ಬೆಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆಯ (New Year Celebration) ಹಿನ್ನಲೆಯಲ್ಲಿ ಡಿಸೆಂಬರ್ 31ರಂದು ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರ (Bengaluru traffic) ನಿಷೇಧಿಸಲಾಗಿದೆ. ಜೊತೆಗೆ ಪಾರ್ಕಿಂಗ್ (Parking) ಮಾಡುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಈ ಕುರಿತಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಡಿಸೆಂಬರ್.31ರ ರಾತ್ರಿ 8 ರಿಂದ ಮಧ್ಯರಾತ್ರಿ 2ರವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಪಾರ್ಕಿಂಗ್ ನಿಷೇಧಿಸಲಾಗುತ್ತಿದೆ ಅಂತ ತಿಳಿಸಿದೆ.
ಎಂಜಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆಯ ಜಂಕ್ಷನ್ ವರೆಗೆ ವಾಹನ ಸಂಚಾರ, ಪಾರ್ಕಿಂಗ್ ನಿಷೇಧಿಸಲಾಗಿದೆ.
ಬ್ರಿಗೇಡ್ ರಸ್ತೆಯ ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಅಪೇರಾ ಜಂಕ್ಷನ್ ವರೆಗೆ ನಿರ್ಬಂಧಿಸಲಾಗಿದೆ.
ಚರ್ಚ್ ಸ್ಟ್ರೀಟ್ ನ ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ ಅಂದರೆ ಎಸ್ಐಬಿಐ ವೃತ್ತದವರೆಗೆ ನಿಷೇಧವಿದೆ.
ರೆಸ್ಟ್ ಹೌಸ್ ರಸ್ತೆಯ ಮ್ಯೂಸಿಯಂ ರಸ್ತೆ ಜಂಕ್ಷನ್ ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೂ ವಾಹನಗಳ ಸಂಚಾರ, ಪಾರ್ಕಿಂಕ್ ನಿಷೇಧಿಸಲಾಗಿದೆ.
ರೆಸಿಡೆನ್ಸಿ ಕ್ರಾಸ್ ರಸ್ತೆಯಿಂದ ರೆಸಿಡೆನ್ಸಿ ರಸ್ತೆ ಜಂಕ್ಷನ್ ನಿಂದ ಎಂಜಿ ರಸ್ತೆ ಜಂಕ್ಷನ್ ನ ಶಂಕರ್ ನಾಗ್ ಚಿತ್ರಮಂದಿರದವರೆಗೆ ಡಿ.31ರ ರಾತ್ರಿ 8ರಿಂದ ಮಧ್ಯರಾತ್ರಿ 2ರವರೆಗೆ ವಾಹನಗಳ ಸಂಚಾರ ಮತ್ತು ಪಾರ್ಕಿಂಗ್ ನಿಷೇಧಿಸಲಾಗಿದೆ.
ಎಲ್ಲಾ ಫ್ಲೈಓವರ್‌ಲ್ಲಿ ವಾಹನ ಸಂಚಾರ ನಿಷೇಧ
ಹೊಸ ವರ್ಷಾಚರಣೆಯ ಹಿನ್ನಲೆಯಲ್ಲಿ ಡಿಸೆಂಬರ್.31ರ ಇಂದು ರಾತ್ರಿ 11ರಿಂದ ಬೆಂಗಳೂರು ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಕುರಿತಂತೆ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂಎನ್ ಅನುಚೇತ್ ಅವರು ಹೊಸ ವರ್ಷಾಚರಣೆ ನಿಮಿತ್ತ ಬೆಂಗಳೂರು ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕರು ಒಟ್ಟಾಗಿ ಸೇರುವುದರಿಂದ ಅಪಘಾತಗಳು ಸೇರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಡಿಸೆಂಬರ್.31ರಂದು ರಾತ್ರಿ 11ರಿಂದ ಜನವರಿ 1ರ ಬೆಳಿಗ್ಗೆ 6ರವರೆಗೆ ಬೆಂಗಳೂರು ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: DK Shivakumar: ಹೊಸ ವರ್ಷಾಚರಣೆ; ಬೆಂಗಳೂರು ವ್ಯಾಪ್ತಿಯ ಅಧಿಕಾರಿಗಳಿಗೆ ರಜೆ ಮೇಲೆ ತೆರಳದಂತೆ ಸೂಚನೆ