ಕೆಆರ್‌ಎಸ್ ಜಲಾಶಯದ ಬಿರುಕಿನ ಬಗ್ಗೆ ರಾಕ್ ಮೆಕ್ಯಾನಿಕ್ ಸಂಸ್ಥೆಯಿಂದ ತನಿಖೆ ಅಗತ್ಯ
ಜಿಯಾಲಾಜಿಕಲ್ ಇಲಾಖೆಯ ನಿವೃತ್ತ ಡ್ರಿಲ್ಲಿಂಗ್ ಮುಖ್ಯಸ್ಥ ಜಿತೇಂದ್ರ ಕುಮಾರ್ ಸಲಹೆ
ವಿಶ್ವವಾಣಿ ಸಂದರ್ಶನ: ರಂಜಿತ್ ಎಚ್.ಅಶ್ವತ್ಥ
ಕೃಷ್ಣರಾಜಸಾಗರ ಜಲಾಶಯ ಕರ್ನಾಟಕದ ಹೆಮ್ಮೆ. ವಿಶ್ವೇಶ್ವರಯ್ಯ ಅವರ ಅದ್ಭುತ ಜ್ಞಾನದಿಂದ ನಿರ್ಮಾಣ ವಾಗಿರುವ ಕೆಆರ್‌ಎಸ್ ವಿಷಯದಲ್ಲಿ ಕೆಲ ದಿನ ಗಳಿಂದ ಕೇಳಿಬಂದಿರುವ ಬಿರುಕಿನ ವಿಷಯವನ್ನು ರಾಜಕೀಯ ಗೊಳಿಸದೇ, ಸೂಕ್ತ ತನಿಖೆಯಾಗಬೇಕು.
ಬಿರುಕು ಬಿಟ್ಟಿರುವುದಕ್ಕೆ ಕಾರಣವೇನು ಎನ್ನುವ ಬಗ್ಗೆ ರಾಕ್ ಮೆಕ್ಯಾನಿಕ್ ಸೇರಿದಂತೆ ವಿವಿಧ ಸಂಸ್ಥೆಗಳಿಂದ ವರದಿ ಪಡೆಯಬೇಕು ಎಂದು ಜಿಯಲಾಜಿಕಲ್ ಇಲಾಖೆಯ ನಿವೃತ್ತ ಡ್ರಿಲ್ಲಿಂಗ್ ಮುಖ್ಯಸ್ಥ ಜಿತೇಂದ್ರ ಕುಮಾರ್ ಹೇಳಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವಿನ ವಾಗ್ದ್ಯುದ್ಧಕ್ಕೆ ಕಾರಣವಾಗಿರುವ ಕೆಆರ್‌ಎಸ್ ಬಿರುಕು ಬಿಟ್ಟಿರುವ ವಿಷಯದ ಬಗ್ಗೆ ವಿಶ್ವವಾಣಿಯೊಂದಿಗೆ ಮಾತ ನಾಡಿರುವ ಅವರು, ಬಿರುಕು ಬಿಟ್ಟಿರುವ ವಿಷಯದಲ್ಲಿ ರಾಜ್ಯ ಸರಕಾರ ಯಾವ ರೀತಿ ಕ್ರಮವಹಿಸಬಹುದು ಎಂದು ಸಲಹೆ ನೀಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಜಲಾಶಯಗಳು ಬಿರುಕು ಬಿಡಲು ಸಾಧ್ಯವೇ?
ಯಾವುದೇ ಜಲಾಶಯಗಳು ಬಿರುಕು ಬಿಡುವುದು ತೀರಾ ಅಪರೂಪ. ನಿರ್ಮಾಣದ ವೇಳೆಯೇ ಇದಕ್ಕೆಲ್ಲ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತದೆ. ಆದರೆ ಕೆಆರ್‌ಎಸ್ ಡ್ಯಾಂನಲ್ಲಿ ಈಗಾಗಲೇ ಕೆಲ ಬಿರುಕು ಕಾಣಿಸಿಕೊಂಡಿದೆ ಎಂದು ೫೦ರಿಂದ ೬೦ ಕೋಟಿ ರು. ವೆಚ್ಚದಲ್ಲಿ ರಿಪೇರಿ ಕಾರ್ಯವನ್ನು ಮಾಡಲಾಗಿದೆ. ಸಿಮೆಂಟ್ ಕಾಂಕ್ರೀಟ್ ಮಾಡಿರುವುದಕ್ಕೆ ದಾಖಲೆ ಇರುವುದರಿಂದ, ಚಿಕ್ಕ ಪುಟ್ಟ ಬಿರುಕು ಇರುವುದು ಸತ್ಯ. ಆದರೆ ಮುಖ್ಯವಾಗಿ ಈ ಬಿರುಕು ಬಿಡಲು ಕಾರಣವೇನು ಎನ್ನುವುದನ್ನು ನೋಡಬೇಕು. ಇದಕ್ಕೆ ಪ್ರಮುಖವಾಗಿ ಬೇಬಿ ಬೆಟ್ಟ ದಲ್ಲಾಗುತ್ತಿರುವ ಕ್ವಾರಿ ಗಣಿಗಾರಿಕೆ ಎನ್ನಲಾಗಿದೆ. ಆದ್ದರಿಂದ ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಟ್ಟಿಗೆ ತನಿಖೆ ನಡೆಸಬೇಕು.
ಕ್ವಾರಿ ಕೊರೆತದಿಂದ ಜಲಾಶಯಗಳಿಗೆ ಸಮಸ್ಯೆಯಾಗುವುದೇ?
ಬೇಬಿ ಬೆಟ್ಟದ ವಿಷಯದ ಬಗ್ಗೆಯೇ ಹೇಳುವುದಾದರೆ, ಈ ಮೊದಲು ಅವರಿಗೆ ಅನುಮತಿ ನೀಡಿರುವುದು ಚಿಕ್ಕ ರಂಧ್ರವನ್ನು ಕೊರೆದು ಸ್ಫೋಟಿಸಲು ಅವಕಾಶ ನೀಡಿದ್ದಾರೆ. ಆದರೆ ಇತ್ತೀಚೆಗೆ ಕೆಲವರು ಅಲ್ಲಿ ಸಾಲು ಸಾಲು ರಂಧ್ರ ಕೊರೆದು ‘ಬೆಂಚ್ ಬ್ಲಾಸ್ಟ್’ ಮಾಡುತ್ತಿದ್ದಾರೆ. ಇದರಿಂದ ತೀವ್ರ ಸಮಸ್ಯೆಯಾಗುತ್ತದೆ. ಸೋಟದ ತೀವ್ರತೆ ದೂರದಲ್ಲಿರುವ ಕಲ್ಲುಗಳು ಸರಿಯುವ ಅಥವಾ ಬಿರುಕು ಬಿಡುವ ಸಾಧ್ಯತೆಯಿರುತ್ತದೆ. ಇನ್ನು ಈ ಭಾಗದಲ್ಲಿ ದಕ್ಷಿಣ-ಪಶ್ಚಿಮಮಾಭಿಮುಖವಾಗಿ ಕಲ್ಲುಗಳು ಇರುವುದರಿಂದ ಬೇಬಿ ಬೆಟ್ಟದಲ್ಲಾದ ಸೋಟದ ತೀವ್ರತೆ ಇಲ್ಲಿ ಪರಿಣಾಮ ಬೀರುವುದನ್ನು ಅಲ್ಲಗಳೆಯುವಂತಿಲ್ಲ.
ಏನಿದು ಬೆಂಚ್ ಬ್ಲಾಸ್ಟ್?
ಸಾಮಾನ್ಯವಾಗಿ ಕಲ್ಲಿನ ಕ್ವಾರಿಗಳಿಗೆ ಒಂದು ರಂಧ್ರ ಕೊರೆದು ಸ್ಫೋಟಿಸಿ ಕಲ್ಲು ತಗೆಯುವುದಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ೧೫ರಿಂದ ೨೦ ರಂಧ್ರಗಳನ್ನು ಒಟ್ಟಿಗೆ ಕೊರೆದು ಎಲ್ಲಕ್ಕೂ ಭಾರಿ ಪ್ರಮಾಣದ ಸ್ಪೋಟದ ವಸ್ತುವನ್ನು ತುಂಬಿ, ಸೋಟಿಸುತ್ತಾರೆ. ಇದರಿಂದ ರಂಧ್ರ ಕೊರೆದಿರುವ ಸುಮಾರು ದೂರು ಬ್ಲಾಸ್ಟ್ ಆಗುತ್ತದೆ. ೧೦ರಿಂದ ೨೦ ಅಡಿ ಒಟ್ಟಿಗೆ ಸೋಟಗೊಂಡು ಕೆಳಗೆ ಬೀಳುತ್ತದೆ. ಇದು ಭಾರಿ ಪ್ರಮಾಣದ ಸ್ಫೋಟ. ಇದರ ತೀವ್ರತೆ ಹಲವು ಕಿ.ಮೀಗಳ ತನಕ ಇರುತ್ತದೆ.
ಬೇಬಿಬೆಟ್ಟದ ಸ್ಫೋಟ ಕೆಆರ್‌ಎಸ್‌ಗೆ ಸಮಸ್ಯೆಯಾಗಿರಬಹುದೇ?
ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿರುವ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಬಿರುಕು ಬಿಟ್ಟಿರುವ ವಿಷಯದ ಬಗ್ಗೆ ರಾಜಕೀಯ ಹೇಳಿಕೆ ನೀಡುವುದನ್ನು ಬಿಟ್ಟು,
ತಜ್ಞರಿಂದ ಈ ಬಗ್ಗೆ ಸಂಶೋಧನೆ ನಡೆಸುವುದು ಸೂಕ್ತ. ಯಾವುದೇ ಸಂಶೋಧನೆಯಿಲ್ಲದೇ, ಸ್ಪಷ್ಟವಾಗಿ ಹೇಳುವುದಕ್ಕೆ ಕಷ್ಟ. ಸ್ಫೋಟದ ತೀವ್ರತೆ, ಕಲ್ಲುಗಳು
ಅಲ್ಲಾಡುವುದರಿಂದ ಆಗುವ ತೀವ್ರತೆ ಬಗ್ಗೆ ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್ಸಿಟ್ಯೂಟ್ ರಾಕ್ ಮೆಕಾನಿಕ್ಸ್ ಸಂಸ್ಥೆಯಿಂದ ಸಂಶೋಧನೆ ನಡೆಸಬೇಕು.
ಆಗಲೇ ಈ ತೀವ್ರತೆ ಎಲ್ಲಿಯ ತನಕ ಹೋಗಿರಲಿದೆ ಎನ್ನುವುದು ತಿಳಿಯುತ್ತದೆ.
ಒಂದು ವೇಳೆ ಒಡೆದರೆ ಏನಾಗಬಹುದು?
ದೇವರ ದಯೆಯಿಂದ ಕೆಆರ್‌ಎಸ್‌ಗೆ ಯಾವುದೇ ಆಪತ್ತು ಬಾರದಿರಲಿ. ಆದರೆ ಈ ಜಲಾಶಯ ಹಳೇ ಮೈಸೂರು ಭಾಗದ ಜೀನನಾಡಿಯಾಗಿದೆ. ಮೈಸೂರು,
ಮಂಡ್ಯ, ಚಾಮರಾಜನಗರ ಸೇರಿ ಹಲವು ಜಿಲ್ಲೆಗಳ ಕೃಷಿಗೆ ಇದು ನೆರವಾಗಲಿದೆ. ಇದರೊಂದಿಗೆ ಬೆಂಗಳೂರಿಗೆ ಕುಡಿಯುವ ನೀರು, ಕೈಗಾರಿಕೆಗಳಿಗೆ ನೀರನ್ನು ಇದೇ ಜಲಾಶಯ ನೀಡುತ್ತಿರುವುದು. ೧೨೪ ಅಡಿ ಎತ್ತರವಿರುವ ಈ ಜಲಾಶಯದಲ್ಲಿ ಕೋಟ್ಯಂತರ ಲೀಟರ್‌ನಷ್ಟು ನೀರು ಸಂಗ್ರಹವಾಗಿದೆ. ಇದು ಒಡೆದು ಹೋದರೆ, ಏನಾಗಲಿದೆ ಎನ್ನುವುದನ್ನು ನಿರೀಕ್ಷೆ ಮಾಡಲು ಹೆದರಿಕೆಯಾಗುತ್ತದೆ.
ಈ ಹಿಂದೆ ಯಾವಾಗ ನಡೆದಿತ್ತು?
ಈ ರೀತಿಯ ಸ್ಫೋಟದಿಂದ ಡ್ಯಾಂ ಬಿರುಕು ಬಿಟ್ಟಿರುವ ಅಥವಾ ಒಡೆದು ಹೋಗಿರುವ ಉದಾಹರಣೆಯಿಲ್ಲ. ಆದರೆ 1998-99ರಲ್ಲಿ ಶ್ರವಣಬೆಳಗೊಳದ ಬೆಟ್ಟದ
ಕೆಳಗೆ ಕ್ವಾರಿ ಸ್ಫೋಟಿಸಲಾಗಿತ್ತು. ಇದರಿಂದ ಇಡೀ ಶ್ರವಣಬೆಳಗೊಳದ ಬೆಟ್ಟ ಅಲುಗಾಡಿತ್ತು. ಆ ಸಮಯದಲ್ಲಿ ಭಟ್ಟಾರಕ ಶ್ರೀಗಳು ಉಪವಾಸ ಕುಳಿತು ಅಲ್ಲಿ, ಐದು ಕಿ.ಮೀ ಬಫರ್ ಝೋನ್ ಮಾಡಿಸಿದರು. ಆದರೆ ಶ್ರವಣಬೆಳಗೊಳದಲ್ಲಿರುವ ಕಲ್ಲುಗಳ ರಚನೆಗೂ, ಕೆಆರ್‌ಎಸ್ ಬಳಿಯಿರುವ ಕಲ್ಲುಗಳ ರಚನೆಗೂ ಸಾಕಷ್ಟು ವ್ಯತ್ಯಾಸವಿದೆ. ಆದ್ದರಿಂದ ಕೆಆರ್ ಎಸ್ ಜಲಾಶಯದ ಭಾಗದಲ್ಲಿ, ಸ್ಫೋಟದಿಂದ ಹೆಚ್ಚು ಸಮಸ್ಯೆಯಾಗುತ್ತದೆ.
***
? ಕೆಆರ್‌ಎಸ್ ಜಲಾಶಯ ನಿರ್ಮಾಣದ ವೇಳೆಯೇ ಹೆಚ್ಚುವರಿ ನೀರನ್ನು ಹೊರಬಿಡಲು ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಹೆಚ್ಚುವರಿ ನೀರು ಬಂದು ಅದರಿಂದ ಒತ್ತಡ ಹೆಚ್ಚಾಗಿ ಬಿರುಕು ಬಿಡುವ ಅಥವಾ ಒಡೆದು ಹೋಗುವ ಸಾಧ್ಯತೆಯೇ ಇಲ್ಲ. ಆ ಕಾರಣಕ್ಕೆ, ಅಕ್ರಮ ಗಣಿಗಾರಿಕೆಯಿಂದಲೇ ಬಿರುಕು ಬಿಟ್ಟಿರುವ ಸಾಧ್ಯತೆ ಯಿದೆ.
? ಕೆಲವೊಮ್ಮೆ ಕ್ವಾರಿಗಳಲ್ಲಿ ಸ್ಫೋಟಿಸುವ ಸ್ಫೋಟಕಗಳ ತೀವ್ರತೆ ಹಲವು ಕಿ.ಮೀ ತನಕ ಪರಿಣಾಮ ಬೀರುತ್ತದೆ. ಅದರಲ್ಲಿಯೂ, ಬೇಬಿಬೆಟ್ಟ ಹಾಗೂ ಕೆಆರ್‌ಎಸ್
ಭಾಗದಲ್ಲಿ ಗ್ರಾನೈಟ್ ಕಲ್ಲುಗಳಿರುವುದರಿಂದ, ಬೇಬಿಬೆಟ್ಟದಲ್ಲಾಗುವ ಸೋಟಕ ಕೆಆರ್‌ಎಸ್‌ಗೆ ತಾಗುವ ಸಾಧ್ಯತೆಯಿರುತ್ತದೆ.
? ದುರದೃಷ್ಟವಶಾತ್ ಕೆಆರ್‌ಎಸ್ ಬಿರುಕು ಬಿಟ್ಟು ಒಡೆದು ಹೋದರೆ, ಮೈಸೂರು, ಚಾಮರಾಜನಗರ, ಮಂಡ್ಯ ಸೇರಿದಂತೆ ತಮಿಳುನಾಡಿನ ಕೆಲ ಜಿಲ್ಲೆಗಳು ಸಂಪೂರ್ಣ ಜಲಾವೃತ್ತವಾಗುತ್ತದೆ. ಬೆಂಗಳೂರಿನ ಜಲಮೂಲವೇ ನಿಂತು ಹೋಗುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.