ಬೆಂಗಳೂರು: ಬೆಂಗಳೂರು (Bengaluru News) ಹಾಗೂ ರಾಜ್ಯದ ವಿವಿಧ ನಗರಗಳಲ್ಲಿ ಹೊಸ ವರ್ಷದ (New Year Celebration) ಮೊದಲ ಕ್ಷಣಗಳನ್ನು ಯುವಜನತೆ ಸಂಭ್ರಮದಿಂದ ಸ್ವಾಗತಿಸಿದರು. ಜೋರಾಗಿ ಮ್ಯೂಸಿಕ್ ಹಾಕಿಕೊಂಡು, ಗೆಳೆಯ/ತಿಯರ ಜೊತೆ ಪಾರ್ಟಿ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬೆಂಗಳೂರಿನ ಬೀದಿಗಳಲ್ಲಿ ಈ ಬಾರಿಯೂ ಹೊಸ ವರ್ಷಚಾರಣೆಗೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಹಲವೆಡೆ ಜನ ಸೇರಿ ಸಂಭ್ರಮಿಸಿದರು. ಬ್ರಿಗೇಡ್ ರಸ್ತೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ ಕಾರಣ ನೂಕು ನುಗ್ಗಲು ಸಂಭವಿಸಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಹಾಸ ಪಟ್ಟರಲ್ಲದೆ, ನೂಕು ನುಗ್ಗಲು ಹಾಗೂ ಜನರ ನಿಯಂತ್ರಣಕ್ಕೆ ಲಘು ಲಾಠಿ ಪ್ರಹಾರ ನಡೆಸಿದರು.
ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಜನ ನೆರೆದರು. ಈ ವೇಳೆ ನೂಕು ನುಗ್ಗಲು ಸಂಭವಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಲಘು ಲಾಠಿ ಪ್ರಹಾರ ಮಾಡಿ ನಿಯಂತ್ರಿಸಿದರು. ಪೊಲೀಸರು ಸತತವಾಗಿ ಮೈಕ್ ಮೂಲಕ ಅನೌನ್ಸ್ ಮಾಡುತ್ತಾ, ಜನರಿಗೆ ಎಚ್ಚರ ನೀಡಿದರಲ್ಲದೆ, ಬ್ಯಾರಿಕೇಡ್ ಹಿಡಿದೇ ತಳ್ಳಾಡಿದ ಜನರನ್ನು ನಿಯಂತ್ರಿಸಲು ಎಮರ್ಜೆನ್ಸಿ ಸೈರನ್ ಬಳಸಿದರು.
ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ರಸ್ತೆ, ಕೋರಮಂಗಲಗಳಲ್ಲಿರುವ ಪಬ್‌ಗಳಲ್ಲಿ ಜನ, ಅದರಲ್ಲೂ ಯುವಜನತೆ ತುಂಬಿ ತುಳುಕಿದರು. ಪಬ್- ರೆಸ್ಟುರಾಗಳಲ್ಲಿ ಜನ ಪಾರ್ಟಿ ಮೂಡ್‌ನಲ್ಲಿದ್ದರಲ್ಲದೆ, ಮದ್ಯ ಪ್ರಿಯರು ಸ್ಟೆಪ್ ಹಾಕಿ ಹೊಸ ವರ್ಷಕ್ಕೆ ಸ್ವಾಗತ ಕೋರಿದರು. ಬ್ರಿಗೇಡ್ ರಸ್ತೆ ಸೇರಿದಂತೆ ಹಲವೆಡೆ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಟ್ಟರು. ಹೆಚ್ಚುವರಿ ಪೊಲೀಸ್ ನಿಯೋಜನೆ,ಸಿಸಿಟಿ ಅಳವಡಿಕೆ ಸೇರಿದಂತ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡರು. ಬ್ರಿಗೇಡ್ ರಸ್ತೆಗೆ ಆಗಮಿಸುವ ಪ್ರತಿಯೊಬ್ಬರನ್ನೂ ಪೊಲೀಸರು ತಪಾಸಣೆ ಮಾಡಿದರು. ರಸ್ತೆಯಲ್ಲಿ ಗುಂಪು ಸೇರಲು ಅವಕಾಶ ನಿರಾಕರಿಸಲಾಯಿತು. ನಗರದಲ್ಲಿ 11 ಸಾವಿರಕ್ಕೂ ಹೆಚ್ಚು ಪೋಲಿಸರನ್ನು ನಿಯೋಜಿಸಲಾಗಿತ್ತು.
ಈ ನಡುವೆ ಕೋರಮಂಗಲದಲ್ಲಿ ಹೊಸ ವರ್ಷದ ಪಾರ್ಟಿಯಲ್ಲಿ ಯುವಕನೊಬ್ಬ ಪಾನಮತ್ತನಾಗಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಲು ಯತ್ನಿಸಿದ್ದಾನೆ. ಈ ಹೊತ್ತಿನಲ್ಲಿ ಅಲ್ಲೇ ಇದ್ದ ಇತರರು ಆತನಿಗೆ ಗೂಸಾ ನೀಡಿ ಬುದ್ಧಿ ಹೇಳಿ ಕಳಿಸಿದ್ದಾರೆ.
ಯುವಕರು ಕುಡಿದು ಬೈಕ್ ವೀಲಿಂಗ್, ವೇಗದ ಚಾಲನೆ ಹಾಗೂ ಅಪಘಾತಗಳ ಅನಾಹುತಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ 11 ಗಂಟೆಯ ಬಳಿಕ ಬೆಂಗಳೂರು ನಗರದ ಬಹುತೇಕ ಎಲ್ಲಾ ಫ್ಲೈಓವರ್ ಗಳು ಬಂದ್ ಮಾಡಲಾಗಿತ್ತು. ಅದರಂತೆ ಸಂಗೊಳ್ಳಿ ರಾಯಣ್ಣ ಫ್ಲೈಓವರ್, ಶಿವನಗರ ಫ್ಲೈಓವರ್, ಯಶವಂತಪುರ ಫ್ಲೈಓವರ್, ಲೂಲು ಮಾಲ್ ಬಳಿಯ ಫ್ಲೈಓವರ್, ಮಾರ್ಕೆಟ್ ಫ್ಲೈಓವರ್ ಸೇರಿದಂತೆ ನಗರದ 40 ಫ್ಲೈಓವರ್ಗಳು ಬಂದ್ ಮಾಡಲಾಗಿತ್ತು.