ಲಿ ಸುಮಾರು ಹನ್ನೆರಡು ಕೃತಿಗಳನ್ನು ರಚಿಸಿದ್ದಾರೆ.
ಅಜ್ಞಾತ, ಒಂದು ಜಲಪಾತದ ಸುತ್ತ , ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ, ಜೀವಕಳೆ, ಪ್ರೀತಿಯೊಂದೆ ಸಾಲದೇ?, ಬಂಜೆ ಬೆಂಕಿ, ಪ್ರಜ್ಞಾಬಲಿ, ನೆಲೆ, ನಡುವೆ ನಿಂತ ಜನ, ಗಾಂಧಿ ಬಂದರು, ಒಡ್ಡು, ಮಾನವ, ಮುಳುಗಡೆ, ವಿಷಾನಿಲ ಇನ್ನೂ ಅನೇಕ ಕಾದಂಬರಿಗಳನ್ನೊಳಗೊಂಡತೆ ಮಕ್ಕಳ ಸಾಹಿತ್ಯವನ್ನೂ, ರೇಡಿಯೋ ನಾಟಕಗಳನ್ನೂ ನಾ.ಡಿಸೋಜ ಅವರು ರಚಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗುಲ್ವಾಡಿ ವೆಂಕಟರಾವ ಪ್ರಶಸ್ತಿ, ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ನವದೆಹಲಿ ಕಳಾ ಪ್ರಶಸ್ತಿ, ಕೇಂದ್ರಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರ ಮತ್ತು 2024ರ ಪ್ರತಿಷ್ಠಿತ ಪಂಪ ಪ್ರಶಸ್ತಿಗೂ ನಾಡಿ ಭಾಜನರಾಗಿದ್ದಾರೆ.
ತಮ್ಮ ಕೃತಿಗಳ ಮೂಲಕವೇ ಹೋರಾಟದ ಕಿಚ್ಚು ಹೊತ್ತಿಸಿದ, ನೊಂದವರ ಕಂಬನಿ ಒರೆಸಿದ 88ರ ಇಳಿ ವಯಸ್ಸಿನ ನಾ ಡಿಸೋಜ ಇಂದು ವಿಧಿವಶರಾಗಿದ್ದಾರೆ. ಜಗತ್ತಿನಲ್ಲಿ ಒಬ್ಬ ಕವಿ, ಸಾಹಿತಿ ಸತ್ತರೆ ತುಸು ದುಃಖ ಹೆಚ್ಚಾಗುತ್ತದೆ ಎಂಬ ಮಾತಿದೆ. ನಾಡಿ ಸಾವಿನಿಂದಾಗಿ ಕನ್ನಡ ಸಾರಸ್ವತ ಲೋಕ ದುಃಖತಪ್ತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರದ್ದೇ ಮಹತ್ವದ ಕೃತಿಗಳಲ್ಲಿ ಅವರು ಸದಾ ಜೀವಂತ.
ಈ ಸುದ್ದಿಯನ್ನೂ ಓದಿ:ಕಣ್ಣನ್ನೂ ಆವರಿಸುವ ಸರ್ಪ ಸುತ್ತು ಸೋಂಕು