ನವದೆಹಲಿ: ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಸೋಮವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಅತ್ಯಂತ ಗೌರವಪೂರ್ವಕವಾಗಿ ಅಮಿತ್ ಶಾ ಅವರನ್ನು ಸಂಸತ್ ಭವನದ ಅವರ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಭೇಟಿ ಮಾಡಲಾಯಿತು. ಚನ್ನಪಟ್ಟಣ (Channapatna) ಫಲಿತಾಂಶದ ಕುರಿತಾದ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಂಡೆ ಹಾಗೂ ಅವರು ಕೂಡ ನನಗೆ ಧೈರ್ಯ ತುಂಬಿ ಉತ್ತಮವಾಗಿ ಕೆಲಸ ಮಾಡುವಂತೆ ಹುರಿದುಂಬಿಸಿದರು ಎಂದರು.
ಅಲ್ಲದೆ, ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಲಾಯಿತು. ಮೈತ್ರಿಕೂಟಗಳ ಎರಡೂ ಪಕ್ಷಗಳು ಒಟ್ಟಾಗಿ ಹೋಗಬೇಕು. ತಳಮಟ್ಟದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸುವ ನಿಟ್ಟಿನಲ್ಲಿ ಅಮಿತ್ ಶಾ ಅವರು ನನಗೆ ಮಾರ್ಗದರ್ಶನ ಮಾಡಿದರು ಎಂದು ನಿಖಿಲ್ ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಭಾರತದ ವ್ಯವಸ್ಥೆಯನ್ನೇ ಅಪಮಾನಿಸುತ್ತಿದೆ ಕಾಂಗ್ರೆಸ್; ಪ್ರಲ್ಹಾದ್ ಜೋಶಿ ಆರೋಪ
ಇದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಎಲ್ಲಾ ನಾಯಕರು ಸಂಘಟನೆಗೆ ಹೆಚ್ಚು ಕೊಡಬೇಕು ಎಂದು ಸಲಹೆ ಮಾಡಿದರು ಎಂದು ಅವರು ತಿಳಿಸಿದರು.
ಕರ್ನಾಟಕ ಸರ್ಕಾರ ಜನಪರ ಆಡಳಿತ ನೀಡುತ್ತಿಲ್ಲ. ಜನರು ಸಾಕಷ್ಟು ತೊಂದರೆಯಲ್ಲಿ ಇದ್ದಾರೆ. ಹೀಗಾಗಿ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸುವಂತೆ ನಾಯಕರು ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಹೊಸ ಶಾಸಕನಿಗೆ ಶೋಭೆ ತರುವುದಿಲ್ಲ
ಅರವತ್ತು ವರ್ಷ ಜನಪರವಾಗಿ ಕೆಲಸ ಮಾಡಿರುವ ದೇವೇಗೌಡರ ಬಗ್ಗೆ ಇಂಥ ಟೀಕೆ ಮಾಡುವುದು ಸರಿಯಲ್ಲ. ಅವರು ಶಾಸಕ ಸ್ಥಾನಕ್ಕೆ ಶೋಭೆ ತರುವ ಮಾತು ಆಡಬೇಕು ಎಂದು ಶಾಸಕ ಸಿ.ಪಿ. ಯೋಗೇಶ್ವರ್‌ಗೆ ತಿರುಗೇಟು ನೀಡಿದರು.
ನಾನು ಸೋಲನ್ನು ತಲೆಬಾಗಿ ಸ್ವೀಕರಿಸಿದ್ದೇನೆ. ದೇವೇಗೌಡರು ನೆಲ, ಜಲದ ವಿಚಾರದಲ್ಲಿ ನಿರಂತರ ಹೋರಾಟ ನಡೆಸಿದ್ದಾರೆ. ಈಗಲೂ ಯುವ ಸಂಸದರು ನಾಚುವಂತೆ ಅವರು ಶಿಸ್ತುಬದ್ದವಾಗಿ ಕಲಾಪದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನರ ಸಲುವಾಗಿ ಅವರು ರಾಜಕೀಯದಲ್ಲಿ ಮುಂದುವರಿದ್ದಾರೆ, ಮುಂದೂ ಮುಂದುವರೆಯುತ್ತಾರೆ ಎಂದು ಹೇಳಿದರು.
ದೇವೇಗೌಡರಿಗೆ ಮೋದಿಯವರೇ ಸ್ವತಃ ಫೋನ್ ಮಾಡಿ ರಾಜಕೀಯ ತೊರೆಯದಂತೆ ಹೇಳಿದ್ದರು. ರಾಜ್ಯಸಭೆ ತೊರೆಯದಂತೆ ಪ್ರಧಾನಿ ಮೋದಿಯವರೇ ಹೇಳಿ, ದೇಶಕ್ಕೆ ನಿಮ್ಮ ಮಾರ್ಗದರ್ಶನ ಬೇಕು ಎಂದು ಕೋರಿದ್ದರು. ಅವರ ಮಾತನ್ನು ಮೀರಲಾಗದೇ ದೇವೇಗೌಡರು ರಾಜಕಾರಣದಲ್ಲಿ ಇದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಹಾಸನದ ಸಮಾವೇಶಕ್ಕೆ ಉತ್ತರಿಸುವ ಅಗತ್ಯವಿಲ್ಲ
ಹಾಸನದಲ್ಲಿ ಕಾಂಗ್ರೆಸ್ ನಾಯಕರು ಜನರ ತೆರಿಗೆ ಹಣದಲ್ಲಿ ಸಮಾವೇಶ ಮಾಡಿಕೊಂಡು ದೇವೆಗೌಡರ ಕುಟುಂಬವನ್ನು ನಿಂದಿಸಿದರು. ಅವರಿಗೆ ಸಮಾವೇಶ ಮಾಡಿ ಉತ್ತರ, ತಿರುಗೇಟು ಕೊಡಬೇಕು ಎಂದು ನಾನಾದರೂ ಭಾವಿಸುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.
ಮಂಡ್ಯದಲ್ಲಿ ಅದ್ದೂರಿಯಾಗಿ ಕುಮಾರಸ್ವಾಮಿ ಅವರ ಜನ್ಮದಿನ ಆಚರಿಸಬೇಕು ಎಂದು ನಮ್ಮ ನಾಯಕರು ನಿರ್ಧಾರ ಮಾಡಿದ್ದರು. ಆದರೆ, ಮಂಡ್ಯ ಸಾಹಿತ್ಯ ಸಮ್ಮೇಳನ, ವಿಧಾನಸಭೆ ಮತ್ತು ಸಂಸತ್ ಅಧಿವೇಶನ ನಡೆಯುತ್ತಿದೆ. ಹಾಗೆಯೇ ಕೇಂದ್ರ ಸಚಿವರಿಗೂ ಸಾಕಷ್ಟು ಪೂರ್ವ ನಿಗಧಿತ ಕಾರ್ಯಕ್ರಮಗಳು ಇವೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಬೇಡವೆಂದು ಸ್ವತಃ ಕುಮಾರಸ್ವಾಮಿ ಅವರೇ ಸೂಚಿಸಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ
ನಾನು ಪಕ್ಷದ ಶಿಸ್ತಿನ ಸಿಪಾಯಿ. ಜೆಡಿಎಸ್ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿಯೇ ಹೊರತು ನಿಖಿಲ್ ಕುಮಾರಸ್ವಾಮಿ ಅವರಿಂದ ಜೆಡಿಎಸ್ ಅಲ್ಲ. ನನ್ನ ಇತಿಮಿತಿಗಳ ಬಗ್ಗೆ ನನಗೆ ಅರಿವಿದೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ರಾಜಕೀಯ ಶಕ್ತಿ ತುಂಬುತೇನೆ. ಅವರ ಜತೆಯಲ್ಲಿ ನಿಂತು ಕೆಲಸ ಮಾಡುತ್ತೇನೆ. ನಮ್ಮ ಪಕ್ಷದಲ್ಲಿ ಸಾಕಷ್ಟು ಹಿರಿಯರಿದ್ದಾರೆ, ಹಿರಿಯ ನಾಯಕರ ಮಾರ್ಗದರ್ಶನದಿಂದ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದು ಅವರು ತಿಳಿಸಿದರು.
ಚುನಾವಣೆಯಲ್ಲಿ ನಮಗೆ ಫಲ ಸಿಕ್ಕಿದೆ
ಉಪ ಚುನಾವಣೆಯಲ್ಲಿ ಇಂಥ ಫಲಿತಾಂಶವನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಸೋಲಿಗೆ ಸಾಕಷ್ಟು ಕಾರಣಗಳಿವೆ. ಚುನಾವಣೆ ಹಿಂದಿನ 48 ಗಂಟೆಗಳಲ್ಲಿ ಮಹಿಳೆಯರ ಖಾತೆಗೆ ಎರಡು ತಿಂಗಳ ಗೃಹಲಕ್ಷಿ ಹಣ ಒಟ್ಟಿಗೆ ಜಮೆ ಮಾಡಿದ್ದಾರೆ. ಅದನ್ನು ಪ್ರಶ್ನೆ ಮಾಡಬೇಕಿದೆ. ಸರ್ಕಾರ ಆಡಳಿತವನ್ನು ಎಷ್ಟರಮಟ್ಟಿಗೆ ದುರ್ಬಳಕೆ ಮಾಡಿಕೊಂಡಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೆ ಎಂದು ಆರೋಪಿಸಿದ ಅವರು, ಈಗ ಸೋಲಿಗೆ ಕಾರಣ ಹುಡುಕುವುದಿಲ್ಲ. ರಾಜಕೀಯ ಜೀವನದಲ್ಲಿ ಅನಿರೀಕ್ಷಿತ ನಿರ್ಧಾರ ಮಾಡಿದೆ. ಎರಡು ಪಕ್ಷಗಳ ಕಾರ್ಯಕರ್ತರಿಗಾಗಿ ಸ್ಪರ್ಧೆ ಅನಿರ್ವಾಯವಾಗಿತ್ತು. ಚುನಾವಣೆಯ ಕೊನೆಯ ಹಂತದಲ್ಲಿ ಮೈತ್ರಿಗೆ ಕಪ್ಪುಚುಕ್ಕೆ ಬರದಂತೆ ಕುಮಾರಸ್ವಾಮಿ ಅವರು ನಿರ್ಧಾರ ಮಾಡಿದರು. ಮೈತ್ರಿಕೂಟದ ಎಲ್ಲಾ ನಾಯಕರ ಅಣತಿಯಂತೆ ಕೊನೆ ಕ್ಷಣದಲ್ಲಿ ನಾನು ಸ್ಪರ್ಧೆ ಮಾಡಬೇಕಾಯಿತು. ಕೇವಲ 15 ದಿನಗಳು ಮಾತ್ರ ಚುನಾವಣೆ ನಡೆಸಲು ನಮ್ಮ ಬಳಿ ಸಮಯವಿತ್ತು. ಅವರಿಗೆ ಸಾಕಷ್ಟು ಸಮಯ ಸಿಕ್ಕಿತ್ತು, ನಮ್ಮ ಕಡೆ ಅಭ್ಯರ್ಥಿ ಆಯ್ಕೆಯಲ್ಲಿ ವಿಳಂಬವಾಯಿತು. ನಮಗೆ ಜಯ ಸಿಕ್ಕದೆ ಹೋದರೂ ಫಲ ಸಿಕ್ಕಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸುದ್ದಿಯನ್ನೂ ಓದಿ | Asteria Aerospace: ಆಸ್ಟರಿಯಾ ಏರೋಸ್ಪೇಸ್‌ನಿಂದ ಎಟಿ- 15 VTOL ಡ್ರೋನ್ ಪೂರೈಕೆ; ಭಾರತೀಯ ಸೇನೆ ಕಣ್ಗಾವಲಿಗೆ ಬಲ
ಒಂದು ಸಮುದಾಯಕ್ಕೆ ದೇವೇಗೌಡರು ಅನೇಕ ಕೊಡುಗೆಗಳನ್ನು ನೀಡಿದ್ದರು. ಅವರು ನಮ್ಮ ಕೈ ಹಿಡಿಯಲಿಲ್ಲ. ನಾಗಮಂಗಲದಲ್ಲಿ ಕೋಮು ಸಂಘರ್ಷ ಉಂಟಾಗಿತ್ತು. ಸಂಘರ್ಷದಲ್ಲಿ ಹಾನಿ ಉಂಟಾದ ಅಂಗಡಿ ಜನರಿಗೆ ಕುಮಾರಸ್ವಾಮಿ ಅವರು ಪರಿಹಾರ ನೀಡಿದ್ದಾರೆ. ಮುಸ್ಲಿಂ ಸಮುದಾಯಕ್ಕೂ ಪರಿಹಾರ ನೀಡಿದ್ದಾರೆ. ಚನ್ನಪಟ್ಟಣದ ಇತಿಹಾಸದಲ್ಲಿಯೇ ₹1200 ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೂ ಸೋತಿದ್ದೇವೆ, ಇದೊಂದು ನಮಗೆ ಪಾಠ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.