ವಿಶ್ವವಾಣಿ ಸಂದರ್ಶನ: ರಂಗನಾಥ ಕೆ ಮರಡಿ, ತುಮಕೂರು ಜಿಲ್ಲಾ ವರದಿಗಾರರು
ಪಂಚಮಸಾಲಿ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯತ್ರೆ ಬೆಂಗಳೂರಿ ನತ್ತ ಸಾಗುತ್ತಿದೆ. ಈ ಕುರಿತು ಹಲವು ವಿಚಾರಗಳನ್ನು ಪಂಚಮಸಾಲಿ ಜಗದ್ಗುರು ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಯವರು ವಿಶ್ವವಾಣಿಯ ತುಮಕೂರು ಜಿಲ್ಲಾ ವರದಿಗಾರ ರಂಗನಾಥ ಕೆ.ಮರಡಿ ಅವರೊಂದಿಗೆ ತಮ್ಮ ಹೋರಾಟದ ವಿಚಾರಗಳನ್ನು ಹಂಚಿಕೊಂಡಿದ್ದು, ಅದರ ಪೂರ್ಣಪಾಠ ಇಲ್ಲಿದೆ…
ನಿಮ್ಮ ಹೋರಾಟದ ಸ್ವರೂಪ ಹೇಗಿದೆ?
ಪಂಚಮಸಾಲಿ ಸಮುದಾಯ ಎಲ್ಲ ರೀತಿಯಿಂದಲೂ ಹಿಂದುಳಿದಿದೆ. 2ಎ ವರ್ಗಕ್ಕೆ ಸೇರಿಸು ವಂತೆ ಆಗ್ರಹಿಸಿ ಕೂಡಲಸಂಗಮ ದಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ರಾಜಧಾನಿ ಸಮೀಪದಲ್ಲಿದೆ. ವಿಧಾನಸೌಧ ಮುತ್ತಿಗೆ ಹಾಕುವ ಯೋಚನೆಯನ್ನು ಕೈಬಿಟ್ಟಿದ್ದೇವೆ. ಆದರೆ ಹೋರಾಟವನ್ನು ನಿಲ್ಲಿಸಿಲ್ಲ. ಫೆ.21ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದು, ಸುಮಾರು 10 ಲಕ್ಷ ಮಂದಿ ಸೇರುವ ವಿಶ್ವಾಸವಿದೆ.
ಸಮುದಾಯದ ಮುಖಂಡರ ಸ್ಪಂದನೆ ಹೇಗಿದೆ?
ಹೋರಾಟದಲ್ಲಿ ಸಮುದಾಯದ ಹರಿಹರ ಪೀಠ ಮತ್ತು ಕೂಡಲಸಂಗಮ ಪೀಠಗಳು ಒಗ್ಗೂಡಿವೆ. ಇದರಿಂದ ಸರಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನೆಯಾದಂತಾಗಿದೆ. ಮೊದಲ ಬಾರಿಗೆ ಸಮುದಾಯದ 17 ಶಾಸಕರು, ಇಬ್ಬರು ಸಂಸದರು, ಇಬ್ಬರು ಸಚಿವರು ಒಂದಾಗಿದ್ದು, 2ಎಗೆ ಸೇರಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ.
*ಸರಕಾರದ ಸ್ಪಂದನೆ ಬಗ್ಗೆೆ ಏನು ಹೇಳುವಿರಿ?
ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸವುದು ಮುಖ್ಯಮಂತ್ರಿಯವರ ಪರಮಾಧಿಕಾರ. ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿಸುವುದು ಕೇಂದ್ರ ಸರಕಾರದ ಅಧಿಕಾರವಾಗಿದೆ. ಸಿಎಂ ಅವರು ಮನಸ್ಸು ಮಾಡಿದರೆ ಕೇವಲ 24 ಗಂಟೆಯೊಳಗಾಗಿ ಕ್ರಮ ಕೈಗೊಳ್ಳಬಹುದು. ಆದರೆ ಸರಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ.
ಯಾವಾಗಿನಿಂದ ಹೋರಾಟ ಆರಂಭವಾಗಿದೆ?
ಪಂಚಮಸಾಲಿಯವರ ಹೋರಾಟ ಸುಮಾರು 26 ವರ್ಷಗಳ ಹಿಂದೆಯೇ ಆರಂಭವಾಗಿದೆ. 3ಬಿಯಿಂದ ಸಮುದಾಯವನ್ನು ತೆಗೆದು 2ಎಗೆ ಸೇರಿಸುವುದು ನಮ್ಮ ಬೇಡಿಕೆಯಾಗಿದೆ. ನಾವು ರಾಜಕೀಯಕ್ಕಾಗಿ ಹೋರಾಟ ಮಾಡುತ್ತಿಲ್ಲ. ಇಡೀ ಸಮುದಾಯದ
ಶ್ರೇಯೋಭಿವೃದ್ಧಿಗಾಗಿ ಹೋರಾಟ ಮಾಡುತ್ತಿದ್ದೇವೆ. ಪಾದಯಾತ್ರೆ ಐತಿಹಾಸಿಕವಾಗಿದ್ದು, ಉತ್ತಮ ಫಲಿತಾಂಶ ಬರುವ ವಿಶ್ವಾಸ ವಿದೆ.
ಕಾನೂನು ತೊಡಕಿದ್ದರೆ ಸರಕಾರದ ಕ್ರಮವೇನು?
ಪಂಚಮಸಾಲಿ ಸಮುದಾಯವನ್ನು 2ಎ ವರ್ಗಕ್ಕೆ ಸೇರ್ಪಡೆ ಮಾಡಲು ಸರಕಾರ ನಿರ್ಲಕ್ಷ್ಯ ತೋರುತ್ತಿದೆ. 2009ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ವೇಳೆ ಸಚಿವರಾಗಿದ್ದ ಉದಾಸಿ ಫಾರಸು ಮಾಡಿರುವ ವರದಿಯನ್ನು ಜಾರಿಗೆ ತರಲಿ. 2009ರಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆದ ಸಂದರ್ಭದಲ್ಲಿ ಮೀಸಲು ನೀಡುವಂತೆ ಪಂಚಮಸಾಲಿ ಸಮುದಾಯದವರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ್ದರು, ಆಗ ಸಚಿವರಾಗಿದ್ದ ಉದಾಸಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದ ಸರಕಾರ ವರದಿ ತಯಾರಿಸಿತ್ತು. ಆ ವರದಿ ಅನ್ವಯ 2ಎ ವರ್ಗಕ್ಕೆ ಸೇರಿಸಲಿ.
ಬೆಂಗಳೂರಿನ ಸಮಾವೇಶದ ನಂತರದ ತೀರ್ಮಾನವೇನು?
ಫೆ.21ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದು, ಸರಕಾರ ವಿಳಂಬ ನೀತಿ ಅನುಸರಿಸಿದರೆ ಸತ್ಯಾಗ್ರಹ, ಅಮರ ಣಾಂತ ಉಪವಾಸ ಕೈಗೊಳ್ಳಲಾಗುವುದು. ಯಾವುದೇ ಕಾರಣದಿಂದಲೂ ಹೋರಾಟವನ್ನು ಸ್ಥಗಿತಗೊಳಿಸುವ ನಿರ್ಧಾರವಿಲ್ಲ. ಎಲ್ಲರೂ ಒಗ್ಗೂಡಿದ್ದೇವೆ, ಫಲಿತಾಂಶ ಪಡೆಯುವುದೊಂದೇ ಗುರಿ.
2ಎಗೆ ಸೇರಿದರೆ ಆಗುವ ಅನುಕೂಲಗಳೇನು?
ಪಂಚಮಸಾಲಿ ಸಮುದಾಯದಲ್ಲಿ ಬಡವರು ಹೆಚ್ಚಾಗಿದ್ದು, ಎಲ್ಲ ರೀತಿಯಿಂದಲೂ ಹಿಂದುಳಿದಿದ್ದಾರೆ. ಶೈಕ್ಷಣಿಕವಾಗಿ,
ಉದ್ಯೋಗಕ್ಕಾಗಿ, ರಾಜಕೀಯವಾಗಿ ಇನ್ನಿತರ ರೀತಿ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಈಗಿರುವ ಪರಿಸ್ಥಿತಿ ಯಲ್ಲಿ ಮಕ್ಕಳು ಶೇ.98ರಷ್ಟು ಅಂಕಗಳನ್ನು ಪಡೆದರೂ ಅವಕಾಶಗಳಿಲ್ಲದೆ ಕೂರುವಂತಹ ದುಸ್ಥಿತಿ ನಿರ್ಮಾಣವಾಗಿದೆ.