ಭಾರತದ ಅದ್ವಿತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್ (Srinivasa Ramanujan) ಅವರ ಜನ್ಮದಿನವಾದ ಡಿಸೆಂಬರ್ 22ನೇ ದಿನಾಂಕವನ್ನು ರಾಷ್ಟ್ರೀಯ ಗಣಿತ ದಿನವೆಂದು (National Mathematics Day) ಆಚರಿಸಲಾಗುತ್ತದೆ. ವಿಶ್ವದ ಅಗ್ರಮಾನ್ಯ ಗಣಿತ ಶಾಸ್ತ್ರಜ್ಞರಲ್ಲಿ ಒಬ್ಬರೆಂದು ರಾಮಾನುಜನ್ ಅವರನ್ನು ಗುರುತಿಸಲಾಗುತ್ತದೆ. ಈ ಅಪರೂಪದ ಪ್ರತಿಭೆಯನ್ನು ಸ್ಮರಿಸುವ ಉದ್ದೇಶದಿಂದ, 2012ರ ಸಾಲಿನಿಂದ ಪ್ರತಿವರ್ಷವೂ ಡಿಸೆಂಬರ್ 22ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತಿದೆ.
ಗಣಿತ ಶಾಸ್ತ್ರದಲ್ಲಿ ಸ್ವಾಧ್ಯಯನದ ಮೂಲಕ ಮಹತ್ತರ ಕೊಡುಗೆಯನ್ನು ನೀಡಿರುವ ಇವರು, ಕೇವಲ ಪಠ್ಯದಲ್ಲಿ ಒಂದಿಷ್ಟು ಲೆಕ್ಕಗಳ ಮೂಲಕ ಕಾಡುವುದಕ್ಕೆ ಮಾತ್ರವೇ ಗಣಿತ ಇರುವುದಲ್ಲ; ಬದಲಿಗೆ, ಇದು ಇಡೀ ವಿಶ್ವವನ್ನೇ ವ್ಯಾಪಿಸಿರುವಂಥ ಅಂಶವೆಂಬುದನ್ನು ಸಮರ್ಥವಾಗಿ ನಿರೂಪಿಸಿದ್ದಾರೆ. ಈ ಮೂಲಕ ಹಲವಾರು ಯುವ ಗಣಿತಜ್ಞರು ಮತು ಭವಿಷ್ಯದ ಗಣಿತ ಪ್ರತಿಭೆಗಳಿಗೆ ಆದರ್ಶಪ್ರಾಯರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Job Guide: ನ್ಯಾಷನಲ್ ಅಲ್ಯೂಮಿನಿಯಂ ಕಂಪನಿಯಲ್ಲಿದೆ 518 ಹುದ್ದೆ; 10ನೇ ತರಗತಿ ಪಾಸಾದವರು ಡಿ. 31ರಿಂದ ಅರ್ಜಿ ಸಲ್ಲಿಸಿ
ಗಣಿತ ದಿನದಂದು ಶ್ರೀನಿವಾಸ ರಾಮಾನುಜನ್ ಅವರ ಬದುಕು ಮತ್ತು ಸಾಧನೆಯನ್ನು ನೆನಪಿಸಿಕೊಳ್ಳಲಾಗುತ್ತದೆ. ಶಾಲೆ, ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಹಲವಾರು ಸ್ವರ್ಧೆಗಳು, ಚರ್ಚೆಗಳು, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗುತ್ತದೆ. 2017 ರಲ್ಲಿ ಆಂಧ್ರಪ್ರದೇಶದ ಚಿತ್ತೂರಿನ ಕುಪ್ಪಂನಲ್ಲಿ ರಾಮಾನುಜನ್ ಗಣಿತ ಪಾರ್ಕ್ ಸಹ ನಿರ್ಮಿಸಲಾಗಿದೆ.
ರಾಮಾನುಜನ್ ಅವರ ಬದುಕು
ತಮಿಳುನಾಡಿನ ಈರೋಡಿನ ಅಯ್ಯಂಗಾರ್ ಕುಟುಂಬದಲ್ಲಿ 1887ರಲ್ಲಿ ಶ್ರೀನಿವಾಸ ರಾಮಾನುಜನ್ ಜನಿಸಿದರು. 12 ವರ್ಷಗಳ ವಯಸ್ಸಿನಲ್ಲೇ ಟ್ರಗ್ನಾಮೆಟ್ರಿಯಲ್ಲಿ ಪ್ರಮೇಯಗಳನ್ನೆಲ್ಲ ಮುಂದಿಟ್ಟಿದ್ದರು. ಮಾಧ್ಯಮಿಕ ಶಿಕ್ಷಣದಲ್ಲಿ ಗಣಿತದ ಹೊರತಾಗಿ ಉಳಿದ ವಿಷಯಗಳು ಅವರಿಗೆ ಕಷ್ಟವೆನಿಸುತ್ತಿದ್ದವು. 14 ವರ್ಷಗಳಿದ್ದಾಗ ಮನೆಯಿಂದ ಹೊರಬಂದ ರಾಮಾನುಜನ್, ಮದ್ರಾಸಿನ ಕಾಲೇಜೊಂದಕ್ಕೆ ಸೇರಿದರು. ಅಲ್ಲಿಯೂ ಅವರ ಒಲವು ಗಣಿತ ಮಾತ್ರವೇ ಆಗಿತ್ತು. ಹಾಗಾಗಿ ಉಳಿದೆಲ್ಲ ವಿಷಯಗಳಲ್ಲಿ ಹಿಂದುಳಿದು, ಪದವಿಯನ್ನು ಮುಗಿಸುವುದಕ್ಕೇ ಅವರಿಗೆ ಆಗಲಿಲ್ಲ. ಜತೆಗೆ ಬಡತನವೂ ಸೇರಿದ್ದರಿಂದ, ಖಾಸಗಿಯಾಗಿಯೇ ತನ್ನ ಗಣಿತ ಪ್ರೀತಿಯನ್ನು ಮುಂದುವರಿಸಿದರು.
ಕೆಲವೇ ಸಮಯಗಳಲ್ಲಿ, ಇಂಡಿಯನ್ ಮ್ಯಾಥಮ್ಯಾಟಿಕಲ್ ಸೊಸೈಟಿಯ ಸಂಸ್ಥಾಪಕರಾದ ರಾಮಸ್ವಾಮಿ ಅಯ್ಯರ್ ಅವರು ರಾಮಾನುಜನ್ ಅವರ ಪ್ರತಿಭೆಯನ್ನು ಗುರುತಿಸಿದರು. ರಾಮಾನುಜನ್‌ಗೆ ಉದ್ಯೋಗವೊಂದನ್ನು ಪಡೆಯಲು ನೆರವಾಗಿ, ಬಡತನದಿಂದ ಪಾರು ಮಾಡಿದರು. ತನ್ನ ಗಣಿತ ಸಂಬಂಧಿ ಕೆಲಸವನ್ನು ಮುಂದುವರಿಸಿದ ರಾಮಾನುಜನ್ ಅವರ ಪ್ರತಿಭೆ ಬ್ರಿಟನ್ ಗಣಿತಜ್ಞರ ಗಮನಕ್ಕೂ ಬಂತು. 1914 ರಲ್ಲಿ ಅವರನ್ನು ಲಂಡನ್‌ಗೆ ಕರೆಸಿಕೊಳ್ಳಲಾಯಿತು. ಅಲ್ಲಿ ಅವರು ಟ್ರಿನಿಟಿ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಯಿತು. 1917ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯ ಸೇರಿದರು. 1918ರಲ್ಲಿ ರಾಯಲ್ ಸೊಸೈಟಿಯ ಫೆಲೊ ಎನಿಸಿಕೊಂಡು, ಈ ಸಾಧನೆ ಮಾಡಿದ ಕಿರಿಯ ಪ್ರತಿಭೆಯೆಂಬ ಮನ್ನಣೆಗೆ ಪಾತ್ರರಾದರು.
ಈ ಸುದ್ದಿಯನ್ನೂ ಓದಿ | Drone Training: ಡ್ರೋನ್ ತರಬೇತಿಗೆ ಅರ್ಜಿ ಆಹ್ವಾನ; ಡಿ.23 ಕೊನೆ ದಿನ
ಅಷ್ಟಾದರೂ ಅವರಿಗೆ ಬ್ರಿಟನ್‌ನ ಆಹಾರ ಒಗ್ಗುತ್ತಿರಲಿಲ್ಲ. ಅಲ್ಲಿನ ಅತಿ ಚಳಿಯ ಹವಾಮಾನವೂ ಅವರ ಆರೋಗ್ಯವನ್ನು ಹಾಳು ಮಾಡಿತು. 1919ರಲ್ಲಿ ಅವರು ಭಾರತಕ್ಕೆ ಮರಳಿ ಬಂದರು. ಆದರೆ ಅವರ ಆರೋಗ್ಯ ಮಾತ್ರ ಚೇತರಿಸಿಕೊಳ್ಳಲಾಗದಷ್ಟು ಹದಗೆಟ್ಟಿತ್ತು. 1920 ರಲ್ಲಿ, ಕೇವಲ 32 ವರ್ಷಗಳಿದ್ದಾಗ ಅವರು ಇಹಲೋಕ ತ್ಯಜಿಸಿದರು. ಅವರು ತಮ್ಮ ನೋಟ್ಸ್‌ನಲ್ಲಿ ಬರೆದುಕೊಂಡಿದ್ದನ್ನು ಗಣಿತ ಪ್ರಪಂಚ ಇಂದಿಗೂ ಕಾದಿರಿಸಿಕೊಂಡಿದೆ. ಅತಿ ಕಡಿಮೆ ವಯಸ್ಸಿನಲ್ಲೇ ಅತಿ ಹೆಚ್ಚಿನ ಸಾಧನೆ ಮಾಡಿದ್ದ ಶ್ರೀನಿವಾಸ ರಾಮಾನುಜನ್ ಅವರ ಪ್ರತಿಭೆ ಇಂದಿಗೂ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದಿದೆ.