Wednesday, 8th January 2025

Namma Metro: ಮೇಕ್ ಇನ್‌ ಇಂಡಿಯಾ ಮೊದಲ ಚಾಲಕರಹಿತ ಮೆಟ್ರೋ ರೈಲು 15 ದಿನದಲ್ಲಿ ಬೆಂಗಳೂರಿಗೆ

namma metro yellow line

ಬೆಂಗಳೂರು: ಮೇಕ್‌ ಇನ್‌ ಇಂಡಿಯಾದಡಿ (Make in India) ದೇಶೀಯವಾಗಿ ತಯಾರಿಸಲಾದ ಮೊದಲ ಚಾಲಕ ರಹಿತ ರೈಲ್ವೆ ಬೋಗಿಗಳು (ಸಿಬಿಟಿಸಿ ತಂತ್ರಜ್ಞಾನ) ಹದಿನೈದು ದಿನಗಳಲ್ಲಿ ಬೆಂಗಳೂರು ತಲುಪಲಿವೆ. ಕೊಲ್ಕತ್ತಾದ ತೀನಾಘಡ ರೈಲ್ ಸಿಸ್ಟಂ ಲಿ. (ಟಿಆರ್ ಎಸ್ಎಲ್) ಇದನ್ನು ತಯಾರಿಸಿದೆ. ‘ನಮ್ಮ ಮೆಟ್ರೋ’ದ (Namma Metro) ಆರ್.ವಿ.ರಸ್ತೆ- ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಲೈನ್‌ನಲ್ಲಿ (Yellow Line) ಇದು ಓಡಾಡಲಿದೆ.

ಚೀನಾದ ಸಿಆರ್‌ಆರ್‌ಸಿ ರೈಲ್ವೆ ಬೋಗಿ ಉತ್ಪಾದನೆ ಕಂಪನಿಯ ಜೊತೆಗಿನ ಒಪ್ಪಂದದ ಭಾಗವಾಗಿ ಟೆಆರ್‌ಎಸ್ಎಲ್ ನಿರ್ಮಿಸಿದ ಈ ರೈಲು ಸೋಮವಾರ ಹೊರಟಿದ್ದು, ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಲಿದೆ. ಚೀನಾದಿಂದ 2023ರ ಫೆಬ್ರವರಿಯಲ್ಲಿ ಬಂದಿರುವ ಮೂಲ ಮಾದರಿ ರೈಲಿನ ಬಳಿಕ ಇದೀಗ ದೇಶೀಯವಾಗಿ ಸಿಆರ್‌ಆರ್‌ಸಿ ನಿರ್ಮಿಸಿದ ರೈಲು ನಮ್ಮ ಮೆಟ್ರೋಗೆ ಸೇರ್ಪಡೆ ಆಗುತ್ತಿದೆ.

ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ 18.82 ಕಿ.ಮೀ. ಅಂತರದಲ್ಲಿ ಈ ರೈಲು ಸಂಚರಿಸಲಿದೆ. ಈ ಮೂಲಕ ಹಳದಿ ಮಾರ್ಗದಲ್ಲಿ ಓಡಾಡಲು ಎರಡನೇ ರೈಲು ಬಂದಂತಾಗಲಿದೆ. ಟಿಆರ್‌ಎಸ್‌ಎಲ್‌ನಿಂದ ಇನ್ನೊಂದು ರೈಲು ಬಂದ ಬಳಿಕ ಬೆಂಗಳೂರು ಮೆಟ್ರೋ ರೈಲು ನಿಗಮ ವಾಣಿಜ್ಯ ಸಂಚಾರ ಆರಂಭಿಸುವ ಉದ್ದೇಶ ಹೊಂದಿದೆ. ಬಹುತೇಕ ಮಾರ್ಚ್ ಅಂತ್ಯಕ್ಕೆ ಇಲ್ಲಿ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.

ಚೀನಾದಿಂದ ಬಂದ ರೈಲಿನ 36 ಪರೀಕ್ಷೆಗಳು ಮುಗಿಯುತ್ತಿವೆ. ದೇಶಿಯವಾಗಿ ನಿರ್ಮಿಸಲಾದ ಕಾರಣ ಈಗ ಬರುವ ರೈಲನ್ನೂ ಕೂಡ ಹಲವು ಬಗೆಯ ತಪಾಸಣೆಗೆ ಒಳಪಡಿಸಲಾಗುವುದು. ರೈಲಿನ ವೇಗ, ತಿರುವಿನಲ್ಲಿ ಸಂಚಾರ, ನಿಲ್ದಾಣದಲ್ಲಿ ನಿಲುಗಡೆ, ನಿಲುಗಡೆ ಆಗುವಾಗ ವೇಗದ ಇಳಿಕೆ, ಬ್ರೇಕ್ ಸಿಸ್ಟಂ, ಸಿಗ್ನಲಿಂಗ್ ಸಿಸ್ಟಂ, ರೈಲಿನ ಒಳಗಡೆಯ ಸ್ಥಿತಿ ಸೇರಿ ಹಲವು ತಪಾಸಣೆ ಮಾಡಿಕೊಳ್ಳಲಾಗುವುದು. ರೈಲ್ವೇ ಮಂಡಳಿಯ ಸುರಕ್ಷತಾ ವಿಭಾಗ, ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡ ಆಗಮಿಸಿ ಒಪ್ಪಿಗೆ ನೀಡಿದ ಬಳಿಕ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಆರಂಭದಲ್ಲಿ ಬಹುತೇಕ ಈ ರೈಲು ಚಾಲಕ ಸಹಿತವಾಗಿಯೇ ಓಡಾಡಲಿದ್ದು, ನಂತರವಷ್ಟೇ ಚಾಲಕರಹಿತವಾಗಿ ಸಂಚರಿಸಲು ಬಿಎಂಆ‌ರ್ ಸಿಎಲ್ ಯೋಜಿಸಿದೆ. ದೆಹಲಿಯಲ್ಲೂ ಆರಂಭದಲ್ಲಿ 2 ವರ್ಷ ಚಾಲಕ ಸಹಿತವಾಗಿಯೇ ಚಾಲಕ ರಹಿತ ರೈಲು ಓಡಾಡಿದ್ದವು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.

ಸಿಆರ್‌ಆರ್‌ಸಿ ಕಂಪನಿಯ ಜೊತೆಗೆ ಒಟ್ಟು 36 ರೈಲುಗಳನ್ನು ಬಿಎಂಆರ್‌ಸಿಎಲ್‌ಗೆ ಒದಗಿಸುವ ಒಪ್ಪಂದವಾಗಿತ್ತು. ಅದರಲ್ಲಿ ಸಿಬಿಟಿಸಿ ತಂತ್ರಜ್ಞಾನ ಹಾಗೂ ಡಿಟಿಜಿ ತಂತ್ರಜ್ಞಾನದ ತಲಾ ಒಂದು ಮೂಲ ಮಾದರಿ ರೈಲು ಚೀನಾದಿಂದ ಬರಲಿದೆ. ಉಳಿದ 34 ರೈಲುಗಳನ್ನು ಮೇಕ್ ಇನ್ ಇಂಡಿಯಾ ಯೋಜನೆ ಭಾಗವಾಗಿ ಸಿಆರ್‌ಆರ್‌ಸಿ ಕೊಲ್ಕತ್ತಾದ ಟಿಆರ್‌ಎಸ್ ಎಲ್ ಕಂಪನಿ ಮೂಲಕ ಒದಗಿಸುತ್ತಿದೆ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್ ತಿಳಿಸಿದರು.

ಚೀನಾದಿಂದ ನೇರಳೆ ಮಾರ್ಗಕ್ಕಾಗಿ ಡಿಟಿಜಿ ತಂತ್ರಜ್ಞಾನದ ಮೂಲ ಮಾದರಿ ರೈಲು ಕೂಡ ಬರುತ್ತಿದೆ. ಏಪ್ರಿಲ್ ನಂತರ ತಿಂಗಳಿಗೆ 2 ರೈಲುಗಳು ಸೇರ್ಪಡೆ ಆಗಲಿವೆ.

Leave a Reply

Your email address will not be published. Required fields are marked *