Saturday, 4th January 2025

Nelamangala News: ಮದ್ಯದ ಅಮಲಿನಲ್ಲಿ ತಹಸೀಲ್ದಾರ್‌ಗೆ ಕಿರುಕುಳ; ಡಾಬಾ ರಾಜಣ್ಣ ಪುತ್ರ ಪೊಲೀಸ್ ವಶಕ್ಕೆ

Nelamangala News

ನೆಲಮಂಗಲ: ಮದ್ಯದ ಅಮಲಿನಲ್ಲಿ ಉದ್ಯಮಿ ಢಾಬಾ ರಾಜಣ್ಣ ಪುತ್ರ ಕಿರಿಕ್ ಮಾಡಿದ್ದು, ಕುಣಿಗಲ್ ತಹಸೀಲ್ದಾರ್ ರಶ್ಮಿ ಕಾರಿಗೆ ಅಡ್ಡ ಬಂದು ಪುಂಡಾಟ ಮೆರೆದಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಂಟಗನಹಳ್ಳಿ ಲ್ಯಾಂಕೋ ಟೋಲ್ ಬಳಿ ಈ ಘಟನೆ (Nelamangala News) ನಡೆದಿದೆ.

ನೆಲಮಂಗಲದ ಉದ್ಯಮಿ ಡಾಬಾ ರಾಜಣ್ಣ ಪುತ್ರ ರವಿ ಗೌಡನಿಂದ ಈ ಒಂದು ಕೃತ್ಯ ನಡೆದಿದೆ. ರವಿಗೌಡನ ಪುಂಡಾಟ ನೋಡಿ ತಕ್ಷಣ 112ಕ್ಕೆ ಕರೆ ಮಾಡಿ ತಹಶೀಲ್ದಾರ್ ರಶ್ಮಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ರವಿ ಗೌಡನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಹಶೀಲ್ದಾರ್ ರಶ್ಮಿ ಕುಣಿಗಲ್ ನಿಂದ ಬೆಂಗಳೂರಿಗೆ ಬರುತ್ತಿದ್ದಾಗ ನೆಲಮಂಗಲದಲ್ಲಿ ರವಿಗೌಡ ಈ ಕೃತ್ಯ ಎಸಗಿದ್ದಾನೆ.

ಆರೋಪಿ ರವಿ ಗೌಡಗೆ ಸೇರಿದ ಕಾರನ್ನು ಇದೀಗ ನೆಲಮಂಗಲ ಗ್ರಾಮಾಂತರ ಠಾಣೆ ಪೋಲೀಸರು ಸೀಜ್ ಮಾಡಿದ್ದಾರೆ. KA 03 MW 1 ಡಿಫೆಕ್ಟಿವ್ ನಂಬರ್ ಪ್ಲೇಟ್ ಬಳಸುತ್ತಿದ್ದ. ತಮ್ಮ ಕಾರಿಗೆ ಟೆಂಟೆಡ್ ಗ್ಲಾಸ್ ಬಳಸಿ ಆರೋಪಿ ರವಿ ಗೌಡ ಅಡ್ಡಾಡುತ್ತಿದ್ದ.ಸರ್ಕಾರಿ ಕಾರಿಗೆ ಅಡ್ಡ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಮಧ್ಯ ಸೇವಿಸಿ ಕಾರು ಚಲಾವಣೆ ಸೇರಿದಂತೆ ಹಲವು ಪ್ರಕರಣ ದಾಖಲಾಗಿದೆ. ನೆಲಮಂಗಲದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರವಿಗೌಡನ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ | ಫಲಿಸಿತು ದೇಶದ ಪ್ರಾರ್ಥನೆ: 10 ದಿನಗಳ ಹಿಂದೆ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಕಂದಮ್ಮನ ರಕ್ಷಣೆ

ಕೇಂದ್ರ ಸಚಿವ ವಿ. ಸೋಮಣ್ಣ ಹೆಸರಿನಲ್ಲಿ ವಂಚನೆ; ಆರೋಪಿ ಬಂಧನ

Tumkur News

ತುಮಕೂರು: ರೈತರಿಗೆ ಪಂಪ್ ಸೆಟ್ ಹಾಗೂ ಬೋರ್‌ವೆಲ್ ಹಾಕಿಸಿಕೊಡುವ ನೆಪದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಅವರ ಹೆಸರಲ್ಲಿ ವಂಚನೆ ನಡೆಸಿರುವ ಆರೋಪಿಯನ್ನು ಹೊಸ ಬಡಾವಣೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ (Tumkur News) ಮಧುಗಿರಿ ತಾಲೂಕಿನ ಮಿಡಿಗೇಶಿ ಮೂಲದ ಗೋವರ್ಧನ್ ಬಂಧಿತ ಆರೋಪಿ.

ನಕಲಿ ಲೆಟರ್ ಹೆಡ್ ಸೃಷ್ಟಿಸಿ, ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೆಸರಲ್ಲಿ, ಸಹಿ ಹಾಕಿ ವಂಚಿಸಲು ಯತ್ನಿಸಿದ ಆರೋಪಿಯನ್ನು ಹೊಸ ಬಡಾವಣೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಧುಗಿರಿ ತಾಲೂಕಿನ ಮಿಡಿಗೇಶಿ ಮೂಲದ ಆರೋಪಿ ಗೋವರ್ಧನ್, ಫಲಾನುಭವಿಗಳ ಹೆಸರು ಹಾಕಿ, ಬೋರ್‌ವೆಲ್ ಕೊರೆಸುವ ಕುರಿತು ಹಾಗೂ ಪಂಪ್ ಸೆಟ್ ಮೋಟರ್ ನೀಡುವಂತೆ ನಕಲಿ ಆದೇಶ ಪ್ರತಿ ನೀಡಿದ್ದ. ಈ ಆದೇಶದ ಪ್ರತಿಗಳಲ್ಲಿ ಕೇಂದ್ರ ಸಚಿವ, ಸಂಸದ ಸೋಮಣ್ಣ ಅವರ ಸಹಿ ಮತ್ತು ಲೆಟರ್ ಹೆಡ್ ನಕಲು ಮಾಡಿ, ಹತ್ತಾರು ಮಂದಿಗೆ ಆರೋಪಿಯು ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ | Stabbing Case: ಹಾಸನದಲ್ಲಿ ಪ್ರಿಯಕರನಿಗೇ ಚಾಕು ಇರಿದ ಪ್ರಿಯತಮೆ; ನ್ಯೂ ಇಯರ್‌ ಪಾರ್ಟಿ ವೇಳೆ ಘಟನೆ

ನಕಲಿ ಆದೇಶ ಪ್ರತಿ ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದದ್ದು, ಸಚಿವ ವಿ. ಸೋಮಣ್ಣ ಅವರ ಕಚೇರಿ ಆಪ್ತ ಸಹಾಯಕ ಮಹೇಶ್ ದೂರಿನ ಮೇರೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿ ಗೋವರ್ಧನ್‌ನನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.