Tuesday, 7th January 2025

New Year Celebration: ಹೊಸ ವರ್ಷ ಅಂತ ನಡುರಾತ್ರಿ ಶಿಳ್ಳೆ ಹೊಡೆದರೆ ಹುಷಾರ್!‌ ಮುಖ ಮುಚ್ಚೋ ಮಾಸ್ಕ್‌ ಕೂಡ ಬ್ಯಾನ್

new year celebration whistle

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ (New Year Celebration) ಭರ್ಜರಿ ಸಿದ್ಧತೆಗಳು ನಡೆದಿವೆ. ಬ್ರಿಗೇಡ್‌ ರಸ್ತೆ, ಕಮರ್ಷಿಯಲ್‌ ರಸ್ತೆಗಳು ಹೊಸ ವರ್ಷದ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ. ಈ ಬಾರಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಹೊಸ ಹೊಸ ರೂಲ್‌ಗಳೊಂದಿಗೆ ಬಂದಿದ್ದಾರೆ. ಅದರಲ್ಲಿ ಶಿಳ್ಳೆ (whistles) ಹೊಡೆಯುವಂತಿಲ್ಲ, ಪೂರ್ತಿ ಮುಖ ಮುಚ್ಚುವ ಮಾಸ್ಕ್‌ (Full Face Mask) ಧರಿಸುವಂತಿಲ್ಲ ಎಂಬ ನಿಯಮ ಕೂಡ ಸೇರಿದೆ.

ಸುಮಾರು 11,000 ಪೊಲೀಸರನ್ನು ನಗರದ ನಾನಾ ಕಡೆ ನಿಯೋಜಿಸಲಾಗಿದೆ. ಮುಖ್ಯವಾಗಿ ನಗರದ ಹೃದಯ ಭಾಗವಾದ ಎಂ.ಜಿ.ರಸ್ತೆ, ಚರ್ಚ್‌ಸ್ಟ್ರೀಟ್‌, ಬ್ರಿಗೇಡ್‌ ರೋಡ್‌ಗಳಲ್ಲಿ ಇಂದು ರಾತ್ರಿ ಹೊಸ ವರ್ಷಾಚರಣೆಗೆ ಲಕ್ಷಾಂತರ ಜನ ಸೇರುತ್ತಾರೆ. ಇಲ್ಲಿ ಹುಚ್ಚೆದ್ದ ಯುವಜನತೆಯನ್ನು ನಿಯಂತ್ರಿಸುವುದೇ ಕಷ್ಟವಾಗುವ ಕೆಲಸ. ಇದಕ್ಕಾಗಿ ಪೊಲೀಸರು ಹೆಚ್ಚು ಅಲರ್ಟ್‌ ಆಗಿದ್ದು, ಶಿಳ್ಳೆ ಹೊಡೆಯುವುದು ಹಾಗೂ ಪೂರ್ತಿ ಮುಖ ಮುಚ್ಚುವ ಮಾಸ್ಕ್‌ ಧರಿಸುವಿಕೆಯನ್ನು ನಿಷೇಧಿಸಿದ್ದಾರೆ.

ಹೊಸ ವರ್ಷದ ರಾತ್ರಿ ಕೆಲವು ಯುವಕರು ಖುಷಿಯಲ್ಲಿ ಅರಚಾಡುವುದು, ಶಿಳ್ಳೆ ಹೊಡೆಯುವುದು, ಕೆಲ ಪುಂಡರು ಯುವತಿಯರನ್ನು ಚುಡಾಯಿಸುವುದು ಮಾಡುತ್ತಾರೆ. ಕಡಲೆಕಾಯಿ ಪರಿಷೆಯಲ್ಲಿ ಭಾರಿ ಜನ ಸೇರಿದಾಗ ಇಂಥ ಘಟನೆಗಳು ನಡೆದಿದ್ದು, ಈ ಬಾರಿ ಇದಕ್ಕೆಲ್ಲ ಅವಕಾಶವಿಲ್ಲದಂತೆ ಮಾಡಲಾಗಿದೆ.

ಹೊಸ ವರ್ಷಾಚರಣೆಗೆಂದು ಹೊರಡುವ ಜನರು ಫುಲ್ ಮಾಸ್ಕ್ ಧರಿಸದಂತೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ ಸಲಹೆ ನೀಡಿದ್ದಾರೆ. ಫುಲ್ ಫೇಸ್ ಮಾಸ್ಕ್ ಧರಿಸಿದವರ ಗುರುತು ಪತ್ತೆ ಹಚ್ಚುವುದು ಅಡ್ಡಿಯಾಗಬಹುದಾದ್ದರಿಂದ, ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅವುಗಳನ್ನು ಬಳಸದಂತೆ ಪೊಲೀಸರು ಕೇಳಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಮಿಷನರ್, “ಮಕ್ಕಳು ಮತ್ತು ಇತರ ದುರ್ಬಲ ಜನರು ಭಯಪಡಬಹುದಾದ ಸಂಪೂರ್ಣ ಮುಖವಾಡಗಳನ್ನು ಈ ಸಮಯದಲ್ಲಿ ನಾವು ಶಿಫಾರಸು ಮಾಡುವುದಿಲ್ಲ. ಕೆಲವು ಕಿಡಿಗೇಡಿಗಳು ಅವುಗಳನ್ನು ಧರಿಸಿ ಸಾರ್ವಜನಿಕರನ್ನು ಹೆದರಿಸಿದ ನಿದರ್ಶನಗಳಿವೆ. ಬೀದಿಗಳಲ್ಲಿ ಯಾವುದಾದರೂ ರೀತಿಯ ದುಷ್ಕೃತ್ಯ ಮಾಡಿದ ನಂತರ ದುಷ್ಕರ್ಮಿಗಳು ತಮ್ಮ ಗುರುತನ್ನು ಮರೆಮಾಚಲು ಇದು ಸಹಾಯ ಮಾಡುತ್ತದೆ” ಎಂದಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಭೀಕರ ಶಬ್ಧದ ಸೀಟಿಗಳನ್ನು ಬಳಸಬಾರದು ಎಂದು ಆಯುಕ್ತರು ಹೇಳಿದ್ದಾರೆ. “ಕಡ್ಲೆಕಾಯಿ ಪರಿಷೆಯಂತಹ ಕಾರ್ಯಕ್ರಮಗಳ ಸಮಯದಲ್ಲಿ, ಬೀದಿಗಳಲ್ಲಿ ಗದ್ದಲವನ್ನು ಉಂಟುಮಾಡುವ ವ್ಯಕ್ತಿಗಳು ಕೆಲವು ಬಗೆಯ ಶೀಟಿಗಳನ್ನು ಬಳಸುತ್ತಿದ್ದರು. ಸಾರ್ವಜನಿಕರಿಗೆ ಅನನುಕೂಲತೆ ಉಂಟುಮಾಡುವ ಇಂತಹ ವಸ್ತುಗಳನ್ನು ಬಳಸದಂತೆ ನಾವು ಕಟ್ಟುನಿಟ್ಟಾಗಿ ಸಲಹೆ ನೀಡುತ್ತೇವೆ” ಎಂದು ಅವರು ಹೇಳಿದರು.

ಇದಲ್ಲದೇ ಕುಡಿದು ವಾಹನ ಚಲಾಯಿಸುವವರಿಗೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. “ನಗರದಾದ್ಯಂತ ಸಂಪೂರ್ಣ ಪೊಲೀಸ್ ತಪಾಸಣೆ ನಡೆಸಲಾಗುವುದು ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸುವಾಗ ಸಿಕ್ಕಿಬಿದ್ದ ಜನರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಬೆಂಗಳೂರಿನ ಪ್ರತಿಯೊಂದು ರಸ್ತೆಯ ಮೇಲೂ ಕಟ್ಟುನಿಟ್ಟಾಗಿ ನಿಗಾ ಇಡಲಾಗುತ್ತದೆ. ಸಾರ್ವಜನಿಕರ ಹಿತಕ್ಕೆ ವಿರುದ್ಧವಾಗಿ ಅನುಚಿತವಾಗಿ ವರ್ತಿಸುವುದು ಕಂಡುಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದಿದ್ದಾರೆ.

ಇಂದು ರಾತ್ರಿ ಬೆಂಗಳೂರಿನ ಬೀದಿಗಳಲ್ಲಿ 7ರಿಂದ 8 ಲಕ್ಷ ಜನ ಸೇರಬಹುದು ಎಂಬ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಜಿ ಪರಮೇಶ್ವರ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: New Year Celebration: ಹೊಸ ವರ್ಷಾಚರಣೆಗೆ ‌ಹೋಗುವವರಿಗೆ ನಂದಿಬೆಟ್ಟ ಬಂದ್!