Monday, 23rd December 2024

Panchamasali Protest: ಪಂಚಮಸಾಲಿ ಲಾಠಿಚಾರ್ಜ್‌ ಖಂಡಿಸಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆ

Panchamasali quota protest

ಬೆಳಗಾವಿ: ಬೆಳಗಾವಿ (Belagavi news) ಸುವರ್ಣಸೌಧದ (Suvarna Soudha) ಮುಂದೆ ಲಿಂಗಾಯತ (Lingayat) ಪಂಚಮಸಾಲಿ ಮೀಸಲಾತಿ ಹೋರಾಟಗಾರರ (Panchamasali Protest) ಮೇಲೆ ಲಾಠಿಚಾರ್ಜ್‌ ಮಾಡಿದ್ದನ್ನು ಖಂಡಿಸಿ ಡಿಸೆಂಬರ್ 12ರಂದು ರಾಜ್ಯಾದ್ಯಂತ ಪ್ರತಿಭಟನೆ ಘೋಷಣೆ ಮಾಡಲಾಗಿದೆ.

ಲಾಠಿಚಾರ್ಜ್‌ ಮಾಡಿದ ಸರ್ಕಾರದ ಕ್ರಮ ಖಂಡಿಸಿ ಡಿ.12ರಂದು ರಾಜ್ಯದಾದ್ಯಂತ ಹೋರಾಟ ಮಾಡಲು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ. ನಿನ್ನೆ ಸುವರ್ಣಸೌಧದ ಮುಂದೆ ನಡೆಯುತ್ತಿದ್ದ ಹೋರಾಟ ಹಿಂಸಾಚಾರಕ್ಕೆ ತಿರುಗಿತ್ತು.

ಮಂಗಳವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ನೀವು ಮಾಡಿದ ದಬ್ಬಾಳಿಕೆಯಿಂದ ಈ ಹೋರಾಟ ರಾಜ್ಯದಾದ್ಯಂತ ತೀವ್ರ ಸ್ವರೂಪ ಪಡೆಯಲಿದೆ. ತಡೆದು ತೋರಿಸಿ’ ಎಂದು ಸವಾಲು ಹಾಕಿದರು. ಅಲ್ಲದೇ ಅನಗತ್ಯವಾಗಿ ಲಾಠಿ ಚಾರ್ಜ್ ಮಾಡಿದ ಬೆಳಗಾವಿ ಪೊಲೀಸ್ ಆಯುಕ್ತ ಹಾಗೂ ಎಸ್ಪಿಯನ್ನು ಅಮಾನತು ಮಾಡಬೇಕೆಂದು ಅವರು ಒತ್ತಾಯಿಸಿದರು.

ಜಿಲ್ಲಾಡಳಿತ ಸ್ಪಷ್ಟನೆ

ಲಾಠಿಚಾರ್ಜ್ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ಐಜಿಪಿ, ಡಿಸಿ,‌ ಕಮಿಷನರ್ ತುರ್ತು ಜಂಟಿ ಸುದ್ದಿಗೋಷ್ಠಿ ನಡೆಸಿ ಲಾಠಿಚಾರ್ಜ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿಸಿ ಮೊಹ್ಮದ್ ರೋಷನ್, ‘2 ದಿನದ ಹಿಂದೆ ಪಂಚಮಸಾಲಿ ಹೋರಾಟದ ಅರ್ಜಿ ಇತ್ತು. ಅದರ ಮೇಲೆ ಜಿಲ್ಲಾಡಳಿತದಿಂದ ನಿರ್ಬಂಧ ವಿಧಿಸಿತ್ತು. ಡಿಸಿ ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಆದ್ರೆ, ನಿನ್ನೆ ಪಂಚಮಸಾಲಿ ಸ್ವಾಮೀಜಿ ಜೊತೆಗೆ ಸಭೆ ಮಾಡಿದ್ವಿ. ಇದರಲ್ಲಿ ಹೋರಾಟದ ಕುರಿತು ಚರ್ಚೆ ಮಾಡಲಾಗಿತ್ತು. ಹೋರಾಟಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದ್ವಿ. ಬೆಳಗಾವಿಗೆ ಹೋರಾಟಗಾರರು, ಮುಖಂಡರು ಬರಬಹುದು. ಇವರ ಮೇಲೆ ಯಾವುದೇ ನಿಷೇಧ ಇಲ್ಲ. ಶಾಂತಿಯುತವಾಗಿ ಹೋರಾಟ ನಡೆಸುವಂತೆ ಆದೇಶ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಪ್ರತಿಭಟಿಸಲು ಹೈಕೋರ್ಟ್​ ಆದೇಶ ಇದ್ದು, ಹೈಕೋರ್ಟ್ ಆದೇಶವನ್ನ ನಾವು ಪಾಲನೆ ಮಾಡಿದ್ದೇವೆ. ಲಾಠಿಚಾರ್ಜ್ ವಿಚಾರದಲ್ಲಿ ಹೈಕೋರ್ಟ್ ಆದೇಶ ಪಾಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: BY Vijayendra: ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ; ಬಿ.ವೈ.ವಿಜಯೇಂದ್ರ ಬೆಂಬಲ