Thursday, 31st October 2024

ವಿಧಾನಸೌಧದಲ್ಲಿ ಮಾಸ್ಕ್ ಮಾಯ

ಬುದ್ಧಿ ಹೇಳಬೇಕಾದ ಶಾಸಕರೇ ಮಾಸ್ಕ್ ಧರಿಸುತ್ತಿಲ್ಲ

ಕುತ್ತಿಗೆಗೆ ನೇತುಹಾಕಿಕೊಳ್ಳುವ ಜನಪ್ರತಿನಿಧಿಗಳು

ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ

ಬೆಂಗಳೂರು: ಕರೋನಾಗೆ ಲಸಿಕೆ ದೊರೆಯುತ್ತಿದ್ದಂತೆ ಕರೋನಾದ ಮೇಲಿದ್ದ ಆತಂಕವೆಲ್ಲ ಜನಪ್ರತಿನಿಧಿಗಳಿಗೆ ಮಾಯವಾಗಿದೆಯೇ ಎನ್ನುವ ಅನುಮಾನ ಶುರುವಾಗಿದೆ.

ಹೌದು, ಅಧಿವೇಶನದ ಉಭಯ ಸದನಗಳಲ್ಲಿ ಬಹುತೇಕ ಜನಪ್ರತಿನಿಧಿಗಳು ಮಾಸ್‌ಕ್‌ ಹಾಕಿಕೊಳ್ಳುವುದನ್ನೇ ಮರೆತಿದ್ದಾರೆ. ಅಧಿವೇಶನದಲ್ಲಿ ಭಾಗವಹಿಸುವ ಬಹುತೇಕರು ಮಾಸ್ಕ್‌ ಕೈಯಲ್ಲಿ ಹಿಡಿದುಕೊಂಡಿರುತ್ತಾರೆ ಅಥವಾ ಗಲ್ಲಕ್ಕೆ ನೇತು ಹಾಕಿಕೊಂಡು ಓಡಾಡುತ್ತಿರುತ್ತಾರೆ.

ಕಳೆದೊಂದು ವಾರದಿಂದ ನಡೆಯುತ್ತಿರುವ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ದಿನ ದಿಂದಲೂ, ಬಹುತೇಕ ಶಾಸಕರು ಮಾಸ್ಕ್ ಬಳಸುತ್ತಿಲ್ಲ. ಇದಲ್ಲದೆ, ಪ್ರತಿ ಬಾರಿ ಸದನ ಪ್ರವೇಶಿಸಿದಾಗ ಹಾಗೂ ಹೊರಡುವಾಗ ಸ್ಯಾನಿಟೈಸರ್ ಹಾಕಿಕೊಳ್ಳಬೇಕು ಎಂದು ಬಾಗಿಲುಗಳ ಬಳಿ ಸ್ಯಾನಿಟೈಸರ್ ಯಂತ್ರಗಳನ್ನು ಇಡಲಾಗಿದೆ. ಆದರೆ ಬಹುತೇಕರು ಈ ಯಂತ್ರವನ್ನು ಬಳಸುತ್ತಿಲ್ಲ.

ಮಾಸ್ಕ್‌ ಕಣ್ಮರೆ: ಕರೋನಾ ಬಳಿಕ ನಡೆದ ಮೊದಲ ಅಧಿವೇಶನದಲ್ಲಿ ಮಾಸ್ಕ್‌ ಇಲ್ಲದೇ ಶಾಸಕರು ನಿಂತರೆ, ಇತರ ಶಾಸಕರು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿ ದ್ದರು.

ಆದರೆ ಇದರ ತೀವ್ರತೆ ಎರಡನೇ ಬಾರಿ ನಡೆದ ಅಧಿವೇಶನದಲ್ಲಿ ಕೊಂಚ ತಗ್ಗಿತ್ತು. ಇದೀಗ ಮಾಸ್ಕ್ ಹಾಕದೇ ಕೇವಲ ಶಾಸಕರು ಮಾತ್ರವಲ್ಲದೇ, ಸಚಿವರು ಹಾಗೂ ಸ್ಪೀಕರ್ ಸಹ ಇರುತ್ತಾರೆ. ಮಾಸ್ಕ್‌ ಹಾಕುವಂತೆ ಜಾಗೃತಿ ಮೂಡಿಸಬೇಕಿರುವ ಜನಪ್ರತಿನಿಧಿಗಳೇ ಮಾಸ್ಕ್‌ ಧರಿಸದಿದ್ದರೆ, ಅವರನ್ನು ಅನುಸರಿಸುವ ಸಾರ್ವಜನಿಕರು ಪಾಲಿಸುತ್ತಾರೆಯೇ ಎನ್ನುವ ಮಾತುಗಳು ಕೇಳಿಬಂದಿವೆ.

ನೆಪ ಮಾತ್ರಕ್ಕೆ ಮಾಸ್ಕ್ ಬಳಕೆ
ಉಭಯ ಸದನದಲ್ಲಿರುವ ಶಾಸಕರು, ಸಚಿವರು ಮಾಸ್ಕ್ ಅನ್ನು ನೆಪ ಮಾತ್ರಕ್ಕೆ ಹಾಕಿಕೊಂಡಿರುತ್ತಾರೆ. ಕೆಲವರು ಮಾಸ್ಕ್‌ ಅನ್ನು ಕೈಯಲ್ಲಿ ಹಿಡಿದು ಕೊಂಡು ತಿರುಗಾಡುತ್ತಿದ್ದಂತೆ, ಬಹುತೇಕರು ತಮ್ಮ ಗಲ್ಲಕ್ಕೆ ಹಾಕಿಕೊಂಡು ಓಡಾಡಿಕೊಂಡಿರುತ್ತಾರೆ. ಇನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಉಭಯ ಸದನದಲ್ಲಿ ಗಾಜನ್ನು ಅಡ್ಡ ಇಡಲಾಗಿದೆ. ಆದರೆ ಶಾಸಕರು, ಸಚಿವರು, ಆ ಗಾಜಿನ ಗೋಡೆಯನ್ನು ತಪ್ಪಿಸಿ ಒಬ್ಬರಿಗೊಬ್ಬರು ಮಾತನಾಡಿ ಕೊಂಡು ಕೂರುವುದು ಸಾಮಾನ್ಯವಾಗಿದೆ

ಸಾರ್ವಜನಿಕರ ಆಕ್ಷೇಪ
ಹೆಚ್ಚು ಜನ ಸೇರುವ ಅಥವಾ ಕಾರಿನಲ್ಲಿ ಒಂದೇ ಕುಟುಂಬದವರು ಹೋಗುವಾಗ ಕಾರನ್ನು ನಿಲ್ಲಿಸಿ, ಮಾಸ್ಕ್ ಹಾಕಿರುವ ಬಗ್ಗೆ ಪರಿಶೀಲಿಸಿ
ಹಾಕಿರದಿದ್ದರೆ ದಂಡ ಹಾಕುತ್ತಿದ್ದಾರೆ. ಒಂದೇ ಕುಟುಂಬದವರಿದ್ದರೂ ದಂಡ ವಿಧಿಸುವ ಸರಕಾರ, ದಿನಕ್ಕೆ ಸಾವಿರಾರು ಜನರನ್ನು ಭೇಟಿಯಾಗುವ ಶಾಸಕರಿಗೆ ಏಕೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.