Thursday, 9th January 2025

Naxals surrender: ನಕ್ಸಲರ ಶರಣಾಗತಿ ಸ್ಥಳದಲ್ಲಿ ಬದಲಾವಣೆ; ಸಿಎಂ ಗೃಹ ಕಚೇರಿಯಲ್ಲಿ ಇಂದು ಸರೆಂಡರ್‌

Naxals surrender

ಬೆಂಗಳೂರು: ಪಶ್ಚಿಮಘಟ್ಟ ಹಾಗೂ ಮಲೆನಾಡಿನಲ್ಲಿ ಅಡಗಿದ್ದ 6 ನಕ್ಸಲರು ಶರಣಾಗತಿಗೆ ಬಯಸಿ ನಾಗರಿಕ ಸಮಿತಿಗೆ ಪತ್ರ ಬರೆದಿದ್ದರು. ಈ ಮೊದಲು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಕ್ಸಲರು (Naxals surrender) ಶರಣಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಶರಣಾಗತಿಯಾಗುವ ಸ್ಥಳ ಧಿಡೀರ್ ಬದಲಾವಣೆಯಾಗಿದ್ದು, ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಕ್ಸಲರು ಇಂದು ಮಧ್ಯಾಹ್ನ 3 ಗಂಟೆಗೆ ಸರೆಂಡ‌ರ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.

ನಿಗದಿ ಪ್ರಕಾರ ಇಂದು ಬೆಳಗ್ಗೆ 10 ಗಂಟೆಗೆ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಬೇಕಿತ್ತು. ಆದರೆ ಕೊನೆ ಕ್ಷಣದ ಬದಲಾವಣೆ ಎಂಬಂತೆ ಇಂದು ಬೆಂಗಳೂರಿನಲ್ಲಿ ಸಿಎಂ ಮುಂದೆ ಶರಣಾಗಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶರಣಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಲಿದೆ.

ಶರಣಾಗುವ ನಕ್ಸಲರು ಯಾರು?

  1. ಮುಂಡುಗಾರು ಲತಾ (ಮುಂಡಗಾರು ಶೃಂಗೇರಿ)
  2. ವನಜಾಕ್ಷಿ (ಬಾಳೆಹೊಳೆ ಕಳಸ)
  3. ಸುಂದರಿ (ಕುಂತಲೂರು ದಕ್ಷಿಣ ಕನ್ನಡ)
  4. ಮಾರಪ್ಪ ಅರೋಳಿ (ಕರ್ನಾಟಕ)
  5. ವಸಂತ ಟಿ (ತಮಿಳುನಾಡು)
  6. ಎನ್. ಜೀಶಾ (ಕೇರಳ)

ನಕ್ಸಲ್ ನಾಯಕ ವಿಕ್ರಂಗೌಡ ಎನ್ ಕೌಂಟರ್ ಪ್ರಕರಣದ ಬಳಿಕ ಆತನ ಅನುಯಾಯಿಗಳಾಗಿದ್ದ ನಕ್ಸಲರಿಗೆ ಶರಣಾಗುವಂತೆ ಸರ್ಕಾರ ಸೂಚನೆ ನೀಡಿತ್ತು. ಶರಣಾದ ನಕ್ಸಲರಿಗೆ ಆರ್ಥಿಕ, ಸಾಮಾಜಿಕ ನೆರವು, ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ 6 ನಕ್ಸಲರು ಶರಣಾಗಲು ನಿರ್ಧರಿಸಿದ್ದರು. ಇದೀಗ ನಕ್ಸಲರು ಶರಣಾಗಲು ಬಾಳೆಹೊನ್ನೂರಿನಿಂದ ಬೆಂಗಳೂರಿಗೆ ಬರುತ್ತಿದ್ದಾರೆ.

ಸರ್ಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ

ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮಾತುಕತೆ ನಡೆಸಲು ಮುಂದಾಗಿದ್ದರೆ, ಈ ಪ್ರಕ್ರಿಯೆಯನ್ನು ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸ್ವಾಗತಿಸಿ, ಸಹಾನುಭೂತಿಯಿಂದ ನಡೆದುಕೊಳ್ಳುತ್ತದೆ. ಕರ್ನಾಟಕದ ಎಲ್ಲ ನಕ್ಸಲೀಯರು ಸಂಪೂರ್ಣವಾಗಿ ಶರಣಾಗತರಾಗಿ ಮುಖ್ಯವಾಹಿನಿಗೆ ಬರಲು ನಮ್ಮ ಸರ್ಕಾರವು ಬಯಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದರು.

ಈ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಸಿಎಂ ಅವರು, ನಕ್ಸಲೀಯ ಚಟುವಟಿಕೆಗಳಲ್ಲಿ ತೊಡಗಿರುವವರು ಶರಣಾಗಿ ಮುಖ್ಯವಾಹಿನಿಗೆ ಬರಬೇಕೆಂದು ಸರ್ಕಾರವು ಬಯಸುತ್ತದೆ. ಈ ಮಧ್ಯೆ ನಕ್ಸಲೀಯರು ಪ್ರಜಾತಾಂತ್ರಿಕತೆಯ ಮುಖ್ಯವಾಹಿನಿಗೆ ಬರಬೇಕೆಂದು ಪ್ರತಿಪಾದಿಸುವ ಹಾಗೂ ಜೀವಹಾನಿಯು ಯಾವ ಕಡೆಯು ನಡೆಯಬಾರದು ಎಂದು ಬಯಸುವ ವಿವಿಧ ಪ್ರಗತಿಪರ ಹಾಗೂ ಜನಪರ ವೇದಿಕೆಗಳ ಹಲವಾರು ಮುಖಂಡರು ನನ್ನನ್ನು ಭೇಟಿ ಮಾಡಿದ್ದರು.

ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಶಾಂತಿ ನೆಲೆಸುವಂತೆ ಮಾಡಲು ಸರ್ಕಾರವು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ. ಆದರೆ ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮಾತುಕತೆ ನಡೆಸಲು ಮುಂದಾಗಿದ್ದರೆ, ಈ ಪ್ರಕ್ರಿಯೆಯನ್ನು ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸ್ವಾಗತಿಸಿ, ಸಹಾನುಭೂತಿಯಿಂದ ನಡೆದುಕೊಳ್ಳುತ್ತದೆ ಎಂದು ಹೇಳಿದ್ದರು.

ನಕ್ಸಲೀಯ ಚಟುವಟಿಕೆಗಳು ಕರ್ನಾಟಕದಲ್ಲಿ ಎಂದೂ ನೆರೆಯ ರಾಜ್ಯಗಳಂತೆ ವಿಪರೀತ ಪ್ರಮಾಣದಲ್ಲಿ ನಡೆದಿಲ್ಲ. ಆದರೆ, ಮಲೆನಾಡಿನಲ್ಲಿ ಎರಡು ದಶಕಗಳಿಂದ ಆಗಾಗ್ಗೆ ನಕ್ಸಲೀಯ ಚಟುವಟಿಕೆಗಳು ಕಾಣುತ್ತಲಿವೆ ಮತ್ತು ಆ ಕಾರಣದಿಂದ ಹಿಂಸೆ ಹಾಗೂ ಸಾವು-ನೋವುಗಳು ಸಂಭವಿಸಿವೆ. ಹಲವಾರು ಅಮಾಯಕರ, ಪೊಲೀಸರ ಮತ್ತು ನಕ್ಸಲೀಯ ಚಟುವಟಿಕೆಗಳಲ್ಲಿ ಇದ್ದವರ ಜೀವಹಾನಿಯೂ ಆಗಿದೆ. ಆದರೆ, ಪ್ರಜಾತಾಂತ್ರಿಕ ಸಮಾಜದಲ್ಲಿ ಬಂದೂಕಿನ ಮೂಲಕ ಬದಲಾವಣೆ ತರಲು ಹೊರಟಿರುವ ಆದರ್ಶವಾದಿಗಳು ತಮ್ಮ ಜೀವವನ್ನೂ ತೆತ್ತುಕೊಳ್ಳುತ್ತಾರೆ, ಇತರರ ಜೀವಹಾನಿಗೂ ಕಾರಣವಾಗುತ್ತಾರೆ. ಇದು ನೋವಿನ ವಿಚಾರವಾದರೂ, ಸಂವಿಧಾನಬದ್ಧವಾಗಿ ಆಡಳಿತ ನಡೆಸುವ ಸರ್ಕಾರ ಸುಮ್ಮನೇ ಕೂರುವುದು ಸಾಧ್ಯವಿಲ್ಲ.

ಕರ್ನಾಟಕದ ಎಲ್ಲ ನಕ್ಸಲೀಯರು ಸಂಪೂರ್ಣವಾಗಿ ಶರಣಾಗತರಾಗಿ ಮುಖ್ಯವಾಹಿನಿಗೆ ಬರಲು ನಮ್ಮ ಸರ್ಕಾರವು ಬಯಸುತ್ತದೆ. ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮುಂದಾದ್ದಲ್ಲಿ ಶರಣಾಗತಿ ಕುರಿತು ಈಗಾಗಲೇ ಸರ್ಕಾರವು ನೀತಿಯನ್ನು ರೂಪಿಸಿದ್ದು, ಈ ನೀತಿಯನ್ನು ಸರಳೀಕರಣಗೊಳಿಸಿ, ಸಮಪರ್ಕವಾಗಿ ಜಾರಿ ಮಾಡಲಾಗುವುದೆಂದು ಭರವಸೆ ನೀಡುತ್ತೇನೆ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ | Bengaluru News: ಅಪ್ರಾಪ್ತ ವಿದ್ಯಾರ್ಥಿನಿಯೊಂದಿಗೆ ಪರಾರಿಯಾಗಿದ್ದ ಶಿಕ್ಷಕ ಪೊಲೀಸರ ಬಲೆಗೆ!

Leave a Reply

Your email address will not be published. Required fields are marked *