Friday, 22nd November 2024

Navaratri 2024: ಕರಾವಳಿಗೆ ಹೋಗಿದ್ದರೆ ನವರಾತ್ರಿ ವಿಶೇಷ ‘ಪಿಲಿನಲಿಕೆ’ ನೋಡಲು ಮರೆಯದಿರಿ!

Navaratri 2024

ದೇವರು ಭಕ್ತಾಧೀನನಂತೆ. ಹಾಗೆಂದು ದೇವರು ಹೇಳಿದ್ದಾನೋ ಇಲ್ಲವೊ, ಭಕ್ತರಂತೂ ಭಾವಿಸಿದ್ದಾರೆ. ತಾವು ಕರೆದಲ್ಲಿ ಓಗೊಟ್ಟು, ಬೇಡಿದ್ದನ್ನು ಕೊಡುವಾತ ಎಂಬ ನಂಬಿಕೆಯೇ ಜಗತ್ತನ್ನು ಈವರೆಗೆ ಸಾಗಿಸುತ್ತಾ ಬಂದಿದೆ. ಆದರೆ ಕರೆಯುವುದಕ್ಕೊಂದು ರೀತಿ-ನೀತಿ ಬೇಡವೇ? ದೇವರ ಭಾಷೆ ಭಕ್ತರಿಗೆ ಬಾರದಿರುವುದರಿಂದ, ಬಂದ ಭಾಷೆಯಲ್ಲಿ ಕರೆಯುವುದು ಸಹಜ. ಈ ಕರೆಯನ್ನೇ ಉಪಾಸನೆಯ ಹಲವು ಮಾರ್ಗಗಳಾಗಿ ನಾವು ಗುರುತಿಸುತ್ತಾ ಬಂದಿದ್ದೇವೆ. ನವರಾತ್ರಿಯ (Navaratri 2024) ಅಷ್ಟೂ ದಿನಗಳಲ್ಲಿ ದೇವಿಯ ಉಪಾಸನೆಯನ್ನು ನಮಗಿಷ್ಟ ಬಂದ ರೀತಿಯಲ್ಲಿ ಮಾಡುತ್ತೇವೆ. ಉಪವಾಸವಿದ್ದು ಉಪಾಸನೆ ಮಾಡಿದರೂ, ಪ್ರಸಾದಗಳ ಪರ್ವತವನ್ನೇ ಸೃಷ್ಟಿ ಮಾಡಿದರೂ- ಎಲ್ಲವೂ ಭಕ್ತಿಯ ಮಾರ್ಗಗಳೇ. ದೇವಿಯ ಉಪಾಸನೆ ಮಾರ್ಗವೆಂದೇ ನಂಬಿರುವ ಹುಲಿಕುಣಿತ ಅಥವಾ ಪಿಲಿನಲಿಕೆ ಮಹತ್ವ ಪಡೆಯುವುದು ಇದೇ ಕಾರಣಕ್ಕೆ.

ಕರ್ನಾಟಕದ ಕರಾವಳಿಯ ಪ್ರಾಂತ್ಯವನ್ನೊಮ್ಮೆ ಸುತ್ತಿಬಂದರೆ, ಅಲ್ಲಿ ಆರಾಧನೆಗಳಿಗೆ ನೀಡಲಾಗುವ ಮಹತ್ವ ಗಮನಕ್ಕೆ ಬರುತ್ತದೆ. ಹೆಜ್ಜೆ ಹೆಜ್ಜೆಗೆ ಎದುರಾಗುವ ದೇವಿಯ ದೇಗುಲಗಳು, ನಾಗರ ಕಲ್ಲುಗಳು, ಯಕ್ಷಗಾನ, ಕೋಲ, ಹುಲಿವೇಷ ಇತ್ಯಾದಿಗಳೆಲ್ಲವೂ ದೈವಾರಾಧನೆಯ ಹಲವು ಮಾರ್ಗಗಳು. ಕಟೀಲು, ಮಂದರ್ತಿ, ಕೊಲ್ಲೂರು, ಬಪ್ಪನಾಡು, ಪೊಳಲಿ, ಅಂಬಲಪಾಡಿ, ಮಂಗಳಾದೇವಿ ಮುಂತಾದವು ಇಲ್ಲಿನ ಪ್ರಸಿದ್ಧ ಶಕ್ತಿಪೀಠಗಳು. ಈ ದೇವಿಯರ ಸಮ್ಮುಖದಲ್ಲಿ ಹರಕೆಯ ರೂಪದಲ್ಲಿ ನವರಾತ್ರಿಯಲ್ಲಿ ಹುಲಿವೇಷ ಹಾಕುವುದು ದೀರ್ಘಕಾಲದಿಂದ ನಡೆದು ಬಂದ ಕ್ರಮ. ಇಷ್ಟಾರ್ಥ ಸಿದ್ಧಿಗಾಗಿ, ಯಾವುದೋ ಬೇಡಿಕೆಗೆ ಪ್ರತಿ ಹರಕೆಗಾಗಿ, ಎಂದೋ ತೊಟ್ಟ ಸಂಕಲ್ಪಕ್ಕಾಗಿ, ಸೇವಾರ್ಥವಾಗಿ- ಹೀಗೆ ನಿರ್ಗುಣ-ನಿರಾಕಾರ ತತ್ವಕ್ಕೆ ನಡೆಸುವ ಯಾವುದೇ ಬಗೆಯ ಉಪಾಸನೆಯೂ ನಂಬಿದವರ ಭಾವ-ಭಕುತಿಗೆ ಬಿಟ್ಟಿದ್ದು.

ಈ ಸುದ್ದಿಯನ್ನೂ ಓದಿ | Navaratri Bangles Trend 2024: ನವರಾತ್ರಿ ಸಂಭ್ರಮಕ್ಕೆ ಜತೆಯಾದ 5 ಡಿಸೈನ್‌‌ನ ಕಲರ್‌ಫುಲ್‌ ಬ್ಯಾಂಗಲ್ಸ್

ಎಂದಿನಿಂದ ನಡೆದಿದೆ?

ಸ್ಥಳೀಯವಾಗಿ ಪಿಲಿನಲಿಕೆ (ತುಳುವಿನಲ್ಲಿ) ಎಂದೇ ಕರೆಯಲಾಗುವ ಈ ಕ್ರಮ ಎಷ್ಟು ಹಳೆಯದು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಸ್ವಾತಂತ್ರ್ಯ ಪೂರ್ವ ಕಾಲದಿಂದ ಇದು ಚಾಲ್ತಿಯಲ್ಲಿರುವ ವಿಷಯ ಸ್ಪಷ್ಟ. ತುಳುನಾಡಿನಲ್ಲಿ ಹೆಚ್ಚಾಗಿ ಆರಾಧಿಸಲ್ಪಡುವ ಶಕ್ತಿ ದೇವತೆಯ ವಾಹನ ಹುಲಿ. ಇದೇ ಹಿನ್ನೆಲೆಯಲ್ಲಿ ದೇವಿಯ ಸೇವೆಗೆ ಹುಲಿವೇಷ ಮಾಡುವುದು ಪ್ರಚಲಿತಕ್ಕೆ ಬಂದಂತೆ ಕಾಣುತ್ತದೆ. ಈ ವೇಷದ ಸೇವೆಯನ್ನು ನವರಾತ್ರಿಯಲ್ಲಿ ಹೆಚ್ಚಾಗಿ ಮಾಡಿದರೂ ಕೃಷ್ಣ ಜನ್ಮಾಷ್ಟಮಿಯಲ್ಲೂ ನಡೆಸಲಾಗುತ್ತದೆ.

ವೇಷ ಮಾಡುವುದು ಹೇಗೆ?

ಇದೊಂದು ಕ್ಲಿಷ್ಟ ಕೆಲಸ. ಹಿಂದಿನ ಕಾಲದಲ್ಲಿ ಮೊದಲಿಗೆ ಬಣ್ಣವನ್ನು ತಯಾರಿಸಿಕೊಳ್ಳುತ್ತಿದ್ದರು. ಇದ್ದಿಲು, ಅರಿಶಿನಗಳನ್ನು ಒಟ್ಟಿಗೆ ಅರೆದು, ಆ ಬಣ್ಣಕ್ಕೆ ಹೊಳಪು ನೀಡುವುದಕ್ಕೆ ಮೊಟ್ಟೆಯ ಚಿಪ್ಪಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸುತ್ತಿದ್ದರು. ಹೀಗೆ ತಯಾರಾಗುವ ಬಣ್ಣಗಳನ್ನು ಮೈಗೆ ಹಚ್ಚಿದಾಗ ವಿಪರೀತ ಉರಿಯ ಅನುಭವ ನೀಡುತ್ತಿದ್ದವು. ಈಗ ಬೇರೆ ರೀತಿಯ ಬಣ್ಣಗಳನ್ನೂ ಬಳಸಲಾಗುತ್ತದೆ. ಸಾಮಾನ್ಯವಾಗಿ ಕಡುಕಪ್ಪು ಬಣ್ಣದ ಚಲ್ಲಣ, ಉಳಿದ ಮೈಗೆಲ್ಲಾ ಹಳದಿ, ಬಿಳಿ ಮತ್ತು ಕಪ್ಪು ಬಣ್ಣಗಳ ಲೇಪ, ಮುಖಕ್ಕೆ ಬಣ್ಣ ಹಾಕುವವರೂ ಇದ್ದಾರೆ, ಮುಖವಾಡ ತೊಡುವವರೂ ಇದ್ದಾರೆ, ಜೊತೆಗೊಂದು ಬಾಲ. ಇಷ್ಟಾದರೆ ಹುಲಿಗಳು ಸಿದ್ಧ!

ಈ ಬಣ್ಣ ಬರೆಯುವುದೇ ದೊಡ್ಡ ಕತೆ. ಪಟ್ಟೆ ಹುಲಿ, ಚಿಟ್ಟೆ (ಚುಕ್ಕಿ) ಹುಲಿ, ಕರಿ ಹುಲಿ ಎಂಬಂಥ ಬಗೆಗಳಲ್ಲಿ ವೇಷ ಮಾಡಲಾಗುತ್ತದೆ. ಮೊದಲೆಲ್ಲಾ ಹುಲಿವೇಷ ಮಾಡುವವರು ಉಪವಾಸ ವ್ರತಗಳನ್ನೆಲ್ಲಾ ಮಾಡಬೇಕಿತ್ತು. ಬಣ್ಣಕ್ಕಾಗಿ ಆರೆಂಟು ತಾಸು ಕೈಯಗಲಿಸಿ ನಿಂತೇ ಇರಬೇಕಿತ್ತು. ನಂತರ ಹಾಕಿದ ಬಣ್ಣ ಒಣಗಬೇಕು. ಆವರೆಗೆ ಆಹಾರ-ಶೌಚಗಳ ಪರಿವೆಯನ್ನೂ ಬಿಡಬೇಕಿತ್ತು. ಆದರೀಗ ಬಣ್ಣ ಹಾಕುವ ಪ್ರಕ್ರಿಯೆ ಮೊದಲಿನಷ್ಟು ದೀರ್ಘವಲ್ಲದೆ ಚುರುಕಾಗಿದೆ. ಆದರೆ ಒಮ್ಮೆ ಹಾಕಿದ ಬಣ್ಣವನ್ನು ಒಂಬತ್ತು ದಿನಗಳ ಪರ್ಯಂತ ತೆಗೆಯುವುದಿಲ್ಲ! ಹೌದು, ಒಂಬತ್ತು ದಿನಗಳು ಈ ಬಣ್ಣ ಮೈಮೇಲೇ ಇರುತ್ತದೆ. ವೇಷ ಕಳಚುವಾಗ ಸಂಗ್ರಹವಾದ ಹಣದ ಒಂದು ಪಾಲನ್ನು ದೇವಿಗೆ ಕಾಣಿಕೆಯಾಗಿ ಒಪ್ಪಿಸಬೇಕು.

ಕುಣಿತ ಹೇಗೆ?

ಕುಣಿಯುವುದೆಂದರೆ ಗಣೇಶನ ಮೆರವಣಿಗೆಯಂತೆ ಒಟ್ಟಾರೆ ಕುಣಿಯುವುದಲ್ಲ. ಹುಲಿ ಕುಣಿತಕ್ಕಾಗಿಯೇ ಕೆಲವು ಜನಪದೀಯ ಲಯಗಳಿವೆ. ಇದಕ್ಕಾಗಿ ಬಳಕೆಯಲ್ಲಿರುವುದು ತಾಸೆ ಅಥವಾ ಡೊಳ್ಳು. ಈ ತಾಸೆಯ ಲಯಕ್ಕೆ ಸರಿಯಾಗಿ ಹುಲಿ ವೇಷಗಳು ನಿಧಾನ ಅಥವಾ ವೇಗದ ಹೆಜ್ಜೆ ಹಾಕಬೇಕು. ಇದರಲ್ಲಿ ಎರಡು ರೀತಿ- ಮೊದಲನೆಯದು, ಲಯಕ್ಕೆ ತಕ್ಕ ಹೆಜ್ಜೆ; ಎರಡನೆಯದು, ವಿಧವಿಧದ ಕಸರತ್ತುಗಳು. ಅಂದರೆ ನೆಲದ ಮೇಲಿದ್ದ ನೋಟನ್ನು ಹಿಂಬದಿಯಿಂದ ಬಾಗಿ ಬಾಯಲ್ಲಿ ಕಚ್ಚಿ ತೆಗೆಯುವುದು, ಸೋಡಾ ಬಾಟಲಿಯ ಮುಚ್ಚಳ ತೆಗೆಯುವುದು, ಅಕ್ಕಿ ಮೂಟೆಯನ್ನು ಬಾಯಲ್ಲಿ ಕಚ್ಚಿ ಎತ್ತಿಕೊಳ್ಳುವುದು, ಗಿರಕಿ ಹೊಡೆಯುವುದು- ಇಂಥ ಹಲವು ವಿಧದ ದೈಹಿಕ ಶ್ರಮವನ್ನಿಲ್ಲಿ ಕಾಣಬಹುದು. ಕಾಲು, ಬೆನ್ನು, ಸೊಂಟ, ಕತ್ತುಗಳು ನಿಜಕ್ಕೂ ಗಟ್ಟಿಯಿರಬೇಕು. ತಾಯಿ ಹುಲಿ ಮತ್ತು ಮರಿಹುಲಿಗಳೆರಡೂ ಕುಣಿತದಲ್ಲಿ ಆಕರ್ಷಣೆಯ ಕೇಂದ್ರ.

ಈ ವೇಷ ಕಳಚುವುದೂ ಒಂದು ಪ್ರಕ್ರಿಯೆ. ಒಂಬತ್ತು ದಿನಗಳ ಕುಣಿತದ ಪರ್ಯಂತ ದಣಿದ ಮೇಲೆ, ಕೊನೆಯ ದಿನದ ಮೆರವಣಿಗೆಯಲ್ಲಿ ಈ ಹುಲಿಗಳ ಅಬ್ಬರ ಜೋರು. ಕೊನೆಯಲ್ಲಿ ಶಾರದೆಯ ವಿಸರ್ಜನೆ ಆದ ಮೇಲೆ ವೇಷಧಾರಿಗಳ ಮಹಾಮಜ್ಜನ. ಎಳ್ಳೆಣ್ಣೆ, ತೆಂಗಿನೆಣ್ಣೆ ಅಥವಾ ತೆಂಗಿನ ಕಾಯಿ ಹಾಲನ್ನು ಮೈಗೆಲ್ಲಾ ತಿಕ್ಕಿಕೊಂಡು, ಅರ್ಧ-ಮುಕ್ಕಾಲು ಗಂಟೆಯ ನಂತರ ಅವರ ಸ್ನಾನ. ಇಷ್ಟೂ ದಿನಗಳಲ್ಲಿ ಕೈಗೆ ಬಂದ ಹಣದಲ್ಲಿ ಒಂದು ಪಾಲು ದೇವಿಯ ಕಾಣಿಕೆಯೆಂದು ತೆಗೆದಿರಿಸಬೇಕು. ಇದರಲ್ಲಿ ಲಾಭ-ನಷ್ಟದ ಮಾತಿಲ್ಲ.

ಈ ಸುದ್ದಿಯನ್ನೂ ಓದಿ | Ayudha Pooja: ಕೆಎಸ್‌ಆರ್‌ಟಿಸಿ ಬಸ್‌ಗಳ ಆಯುಧ ಪೂಜೆಗೆ ನೀಡುವ ಹಣ 100 ರಿಂದ 250 ರೂ.ಗೆ ಹೆಚ್ಚಳ

ಜಾತ್ಯತೀತ ಕುಣಿತ

ಹಿಂದೂಗಳು ಮಾತ್ರವೇ ಹುಲಿವೇಷದ ಹರಕೆ ತೀರಿಸಬೇಕೆಂದಿಲ್ಲ. ನಂಬಿದವರ ಜಾತಿ, ಧರ್ಮವನ್ನು ದೇವರೆಂದೂ ಪ್ರಶ್ನಿಸುವುದಿಲ್ಲ. ಆರೋಗ್ಯ ಸರಿಯಿಲ್ಲದ ಮಕ್ಕಳು ಗುಣಮುಖರಾದರೆ, ಅವರಿಂದ ಹುಲಿವೇಷದ ಸೇವೆ ಮಾಡಿಸುತ್ತೇವೆಂದು ಹೆತ್ತವರು ಹರಕೆ ಹೊರುತ್ತಾರೆ. ಇವೆಲ್ಲ ತೀರುವುದು ನವರಾತ್ರಿಯ ಸಂದರ್ಭದಲ್ಲಿ. ಆದರೆ ಹರಕೆ ತೀರಿಸುವ ಮಕ್ಕಳು ಒಂಬತ್ತು ದಿನಗಳ ಪರ್ಯಂತ ಬಣ್ಣದಲ್ಲಿ ಇರುವ ನಿಯಮವಿಲ್ಲ. ಅವರಿಗೆ ಒಂದೇ ದಿನ ಸಾಕು. ಅಲ್ಲದೆ, ಈಗೀಗ ʻಹೆಣ್ಣು ಹುಲಿʼಗಳ ಸಂಖ್ಯೆಯೂ ಸಾಕಷ್ಟು ಹೆಚ್ಚಿದೆ. ಗಂಡು ಮಕ್ಕಳಂತೆಯೇ ಕೈ-ಕಾಲುಗಳ ವೇಗದ ಚಲನೆಯಲ್ಲಿ ಹೆಣ್ಣು ಮಕ್ಕಳೂ ಹಿಂದಿಲ್ಲ. ಹುಡುಗರು ಬರಿಮೈಗೆ ಬಣ್ಣ ಬಳಿದುಕೊಂಡರೆ, ಹುಡುಗಿಯರು ಮೈತುಂಬಾ ಬಟ್ಟೆ ತೊಟ್ಟು, ಮುಖವಾಡಗಳನ್ನು ಧರಿಸಿ ಹುಲಿಗಳಂತೆ ಆರ್ಭಟಿಸುತ್ತಿದ್ದಾರೆ. ಇತ್ತೀಚೆಗೆ ಹುಲಿಕುಣಿತದ ತಂಡಗಳೇ ತಯಾರಾಗುವ ಮೂಲಕ ಇದಕ್ಕೊಂದು ಸ್ಪರ್ಧಾತ್ಮಕ ಚೌಕಟ್ಟು ಒದಗಿದ್ದು, ಆರಾಧನೆಯ ಆಯಾಮ ಬದಲಾಗುತ್ತಿದೆ.