ಬೆಂಗಳೂರು: ಮತ ಬ್ಯಾಂಕ್ಗಾಗಿ ಹಾಗೂ ಹಗರಣಗಳನ್ನು ಮರೆಮಾಚಲು ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ (Congress Government) ಮುಂದಾಗಿದೆ. ಕುರ್ಚಿ ಅಲುಗಾಡುತ್ತಿರುವ ಸಮಯದಲ್ಲಿ ಮುಸ್ಲಿಮರು ನನ್ನ ಪರವಾಗಿದ್ದಾರೆ ಎಂದು ತೋರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೀಗೆ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ ಭಾಗವಹಿಸಿದರು. ನಂತರ ಬಿಜೆಪಿ ಶಾಸಕರು, ಮುಖಂಡರೊಂದಿಗೆ ರಾಜಭವನಕ್ಕೆ ತೆರಳಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ದೂರು ಪತ್ರ ಸಲ್ಲಿಸಿದರು.
ಈ ಸುದ್ದಿಯನ್ನೂ ಓದಿ | Renewable Energy: ದೇಶದ ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿ ಚಟುವಟಿಕೆ, ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿಹಾಕಿದೆ. ರೈತ ಹೋರಾಟ, ಕನ್ನಡ ಹೋರಾಟಗಳಿಗೆ ಇದನ್ನು ಹೋಲಿಸಬಾರದು. ಕಾಂಗ್ರೆಸ್ಗೆ ಮುಸ್ಲಿಮರ ಓಟು ಬೇಕೆಂದು ಹೀಗೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯನವರ ಕುರ್ಚಿ ಅಲುಗಾಡುತ್ತಿದ್ದು, ಮುಸ್ಲಿಮರು ನನ್ನ ಪರವಾಗಿದ್ದಾರೆ ಎಂದು ತೋರಿಸಲು ಹೀಗೆ ಮಾಡಿದ್ದಾರೆ. ರೈತರ ವಿರುದ್ಧದ ಪ್ರಕರಣ ವಾಪಸ್ ಪಡೆಯಲು ಸಿ.ಟಿ.ರವಿ ಮನವಿ ಮಾಡಿದ್ದರೂ ಅದಕ್ಕೆ ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದರು.
ಆರೋಪ ಮಾಡುವುದಾದರೆ ಶ್ವೇತಪತ್ರ ಬಿಡುಗಡೆಗೊಳಿಸಿ
ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಮಾಡಿದಾಗಲೂ ಇದೇ ರೀತಿ ಮಾಡಿದ್ದಾರೆ. ಇವರ್ಯಾರೂ ಸ್ವಾತಂತ್ರ್ಯ ಹೋರಾಟಗಾರರಲ್ಲ. ಮುಡಾ, ವಾಲ್ಮೀಕಿ ನಿಗಮದ ಹಗರಣದಿಂದ ತಪ್ಪಿಸಿಕೊಳ್ಳಲು ಈ ತಂತ್ರ ಮಾಡಿರಬಹುದು. ಆದರೆ ಬಿಜೆಪಿಯಿಂದ ಈ ಎರಡೂ ಹಗರಣಗಳ ವಿರುದ್ಧ ಹೋರಾಟ ಮುಂದುವರಿಯಲಿದೆ. ಇದರ ಜತೆಗೆ ಕೇಂದ್ರ ಸರ್ಕಾರ ಅನುದಾನ ತಾರತಮ್ಯ ಮಾಡಿದೆ ಎಂಬ ಸುಳ್ಳು ಹಬ್ಬಿಸುತ್ತಿದ್ದಾರೆ. ಮೆಟ್ರೊ, ಜಲಜೀವನ್ ಮಿಷನ್, ಉಪನಗರ ರೈಲು ಮೊದಲಾದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಅನುದಾನ ನೀಡಿದ್ದಾರೆ. ಅಷ್ಟು ಆರೋಪ ಮಾಡುವುದಾದರೆ ಶ್ವೇತಪತ್ರ ಬಿಡುಗಡೆಗೊಳಿಸಿ ಎಷ್ಟು ಅನುದಾನ ನೀಡಲಾಗಿದೆ ಎಂದು ತಿಳಿಸಲಿ ಎಂದು ಸವಾಲೆಸೆದರು.
224 ಶಾಸಕರಿಗೆ ಎಷ್ಟು ಅನುದಾನ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಪಟ್ಟಿ ನೀಡಲಿ. ಪ್ರತಿ ಜಿಲ್ಲೆಗೆ ತೆರಿಗೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಿ. ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಹೆಚ್ಚಿದ್ದು, ವಾಹನಗಳ ಸರಾಸರಿ ವೇಗ 17 ಕಿ.ಮೀ. ನಿಂದ 12 ಕಿ.ಮೀ. ಗೆ ಇಳಿದಿದೆ. ರಾಜ್ಯದ ಜನರಿಗೆ ಕಾಂಗ್ರೆಸ್ ಎಷ್ಟು ತಾರತಮ್ಯ ಮಾಡಿದೆ ಎಂದು ತಿಳಿಸಲಿ ಎಂದರು.
ಈ ಸುದ್ದಿಯನ್ನೂ ಓದಿ | Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್ ಇರಲ್ಲ
ಯಾರು ಯಾವಾಗ ಜೈಲಿಗೆ ಹೋಗುತ್ತಾರೆ, ಯಾವಾಗ ಮರಳಿ ಚುನಾವಣೆ ಬರಲಿದೆ ಎಂದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಅದಕ್ಕಾಗಿ ಮತ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ. ಈ ಸರ್ಕಾರ ಉಳಿಯುವುದಿಲ್ಲ ಎಂದು ಅವರಿಗೂ ಗೊತ್ತಿದೆ. ಅವರ ಶಾಸಕರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಮಾನ ಮರ್ಯಾದೆ ಇದ್ದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಮುಸ್ಲಿಮರ ಋಣ ತೀರಿಸುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ. ಒಂದು ಕಡೆ ಸಿದ್ದರಾಮಯ್ಯ ಸೈಟು ವಾಪಸ್ ಕೊಟ್ಟರೆ, ಮತ್ತೊಂದೆಡೆ ಮಲ್ಲಿಕಾರ್ಜುನ ಖರ್ಗೆ ಸೈಟು ವಾಪಸ್ ನೀಡಿದ್ದಾರೆ. ಇನ್ನೊಂದೆಡೆ ಸರ್ಕಾರ ಪ್ರಕರಣ ವಾಪಸ್ ಪಡೆದಿದೆ. ಹಿಂದೂಗಳನ್ನು ಟಾರ್ಗೆಟ್ ಮಾಡುವ ಜತೆಗೆ ಕ್ರಿಮಿನಲ್ಗಳ ಪ್ರಕರಣ ವಾಪಸ್ ಪಡೆದಿದ್ದಾರೆ. ಕನ್ನಡ ಹೋರಾಟಗಾರ ನಾರಾಯಣಗೌಡರನ್ನು ಜೈಲಿಗೆ ಹಾಕಿದ್ದರು. ಆದರೆ ಭಯೋತ್ಪಾದಕರಿಗೆ ಮಾತ್ರ ಪರೋಕ್ಷವಾಗಿ ಬೆಂಬಲ ನೀಡಲಾಗುತ್ತಿದೆ. ಡಿಜೆ ಹಳ್ಳಿ ಗಲಭೆಯಲ್ಲಿ ಭಾಗಿಯಾದವರು ಕಾಂಗ್ರೆಸ್ನ ಪದಾಧಿಕಾರಿಗಳಾಗಿದ್ದಾರೆ. ರಾಮೇಶ್ವರಂ ಕೆಫೆಯ ಬಾಂಬ್ ಸ್ಪೋಟ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ಮಾಡಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರದಿಂದ ಟಿಪ್ಪು ಆಡಳಿತ
ಈ ಸರ್ಕಾರ ಟಿಪ್ಪು ಆಡಳಿತ ನೀಡುತ್ತಿದೆ. ಸಿದ್ದರಾಮಯ್ಯನವರು ಟಿಪ್ಪುವನ್ನೇ ಮನೆ ದೇವರಾಗಿ ಮಾಡಿಕೊಂಡಿದ್ದಾರೆ. ಎಂದಿಗೂ ಕುಂಕುಮ ಇಡದ ಸಿದ್ದರಾಮಯ್ಯ ಈಗ ದೇವಸ್ಥಾನಕ್ಕೆ ಹೋಗಿ ಬೊಟ್ಟು ಇಡುತ್ತಿದ್ದಾರೆ. ಕುರ್ಚಿಯಿಂದ ಕೆಳಕ್ಕಿಳಿಯುವುದು ಖಾತರಿಯಾಗಿರುವುದರಿಂದ ದೇವರ ಮೊರೆ ಹೋಗಿದ್ದಾರೆ ಎಂದರು.
ಹಿಂದೂಗಳು ಈಗ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದರೆ ಮುಸಲ್ಮಾನರೇ ಕಾಂಗ್ರೆಸ್ಗೆ ಬಿಗ್ಬಾಸ್ ಆಗಿ, ಅವರು ಹೇಳಿದಂತೆಯೇ ಸರ್ಕಾರ ನಡೆದುಕೊಳ್ಳಲಿದೆ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | Special Trains: ದೀಪಾವಳಿಗಾಗಿ ಬೆಂಗಳೂರಿನಿಂದ ಈ ಊರುಗಳಿಗೆ ವಿಶೇಷ ರೈಲುಗಳು
ರಾಜ್ಯಪಾಲರಿಗೆ ಮನವಿ
ಪ್ರಕರಣ ಹಿಂಪಡೆದ ಕುರಿತು ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಪತ್ರ ಸಲ್ಲಿಸಲಾಗಿದೆ. ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ಬಗ್ಗೆ ಸರ್ಕಾರದ ಬಳಿ ಸ್ಪಷ್ಟನೆ ಕೇಳಲಾಗುವುದು ಎಂದು ರಾಜ್ಯಪಾಲರು ತಿಳಿಸಿದ್ದಾರೆ. ಸರ್ಕಾರದ ಈ ಕ್ರಮದ ವಿರುದ್ಧ ಹುಬ್ಬಳ್ಳಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡಲಾಗುವುದು ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದರು.